ಮಳೆಯಿಂದ ದ್ರಾಕ್ಷಿ, ತೊಗರಿ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಎಂ. ಬಿ. ಪಾಟೀಲ ಭೇಟಿ

ವಿಜಯಪುರ: ಹವಾಮಾನ ವೈಪರಿತ್ಯದಿಂದ ಸುರಿದ ಮಳೆಯಿಂದ ಹಾನಿಗಿಡಾದ ದ್ರಾಕ್ಷಿ ಮತ್ತು ತೊಗರಿ ಬೆಳೆಗಾರರ ತೋಟಗಳಿಗೆ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಕೆಲವು ದಿನಗಳಿಂದ ಆಗಾಗ ಸುರಿದ ತುಂತುರು ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ದ್ರಾಕ್ಷಿ ಮತ್ತು ತೊಗರಿ ಬೆಳೆ ಹಾನಿಯಾಗಿವೆ. ಈ ಹಿನ್ನೆಲೆಯಲ್ಲಿ ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ ಟಕ್ಕಳಕಿ, ಕಳ್ಳಕವಟಗಿ, ಬಾಬಾನಗರ, ತಾಜಪುರ, ತಿಕೋಟಾ ಹಾಗೂ ನಿಡೋಣಿ ಸುತ್ತಲಿನ ಗ್ರಾಮಗಳಿಗೆ ಶಾಸಕ ಎಂ.ಬಿ.ಪಾಟೀಲ ಭೇಟಿ ನೀಡಿ ದ್ರಾಕ್ಷಿ ಮತ್ತು ತೊಗರಿ ಬೆಳೆ ಹಾನಿಯ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳೆಹಾನಿ ಹಾನಿಯಾದ ಎಲ್ಲ ರೈತರಿಗೂ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ದ್ರಾಕ್ಷಿ ತೋಟಗಳಲ್ಲಿ ಹೂವುಗಳು ಉದುರಿ ನೆಲಕ್ಕೆ ಬಿದ್ದಿವೆ. ಮುಂಗಡ ಚಾಟ್ನಿ ಮಾಡಿದ ದ್ರಾಕ್ಷಿ ಪಡಗಳು ಹಣ್ಣಾಗಿವೆ. ಅಂಥ ದ್ರಾಕ್ಷಿ ಪಡಗಳ ಕಾಯಿ ಮಾರಾಟವಾಗದೇ ಪಡದಲ್ಲೆ ಕೆಟ್ಟು ಹೋಗಿ ವಾಸನೆ ಬರಲಾರಂಭಿಸಿದೆ. ಇದರಿಂದ ಸಾಲಸೋಲ ಮಾಡಿದ ರೈತರಿಗೆ ಸಂಕಷ್ಟ ಎದುರಾಗಿದೆ. ಸರಕಾರದಿಂದ ನಮಗೆ ಪರಿಹಾರ ಒದಗಿಸಿ ಎಂದು ರೈತರು ಎಂ. ಬಿ. ಪಾಟೀಲ ಅವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಎಸ್. ಎಂ‌. ಬರಗಿಮಠ, ಎಚ್. ಎಸ್. ಪಾಟೀಲ, ತಾಲೂಕು ಸಹಾಯಕ ತೋಟಗಾರಿಕ ಅಧಿಕಾರಿ ಬಲರಾಮ ರಾಠೋಡ, ತಹಶೀಲ್ದಾರ ಎಂ. ಎಸ್. ಅರಕೇರಿ, ಎಂ. ಬಿ. ಪಾಟೀಲ ಫೌಂಡೇಶನ್ ನಿರ್ದೇಶಕರಾದ ಗುರಲಿಂಗ ಮಾಳಿ, ಸುಭಾಸ ಅಕ್ಕಿ, ಶಂಕರಗೌಡ ಬಿರಾದಾರ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟಿ, ತಮ್ಮಣ್ಣಾ ಹಂಗರಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ರೈತರಾದ ಪರಮೇಶ್ವರ ಗದ್ಯಾಳ, ಗಿರಮಲ್ಲಯ್ಯಾ ಮಠಪತಿ, ಮಧುಕರ ಜಾಧವ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌