ವಿಜಯಪುರ: ವಿಧಾನ ಪರಿಷತ್ತಿಗೆ ವಿಜಯಪುರದ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಅವಿರೋಧ ಆಯ್ಕೆ ತಪ್ಪಲು ಕಾರಣವನ್ನು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಬಿಚ್ಚಿಟ್ಟಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ವಾಪಸ್ ಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ತಮಗೆ ಕರೆ ಮಾಡಿದ್ದರು. ಮಾಜಿ ಡಿಸಿಎಂ ಗಳಾದ ಗೋವಿಂದ ಕಾರಜೋಳ ಮತ್ತು ಲಕ್ಷ್ಮಣ ಸವದಿ ಕೂಡ ಕರೆ ಮಾಡಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದರು. ಆದರೆ, ನಾನು ಮತದಾರರಿಗೆ ನೀಡಿದ್ದ ಭರವಸೆಯಂತೆ ಚುನಾವಣೆ ಕಣದಲ್ಲಿ ಉಳಿದಿದ್ದೇನೆ ಎಂದು ಅವರು ತಿಳಿಸಿದರು.
ಸ್ಪರ್ಧೆಗೆ ಕಾರಣ ಬಿಚ್ಚಿಟ್ಟ ಎಂ. ಎಸ್. ಲೋಣಿ
ಸಿದ್ಧರಾಮಯ್ಯ ಸಿಂದಗಿ ಬೈ ಎಲೆಕ್ಷನ್ ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ನನಗೆ ವಿಧಾನ ಪರಿಷತ್ ಟಿಕೆಟ್ ನೀಡುವಂತೆ ಕೇಳಿದ್ದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನವನ್ನೂ ಕೇಳಿದ್ದೆ. ವಿಧಾನ ಪರಿಷತ್ತಿಗೆ ಎಸ್. ಆರ್. ಪಾಟೀಲ ಅವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಬಗ್ಗೆ ಒಂದೆರಡು ದಿನಗಳಲ್ಲಿ ತಿಳಿಸುವುದಾಗ ಸುಮ್ಮನಾದರು. ಆಗ ನಾನು ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದೆ. ಆ ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಕಣದಲ್ಲಿ ಉಳಿದಿದ್ದೇನೆ ಎಂದು ಮಲ್ಲಿಕಾರ್ಜುನ ಎಸ್. ಲೋಣಿ ತಿಳಿಸಿದರು.
ನಾನು ನಾಮಪತ್ರ ಹಿಂಪಡೆದರೆ ಉಳಿದ ಪಕ್ಷೇತರರೂ ನಾಮಪತ್ರ ಹಿಂಪಡೆಯುತ್ತಾರೆ. ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಒ ನಾಯಕರು ಹೇಳಿದ್ದರು. ಆದರೆ, ನಾನು ಅವಿರೋಧ ಆಯ್ಕೆ ತಪ್ಪಿಸಲು ಕಣದಲ್ಲಿ ಉಳಿದಿದ್ದೇನೆ ಎಂದು ಅವರು ತಿಳಿಸಿದರು.
ಎಸ್. ಆರ್. ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ಅವರೂ ನಾಮಪತ್ರ ಹಿಂಪಡೆಯುವಂತೆ ಕರೆ ಮಾಡಿದ್ದರು. ಆದರೆ, ನಾನು ಮತದಾರರಿಗೆ ನೀಡಿದ ಭರವಸೆಯಂತೆ ಕಣದಲ್ಲಿ ಉಳಿದಿದ್ದೇನೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಮತದಾರರು ವಿಧಾನ ಪರಿಷತ್ತಿಗೆ ಮತ ಚಲಾಯಿಸಲು ಅವರ ಹಕ್ಕು ಒದಗಿಸಿದ್ದೇನೆ ಎಂದು ಅವರು ತಿಳಿಸಿದರು.
ಸೋಲ್ತೀನೋ? ಗೆಲ್ತೀನೋ? ಗೊತ್ತಿಲ್ಲ. ಅದರ ಎಲ್ಲ ಕ್ರೆಡಿಟ್ ಮತದಾರರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
ನಾನು ನಾಮಪತ್ರ ವಾಪಸ್ ಪಡೆಯುವಂತೆ ಹಲವರು ಕರೆ ಮಾಡಿದ್ದಾರೆ. ಬೆದರಿಕೆ ಇರುವ ಹಿನ್ನೆಲೆಯಲ್ಲಿ ಪೊಲೀಸರಿಂದ ಭದ್ರತೆ ಕೇಳುತ್ತಿದ್ದೇನೆ. ಅಖಂಡ ವಿಜಯಪುರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿ ಈ ಮುಂಚೆ ಕೆಲಸ ಮಾಡಿದ್ದೇನೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆಗಳ ಅರಿವಿದೆ ಎಂದು ವಿಧಾನ ಪರಿಷತ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಎಸ್. ಲೋಣಿ ತಿಳಿಸಿದರು.
ಈ ಸಂದರ್ಭದಲ್ಲಿ ಈ ಮುಖಂಡರಾದ ಬೀರಪ್ಪ ಪೂಜಾರಿ, ಎಂ. ಎಸ್. ಪಠಾಣ, ರಾಜುಗೌಡ ಪಾಟೀಲ,
ಝಾಕೀರ್ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.