ವಿಜಯಪುರ: ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕಿ ಜನರು ಸಮೃದ್ಧಿ ಮತ್ತು ನೆಮ್ಮದಿಯಿಂದ ಬಾಳುವಂತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಈ ಮೂಲಕ ಜನರ ಋಣ ತೀರಿಸುತ್ತೇನೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ಬಬಲೇಶ್ವರ, ವಿಜಯಪುರ ಮತ್ತು ನಾಗಠಾಣ ವಿಧಾನಸಭೆ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.ಈ ಹಿಂದೆ ಈ ಭಾಗಕ್ಕೆ ಹೆಣ್ಣು ಕೊಡಲು ಬೇರೆ ಭಾಗದವರು ಹಿಂಜರಿಯುತ್ತಿದ್ದರು. ಕುಡಿಯುವ ನೀರಿಗೆ ಅಷ್ಟೇ ಅಲ್ಲ ಬೆಳೆ ರಕ್ಷಣೆಗೆ ರೈತರು ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದರು. ಆದರೆ, ಗೆಜೆಟ್ ನೋಟಿಫಿಕೇಷನ್‍ಗೂ ಕಾಯದೆ ನೀರಾವರಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿದ್ದೇನೆ. ಈ ಮೂಲಕ ಸಿದ್ಧೇಶ್ವರ ಶ್ರೀಗಳ ಆಶಯದಂತೆ ನೀರಾವರಿ ಮಾಡಿದ್ದರಿಂದ ಈಗ ಬತ್ತಿ ಹೋಗಿರುವ ಕೊಳವೆ ಭಾವಿಗಳು ಕೂಡ ನೀರು ಬಂದಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಿಗೂ ದೊಡ್ಡ ಗೌರವ ಧನ ಸಿಗಬೇಕು ಎಂಬುದು ನನ್ನ ಆಶಯವಾಗಿದೆ. ಈ ಬಗ್ಗೆ ಕೆಳಮನೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದರು.
ಸಿಂಗಾಪೂರದಲ್ಲಿ ಭ್ರಷ್ಟಾಚಾರ ಕಡಿಮೆ ಇದೆ. ಅಲ್ಲಿ, ಪ್ರಧಾನ ಮಂತ್ರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ದೊಡ್ಡ ಮೊತ್ತದ ವೇತನವಿದೆ, ಹೀಗಾಗಿ ಅವರು ಕೈಯೊಡ್ಡುವ ಪ್ರಮೇಯವೇ ಬರುವುದಿಲ್ಲ. ಇದೇ ಮಾದರಿಯಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೂ ದೊಡ್ಡ ಮೊತ್ತದ ಗೌರವ ಧನ ಸಿಗುವಂತಾಗಬೇಕು ಎಂದು ಎಂ. ಬಿ. ಪಾಟೀಲ ಹೇಳಿದರು.
ಗ್ರಾಮ ಪಂಚಾಯಿತ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳ ಬಗ್ಗೆ ಧ್ವನಿಯಾಗಬೇಕು ಎಂದು ಸುನೀಲಗೌಡ ಪಾಟೀಲ ಅವರಿಗೆ ಹೇಳಿದ್ದೆ. ಅದರಂತೆ ಅವರು ಕೊರೊನಾ ಸಂಕಷ್ಟ ಸಮಯದಲ್ಲಿ ಎಲ್ಲ ಪಂಚಾಯಿತಿಗಳಿಗೆ ಸೆನೆಟೈಜರ್ ಮಷೀನ್ ವಿತರಣೆ, ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ ಬಗ್ಗೆ ಮೇಲ್ಮನೆಯಲ್ಲಿ ಧ್ವನಿ ಎತ್ತಿದ ಕಾರಣ ಸದನದಲ್ಲಿ ಈ ವಿಷಯವಾಗಿ ಚರ್ಚೆ ನಡೆದಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.
ಕೆಲವೊಬ್ಬರು ಸ್ವಾಭಿಮಾನ ಎನ್ನುತ್ತಾರೆ ಆದರೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ವೇತನ ಕೊಡುತ್ತಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯೊಬ್ಬರ ಹೆಸರು ಹೇಳದೇ ಟೀಕಿಸಿದ ಎಂ. ಬಿ. ಪಾಟೀಲ ಅವರು, ಅಂಥ ಅಭ್ಯರ್ಥಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸುನೀಲಗೌಡ ಪಾಟೀಲ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ, ಭಾರಿ ಅಂತರದಿಂದ ಗೆಲವು ಸಾಧಿಸಲು ಕೈಜೊಡಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರ ಗೆಲುವಿಗೆ ಗಾಣಿಗ ಸಮಾಜ ಕಂಕಣ ಬದ್ಧವಾಗಿದೆ. ಗಾಣಿಗ ಸಮುದಾಯದ ಪ್ರಗತಿಗೆ ಮಾಜಿ ಸಚಿವ ಎಂ.ಬಿ. ಪಾಟೀಲರು ನೀಡಿದ ಕೊಡುಗೆ ಅನನ್ಯ, ಮುಂದೊಂದು ದಿನ ಎಂ.ಬಿ. ಪಾಟೀಲರು ಮುಖ್ಯಮಂತ್ರಿ ಯಾಗುವುದು ನಿಶ್ಚಿತ. ಗಾಣಿಗ ಸಮುದಾಯ ಯಾರ ಬೆನ್ನಿಗೂ ಇಲ್ಲ, ಎಂ.ಬಿ. ಪಾಟೀಲರ ಬೆನ್ನಿಗಿದೆ. ಕೇವಲ ಒಂದೆರಡು ನೂರು ಮತಗಳನ್ನು ಪಡೆದು ಸಮಾಜಕ್ಕೆ ಅವಮಾನ ಮಾಡಬೇಡಿ. ನಾಮಪತ್ರ ಹಿಂಪಡೆಯಿರಿ ಎಂದು ನಾನು ಮಲ್ಲಿಕಾರ್ಜುನ ಲೊಣಿ ಅವರಿಗೆ ಮನವಿ ಮಾಡಿದ್ದೆ. ಆದರೆ ಅವರು ನಮ್ಮ ಮಾತು ಕೇಳಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮಾತನಾಡಿ, ಗ್ರಾಮ ಪಂಚಾಯತ ಸದಸ್ಯರಿಗೆ 3 ಸಾವಿರ ರೂ. ಗೌರವಧನ ಸಿಗುವವರೆಗೂ ನಾನು ವಿಶ್ರಮಿಸುವುದಿಲ್ಲ, ಇದಕ್ಕಾಗಿ ನಾನು ಹೋರಾಟಕ್ಕೂ ಸಿದ್ದ ಎಂದು ಹೇಳಿದರು.
ಗ್ರಾ. ಪಂ. ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಅನೇಕ ವರ್ಷಗಳಿಂದ ಪ್ರಯತ್ನಿಸಿರುವೆ, ಇಂದು ಪೆಟ್ರೋಲ್ ಬೆಲೆ ಗಗನಕ್ಕೇರಿದೆ, ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಾಭಿವೃದ್ಧಿಗಾಗಿ ಕೇಂದ್ರ ಸ್ಥಾನಕ್ಕೆ ಬರಲು ಸಾವಿರಾರು ರೂ. ಖರ್ಚಾಗುತ್ತದೆ, ಹೀಗಾಗಿ ಈ ಗೌರವ ಧನ ಸಾಕಾಗುವಿದಲ್ಲ, ಹೀಗಾಗಿ ಕನಿಷ್ಟ 3 ಸಾವಿರ ರೂ. ಗೌರವ ಧನ ನೀಡಿ ಎಂದು ಮನವಿ ಮಾಡಿಕೊಂಡಿರುವೆ, 3 ಸಾವಿರ ರೂ.ಗೌರವ ಧನ ನೀಡುವವರೆಗೂ ನಾನು ವಿಶ್ರಮಿಸುವುದಿಲ್ಲ, 93 ಸಾವಿರ ಗ್ರಾ.ಪಂ. ಸದಸ್ಯರ ಪರವಾಗಿ ನಾನು ಹೋರಾಟ ಮಾಡುವೆ, ಜನಪ್ರತಿನಿಧಿಗಳ ಮಾದರಿಯಲ್ಲಿ ಗ್ರಾ.ಪಂ. ಸದಸ್ಯರಿಗೂ ಒದಗಿಸುವಂತೆಯೂ ಧ್ವನಿ ಎತ್ತಿದ್ದೇನೆ ಎಂದು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ಪ್ರದೇಶಾಭಿವೃದ್ಧಿ ನಿಧಿಯನ್ನು ಸ್ಥಳೀಯವಾಗಿಯೇ ಬಳಕೆ ಮಾಡಲು ಹೊಸ ಮಾರ್ಗ ಕಂಡುಕೊಂಡು ಆ ಅನುದಾನದಲ್ಲಿಯೇ ಮೂರು ಅಶ್ವ ಶಕ್ತಿ ಸಾಮರ್ಥ್ಯ ದ ಸೆನೆಟೈಜರ್ ಮಷೀನ್ ಒದಗಿಸಿದೆ, ಗ್ರಾ.ಪಂ. ಸದಸ್ಯರ ಅಹವಾಲನ್ನು ಹಾಗೂ ಅವರು ನನ್ನ ಗಮನಕ್ಕೆ ತಂದ ಎಲ್ಲ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಆಲಿಸಿ ಸ್ಪಂದಿಸಿದ್ದೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ಗ್ರಾ.ಪಂ. ಸದಸ್ಯರ ಗೌರವ ಧನ ಹೆಚ್ಚಳ, ಉಚಿತ ಬಸ್ ಪಾಸ್ ಒದಗಿಸುವಿಕೆ ಹೀಗೆ ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆ ಗಳ ಪ್ರತಿನಿಧಿಗಳ ಪರವಾಗಿ ಮೇಲ್ಮನೆಯಲ್ಲಿ ಪ್ರಬಲವಾಗಿ ಧ್ವನಿ ಎತ್ತಿದ್ದಾರೆ, ಈ ರೀತಿಯ ಸೇವಾ ಮನೋಭಾವದ ಸುನೀಲಗೌಡರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕು ಎಂದು ಕರೆ ನೀಡಿದರು.
ನಾಗಠಾಣ ಮಾಜಿ ಶಾಸಕ ವಿಠ್ಠಲ ಕಟಕಧೊಂಡ ಮಾತನಾಡಿ, ಸುನೀಲಗೌಡರು ಹೊಸ ದಾಖಲೆ ಬರೆಯುವಂತೆ ಹೆಚ್ಚಿನ ಅಂತರದಿಂದ ಅವರಿಗೆ ಆಶೀರ್ವಾದ ನೀಡಬೇಕು ಎಂದು ಕೋರಿದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಯೂ ಸುನೀಲಗೌಡರ ಸೇವೆ ಅನನ್ಯ. ಈ ಎಲ್ಲ ಸೇವೆ ಪರಿಗಣಿಸಿ ಹೆಚ್ಚಿನ ಮತಗಳ ಅಂತರದಿಂದ ಸುನೀಲಗೌಡರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.
ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರು ಜಾತ್ಯತೀತ ನಾಯಕಾರಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಸಹೋದರ ಸುನೀಲಗೌಡ ಪಾಟೀಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅವರಿಗೆ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಅವರು ತಮಗೆ ಸಿಕ್ಕ ಅರ್ಧ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಮುಂಬರುವ ಆರು ವರ್ಷಗಳ ಕಾಲ ಇನ್ನೂ ಉತ್ತಮ ಕೆಲಸ ಮಾಡಲು ಅವಕಾಶ ನೀಡಬೇಕು. ಗ್ರಾ.ಪಂ. ಸದಸ್ಯರ ಆತ್ಮಗೌರವದ ಪ್ರತಿನಿಧಿಯಾಗಿ ಸುನೀಲಗೌಡರು ಕಣದಲ್ಲಿದ್ದಾರೆ. ಅವರಿಗೆ ತಮ್ಮ ಮೊದಲ ಪ್ರಾಶಸ್ತ್ರಯದ ಮತವನ್ನು ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ ಸುನೀಲಗೌಡ ಪಾಟೀಲ ಅವರು ಕಾರ್ಯವೈಖರಿಯನ್ನು ಶ್ಲಾಘಿಸಿದರು. ಅಲ್ಲದೇ, ಎಲ್ಲರೂ ಜಾತ್ಯತೀವಾಗಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರಾದ ಸುಜಾತಾ ಕಳ್ಳಿಮನಿ, ಅರ್ಜುನ ರಾಠೋಡ, ವಿ.ಎಸ್. ಪಾಟೀಲ, ಕಾಂಗ್ರೆಸ್ ಮುಖಂಡರಾದ ಡಿ.ಎಲ್.ಚವ್ಹಾಣ, ಎಚ್.ಎಸ್. ಕೋರಡ್ಡಿ, ಚಂದ್ರಶೇಖರ ಅರಕೇರಿ, ಸಿದ್ದು ಗೌಡನವರ, ಜಮೀರ ಭಕ್ಷಿ, ಭಾಗೀರಥಿ ತೇಲಿ, ಸಂಗಮೇಶ ಬಬಲೇಶ್ವರ, ಯಾಕೂಬ್ ಜತ್ತಿ, ಷಹಜಾನ್ ಮುಲ್ಲಾ, ಕಾಂತಾ ನಾಯಕ, ವಿದ್ಯಾರಾಣಿ ತುಂಗಳ, ಶ್ರೀದೇವಿ ಉತ್ಲಾಸರ, ಬಸವರಾಜ ದೇಸಾಯಿ ಜೈನಾಪೂರ, ಪ್ರಫುಲ್ ಮಂಗಾನವರ, ಚೆನ್ನಪ್ಪ ಕೊಪ್ಪದ, ಎಚ್.ಆರ್. ಬಿರಾದಾರ, ತಮ್ಮಣ್ಣ ಹಂಗರಗಿ, ಸುಭಾಷಗೌಡ ಪಾಟೀಲ ಕನಮಡಿ, ಸಾಹೇಬಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಘಟಕದ ನಾನಾ ಪದಾಧಿಕಾರಿಗಳು ಉಪಸ್ಥಿತರಿದ್ದರು.