ಸುನೀಲಗೌಡ ಪಾಟೀಲ ಚುನಾವಣೆ ರಾಜಕೀಯಕ್ಕೆ ಬರಲು ಕಾರಣವನ್ನು ಬಿಚ್ಚಿಟ್ಟ ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ತಮ್ಮ ಸಹೋದರ ಮತ್ತು ವಿಧಾನ ಪರಿಷತ ಸದಸ್ಯ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರನ್ನು ರಾಜಕೀಯಕ್ಕೆ ಕರೆತರಲು ಇಷ್ಟವಿರಲಿಲ್ಲ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ವಿಧಾನ ಪರಿಷತ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಸಹೋದರ ರಾಜಕೀಯಕ್ಕೆ ಬರಲು ಏನು ಕಾರಣ ಎಂಬುದನ್ನು ಬಹಿರಂಗ ಪಡಿಸಿದರು.

2018ರಲ್ಲಿ ಯತ್ನಾಳ ರಾಜೀನಾಮೆಯಿಂದಾಗಿ ವಿಧಾನ ಪರಿಷತ್ತಿಗೆ ಬೈ ಎಲೆಕ್ಷನ್ ನಡೆದಿತ್ತು.  ಈ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ ಅವರ್ನನು ಕಣಕ್ಕಿಳಿಸುವ ಆಸೆಯೂ ನನ್ನದಾಗಿರಲಿಲ್ಲ.  ಅಲ್ಲದೇ, ಆ ಚುನಾವಣೆ ನಡೆಯುವಾಗ ಸದಸ್ಯತ್ವದ ಅವಧಿ ಕೇವಲ ಮೂರು ವರ್ಷ ಮಾತ್ರ ಬಾಕಿ ಇತ್ತು.  ಮನೆಯಲ್ಲಿ ಇಬ್ಬರು ರಾಜಕಾರಣ ಮಾಡುವುದು ಬೇಡ ಎಂದು ಹೇಳಿದ್ದೆ.  ಆದರೆ, ಮಾಜಿ ಸಚಿವ ಸಿ. ಎಸ್. ನಾಡಗೌಡ ಮತ್ತು ಕಾಂಗ್ರೆಸ್ ಪಕ್ಷ ಒತ್ತಾಯ ಮಾಡಿದ್ದರಿಂದ ಅವರನ್ನು ಚುನಾವಣೆ ಕಣಕ್ಕಿಳಿಸಿಲು ಅನಿವಾರ್ಯವಾಗಿ ಒಪ್ಪಿಗೆ ನೀಡಬೇಕಾಯಿತು.  ನಂತರ ಅವರು ರಾಜ್ಯದಲ್ಲಿಯೇ ಅತೀ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿದರು ಎಂದು ಎಂ. ಬಿ. ಪಾಟೀಲ ತಿಳಿಸಿದರು

 

ಈ ಬಾರಿ ಚುನಾವಣಗೆಯಲ್ಲಿ ಎಸ್. ಆರ್. ಪಾಟೀಲ ಮತ್ತು ಸುನೀಲಗೌಡ ಪಾಟೀಲ ಇಬ್ಬರಿಗೂ ಟಿಕೆಟ್ ನೀಡುವಂತೆ ಕೇಳಿದ್ದೇವು.  ಇಬ್ಬರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದ್ದೇವು.  ಸುನೀಲಗೌಡ ಪಾಟೀಲ ಅವರಿಗೆ ಮಾತ್ರ ಟಿಕೆಟ್ ಕೊಡಿ ಎಂದು ನಾವೇನೂ ಕೇಳಿರಲಿಲ್ಲ.  ಆದರೆ, ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಸುನೀಲಗೌಡ ಪಾಟೀಲ ಆಯ್ಕೆಯಾಗಿ ಮೂರು ವರ್ಷಗಳಲ್ಲಿ ಎರಡು ವರ್ಷ ಕೊರೊನಾ ಸಂಕಷ್ಟ ಸಮಯದಲ್ಲಿಯೇ ಕಳೆದು ಹೋಗಿದೆ.  ಉಳಿದ ಒಂದು ವರ್ಷದಲ್ಲಿ ತಮ್ಮ ಶಕ್ತಿಮೀರಿ ಕೆಲಸ ಮಾಡಿದ್ದಾರೆ.  ಈ ಬಾರಿಯೂ ಆಯ್ಕೆಯಾದ ಬಳಿಕ ಅವರು ಕೆಲಸ ಮಾಡದಿದ್ದರೆ, ನಾನೇ ಅವರಿಗೆ ಮುಂದಿನ ಬಾರಿ ಟಿಕೆಟ್ ನೀಡಬೇಡಿ ಎಂದು ಹೇಳುತ್ತೇನೆ ಎಂದು ತಮ್ಮ ಸಹೋದರನಿಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಪರ ಕೆಲಸ ಮಾಡುವಂತೆ ಎಂ. ಬಿ. ಪಾಟೀಲ ಬಹಿರಂಗ ವೇದಿಕೆಯಲ್ಲಿಯೇ ತಾಕೀತು ಮಾಡಿದರು.

ಅಷ್ಟೇ ಅಲ್ಲ, ತಮ್ಮ ಸಹೋದರನಿಗೆ ಬರುವ ಶಾಸಕರ ಅನುದಾನದಲ್ಲಿ ಸಿಗುವ ಹಣವನ್ನು ಬಬಲೇಶ್ವರ ಮತಕ್ಷೇತ್ರ ಹೊರತು ಪಡಿಸಿ ಉಳಿದ 14 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೀಡುವಂತೆ.  ಅದರಲ್ಲಿಯೂ ಮುದ್ದೇಬಿಹಾಳ ತಾಲೂಕಿಗೆ ಹೆಚ್ಚಿಗೆ ಅನುದಾನ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಇದೇ ವೇಳೆ, ಸಿದ್ಧರಾಮಯ್ಯ ಸಿಎಂ ಆಗಿದ್ದಾಗ 15 ಲಕ್ಷ ಮನೆಗಳನ್ನು ಬಡವರಿಗೆ ನೀಡಿದ್ದೇವೆ. ಆದರೆ, ಈಗಿನ ಸರಕಾರದಲ್ಲಿ ಎರಡು ವರ್ಷವಾದರೂ ಒಂದೂ ಮನೆಗಳನ್ನು ನಿರ್ಮಿಸಿಲ್ಲ.  ಈ ಹಿಂದೆ ನಿರ್ಮಿಸಿದ ಮನೆಗಳು ಕೂಡ ನಾನಾ ಹಂತಗಳಲ್ಲಿ ಅರ್ಧಕ್ಕೆ ನಿಂತಿವೆ.  ಹಳೆಯ ಬಿಲ್ ಗಳೂ ಕೂಡ ಇನ್ನೂ ಬಿಡುಗಡೆಯಾಗಿಲ್ಲ.  ಪಂಚಾಯಿತಿ ರಾಜ್ ವ್ಯವಸ್ಥೆ ಬಗ್ಗೆ ಈ ಸರಕಾರ ತಾಳಿರುವ ನೀತಿಗೆ ಇದು ಸಾಕ್ಷಿಯಾಗಿದೆ.  ಮಹಾತ್ಮಾ ಗಾಂಧಿಯವರ ಕನಸು ಒಂದಾದರೆ, ಸಚಿವರ ಈಶ್ವರಪ್ಪ ಕನಸೇ ಬೇರೆಯೇ ಆಗಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ. ಎಸ್. ನಾಡಗೌಡ, ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ವಿಧಾನ ಪರಿಷತ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ಕಾಂತಾ ನಾಯಕ, ಕಾಂತಾ ನಾಯಕ, ಎಸ್. ಎಂ. ಪಾಟೀಲ ಗಣಿಹಾರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌