ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ- ಸಿಎಂ ಬದಲಾವಣೆ ಊಹಾಪೋಹಕ್ಕೆ ಉತ್ತರಿಸಲ್ಲ- ಸಚಿವ ಗೋವಿಂದ ಕಾರಜೋಳ

ವಿಜಯಪುರ: ಕಾಂಗ್ರೆಸ್ ನಲ್ಲಿ ಅಸಮಧಾನ ಬುಗಿಲೆದ್ದಿದೆ.  ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.  ಬಿಜೆಪಿಯಲ್ಲಿ ಬಂಡಾಯ ಇಲ್ಲ.  ಕಾಂಗ್ರೆಸ್ ಗೆ ಬಂಡಾಯದಿಂದ ಹಿನ್ನಡೆಯಾಗಲಿದೆ.  ಕಾಂಗ್ರೆಸ್ ಇನ್ನು ಹಳೆ ಸ್ಟೈಲ್ ನಲ್ಲಿದ್ದಾರೆ.  ದಲಿತರು ಈಗಲು ಓಟ್ ಬ್ಯಾಂಕ್ ಎಂದು ಕಾಂಗ್ರೆಸ್ಸಿಗರು ಎಂದುಕೊಂಡಿದ್ದಾರೆ.  ಮುಂದಿನ‌ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ.  ಪ್ರಧಾನಿ ಹೇಳಿದಂತೆ ಆಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. 

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಇಲ್ಲ.  ಊಹಾಪೋಹಗಳಿಗೆ ಉತ್ತರ ಕೊಡಲ್ಲ.  ಈಗ ಪ್ರವಾಹ, ಕೊರೊನಾ ನಿರ್ವಹಣೆಗೆ ಆದ್ಯತೆ ನೀಡುತ್ತಿದ್ದೇವೆ.  ನಾಯಕತ್ವ ವಿಚಾರಕ್ಕೆ ಆದ್ಯತೆ ನೀಡುತ್ತಿಲ್ಲ ಎಂದು  ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೊಮ್ಮಾಯಿ ಪ್ರವಾಹ ಮತ್ತು ಕೊರೊನಾದಂಥ ಕಠಿಣ ಪರಿಸ್ಥಿತಿಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದ ಸ್ಪಷ್ಟಪಡಿಸಿದರು.

ನಿರಾಣಿ ಸಿಎಂ ಆಗ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗ ಕೊರೊನಾ ಮತ್ತು ಪ್ರವಾಹದಂತ ಸಂಕಷ್ಟದಲ್ಲಿದ್ದೇವೆ.  ನಾಯಕತ್ವದ ವಿಚಾರಕ್ಕೆ ಹೋಗೋದು ಸರಿಯಲ್ಲ.  ಆ ವಿಷಯ ಬಿಟ್ಟು ಹಾಕಿ.  ನಾನು ಇಲ್ಲಿ ಮಾತನಾಡಿದರೆ ಅದು ಈಶ್ವರಪ್ಪ ಅವರಿಗೆ ತಲುಪುತ್ತದೆ ಬಿಡಿ ಎಂದು ಮಾರ್ಮಿಕವಾಗಿ ಈಶ್ವರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನು ಗೆಲ್ಲಲಿದೆ.  ವಿಜಯಪುರ ದ್ವಿಸದಸ್ಯ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಆಯಾಸವಿಲ್ಲದೆ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ತಮಗೆ ಬೆದರಿಕೆ ಇದೆ ಎಂದು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಿಂದ ಲೋಣಿ ಅವರಿಗೆ ಬೆದರಿಕೆ ಹಾಕಿಲ್ಲ.  ಬೆದರಿಕೆ ಅನ್ನೋದು ಸುಳ್ಳು.  ನಾಮಪತ್ರ ವಾಪಸ್ ತೆಗೆದುಕೊಳ್ಳಲು ಲೋಣಿಗೆ ಮನವಿ ಮಾಡಿದ್ದೇವೆ.  ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ನಾನು ಸೇರಿ ಮಲ್ಲಿಕಾರ್ಜುನ ಲೋಣಿ ಅವರ ಮನವೊಲಿಕೆಗೆ ಯತ್ನಿಸಿದ್ದೇವೆ.  ಆದರೆ, ಯಾವುದೇ ಬೆದರಿಕೆ ಹಾಕಿಲ್ಲ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಧನೆಗಳನ್ನು ಜನರ ಮುಂದಿಟ್ಟು ಚುನಾವಣೆಗೆ ಇಳಿದಿದ್ದೇವೆ.  ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯ, ರಾಮರಾಜ್ಯದ ಕನಸನ್ನು ಕಾಂಗ್ರೆಸ್ ನನಸು ಮಾಡಿಲ್ಲ.  ಬಹುತೇಕ ಪಂಚಾಯಿತಿ ಸದಸ್ಯರು ಬಿಜೆಪಿ ಬೆಂಬಲಿತರೇ ಇದ್ದಾರೆ.  ಹೀಗಾಗಿ ನಮಗೆ ಎಂ ಎಲ್ ಸಿ ಚುನಾವಣೆ ಕಷ್ಠ ಆಗುವುದಿಲ್ಲ.  ಈ ಬಾರಿ ನೂರಕ್ಕೆ ನೂರರಷ್ಟು ನಾವು 15 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ತಿಳಿಸಿದರು.

ಜಲಜೀವನ ಮಿಷನ್ ಅಡಿಯಲ್ಲಿ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ಈಗಾಗಲೇ 700ಕೋಟಿ ಬಂದಿದೆ, ಕಾಮಗಾರಿ ಪ್ರಗತಿಯಲ್ಲಿದೆ.  ಜನತೆಗೆ ಶುದ್ದ ಕುಡಿಯುವ ನೀರು ಕೊಡುವಲ್ಲಿ, ಬಿಜೆಪಿ ಸರ್ಕಾರ ಪ್ರಗತಿ ಸಾಧಿಸಿದೆ.  ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 4300 ಪಂಚಾಯಿತಿ ಸದಸ್ಯರ ಬಲ ಬಿಜೆಪಿಗೆ ಇದೆ ಎಂದು ಅವರು ತಿಳಿಸಿದರು.

ಕಮಿಷನ್ ದಂಧೆ ಬಗ್ಗೆ ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಗೋವಿಂದ ಕಾರಜೋಳ, ಅವರು ಆರೋಪ ಮಾಡಿದ್ದಾರೆ, ಸಿಎಂ ತನಿಖೆಗೆ ಆದೇಶ ನೀಡಿದ್ದಾರೆ.  ರಿಪೋರ್ಟ್ ಬಂದಮೇಲೆ ಎಲ್ಲ ಗೊತ್ತಾಗುತ್ತೆ.  ಸ್ವಾತಂತ್ರ್ಯ ಬಂದಾಗಿನಿಂದಲೂ ತನಿಖೆ ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಸೋಮನಗೌಡ ಪಾಟೀಲ, ರಮೇಶ ಭೂಸನೂರ, ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ಮಾಜಿ ಎಂ ಎಲ್ ಸಿ ಜಿ. ಎಸ್. ನ್ಯಾಮಗೌಡ, ಬಿಜೆಪಿ ಬೆಳಗಾವಿ ವಿಭಾಗೀಯ ಮುಖಂಡ ಚಂದ್ರಶೇಖರ ಕವಟಗಿ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌