ವಿಪ ಚುನಾವಣೆ: ಅನಕ್ಷರಸ್ಥ, ಅಂಧ, ಅಸ್ವಸ್ಥ ಮತದಾರರು ಜೊತೆಗಾರರೊಬ್ಬರ ನೆರವು ಪಡೆಯಲು ಅವಕಾಶ- ಪಿ. ಸುನೀಲ ಕುಮಾರ

ವಿಜಯಪುರ: ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ನಡೆಯುವ ಚುನಾವಣೆ ಮತದಾನ ಸಂದರ್ಭದಲ್ಲಿ ಅನಕ್ಷರಸ್ಥ, ಅಂಧ ಹಾಗೂ ಅಸ್ವಸ್ಥ ಮತದಾರರೆ ಅವರು ಜೊತೆಗಾರರೊಬ್ಬರ ನೆರವು ಪಡೆಯಬಹುದಾಗಿದೆ ಎಂದು ವಿಜಯಪುರ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಸ್ಫರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಈ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮತ ಚಲಾಯಿಸಲು ಅನುಕೂಲವಾಗುವಂತೆ ಅನಕ್ಷರಸ್ಥ, ಅಂಧ ಹಾಗೂ ಅಸ್ವಸ್ಥ ಮತದಾರರು ತಮಗೆ ನೆರವಾಗಲು ಓರ್ವ ಜೊತೆಗಾರರನ್ನು ಪಡೆಯಬಹುದಾಗಿದೆ.  ಈ ಕುರಿತು ಮತದಾನ ನಡೆಯುವ ಮೂರು ದಿನಗಯಲ ಮುಂಚಿತವಾಗಿ ಚುನಾವಣೆ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕು.  ಇದೇ ಡಿ. 6 ನೇ ತಾರಿಖಿನ ಸಂಜೆಯೊಳಗಾಗಿ ಇಂಥ ಮನವಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಅದರಂತೆ ಮತದಾರರಿಗೆ ನೆರವಾಗುವ ಸಂಬಂಧಪಟ್ಟ ಜೊತೆಗಾರರು ಇನ್ನೊಬ್ಬ ಸದಸ್ಯರಿಗೆ ಅಥವಾ ಮತದಾರರಿಗೆ ಜೊತೆಗಾರ ಆಗಲು ಬರುವುದಿಲ್ಲ.  ಮತದಾರರನ್ನು ಗುರುತಿಸಲು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಥವಾ ಕಾರ್ಯದರ್ಶಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮತಗಟ್ಟೆಗಳಲ್ಲಿ ಆಯಾ ಮುಖ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ.  ಮತದಾರರಿಗೂ ಸಹ ಮತದಾನದ ವಿಧಾನಗಳನ್ನು ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ.  ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳು ಕೂಡ ಈ ಕುರಿತು ಸಂಬಂಧಿಸಿದ ಮತದಾರರಲ್ಲಿ ಅರಿವು ಮೂಡಿಸುವ ಜೊತೆಗೆ ಚುನಾವಣೆ ನಿಯಮಾವಳಿಗಳನ್ನು ಪಾಲಿಸಬೇಕು.  ಮತ ಚಲಾಯಿಸುವ ಮತದಾರರು ತಪ್ಪದೇ ಕೋವಿಡ್-19 ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದರು.

 

ಮತದಾನ ಸಂದರ್ಭದಲ್ಲಿ ಮತದಾರರು ವೋಟರ್ ಕಾರ್ಡ್, ಇತರೆ ಗುರುತಿನ ಚೀಟಿ ಅಥವಾ ಸ್ಥಳೀಯ ಸಂಸ್ಥೆಗಳಿಂದ ಸದಸ್ಯರೆಂದು ನೀಡಲಾಗುವ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಲು ಅವಕಾಶ ಇದೆ.  ಬ್ಯಾಲೆಟ್ ಬಾಕ್ಸ್‍ದಲ್ಲಿ ಮತ ಚಲಾಯಿಸುವ ಮುಂಚಿತವಾಗಿ ವಿಶೇಷ ಗುರುತಿನ ಸೂಚ್ಯಾಂಕ (ಡಿಸ್ಟಿಂಗ್ವೀಶ್ ಮಾಕ್ರ್ಸ ಸೀಲ್)ನ್ನು ಪೋಲಿಂಗ್ ಆಫೀಸ್ ಇನಚಾರ್ಜ್ ಅವರಿಗೆ ತೋರಿಸಿ ಮತ ಚಲಾಯಿಸಬಹುದಾಗಿದೆ.  ಮತದಾನದ ಗೌಪ್ಯತೆಯನ್ನು ಕಾಪಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಡಮ್ಮಿ ಬ್ಯಾಲೆಟ್ ಪೇಪರ್ ಮುದ್ರಿಸಲು ಅಭ್ಯಂತರವಿಲ್ಲ.  ಚುನಾವಣೆ ಆಯೋಗದ ಬ್ಯಾಲೆಟ್ ಪೇಪರ್‍ನ ಬಣ್ಣ ಮತ್ತು ಗಾತ್ರಕ್ಕೆ ಹೋಲಿಕೆಯಾಗಿರಬಾರದು.  ಅದರಂತೆ ಬಿಳಿ ಮತ್ತು ಗುಲಾಬಿ (ಪಿಂಕ್) ಬಣ್ಣ ಹೊರತುಪಡಿಸಿ ಬ್ರೌನ್, ಹಳದಿ ಹಾಗೂ ಗ್ರೇ ಬಣ್ಣದಲ್ಲಿ ಮುದ್ರಿಸುವ ಮೂಲಕ ಗೊಂದಲವನ್ನು ನಿವಾರಿಸಬಹುದಾಗಿದೆ.  ಡಮ್ಮಿ ಬ್ಯಾಲೆಟ್ ಪೇಪರ್‍ದಲ್ಲಿ ತಮ್ಮ ಸ್ಥಾನವನ್ನು ಗೊತ್ತು ಪಡಿಸಬಹುದಾಗಿದ್ದು, ಆದರೆ ಇತರೆ ಅಭ್ಯರ್ಥಿಗಳ ಅಧಿಕೃತ ಹೆಸರು ಮತ್ತು ಚಿಹ್ನೆಯನ್ನು ಬಳಸಕೂಡದು ಎಂದು ಪಿ. ಸುನೀಲ ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ಮತದಾರರಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳಿಂದ ಬಿಳಿ ಬಣ್ಣದ ಗುರುತಿನ ಚೀಟಿಗಳನ್ನು ನೀಡಬಹುದಾಗಿದ್ದು, ಅಭ್ಯರ್ಥಿಗಳ ಹೆಸರು, ಅಭ್ಯರ್ಥಿಯ ಪಕ್ಷ ಹಾಗೂ ಚಿಹ್ನೆ,  ಘೋಷಣೆ ಮತ್ತು ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಶೂನ್ಯ ಅವಧಿಯಲ್ಲಿ ಪ್ರಚಾರಕ್ಕೆ ಮತ್ತು ಮತದಾನಕ್ಕೆ ಆಮಿಷ ಒಡ್ಡುವಂತಹ ವಿಷಯ ಇರಬಾರದು.  ಮತದಾನ ಕೇಂದ್ರದ ಸುತ್ತಲಿನ 100 ಮೀಚರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಘೋಷಣೆ ಮತ್ತು ಮತದಾರರಿಗೆ ಆಮಿಷ ಒಡ್ಡುವಂತಹ ಗುರುತಿನ ಚೀಟಿ ಹಂಚುವುದು ಕಂಡುಬಂದಲ್ಲಿ ಚುನಾವಣಾ ಅಕ್ರಮ ಎಂದು ಪರಿಗಣಿಸಿ ಕಾನೂನಿನ ರೀತ್ಯ ಕ್ರಮ ಕೈಗೊಳ್ಳಲಾಗುವುದೆಂದು ಅವರು ಸೂಚನೆ ನೀಡಿದರು.

ಚುನಾವಣೆ ಮುಂಚಿತವಾಗಿ 48 ಅಥವಾ 72 ಗಂಟೆ ಶೂನ್ಯ ಅವಧಿ ಎಂದು ಪರಿಗಣಿಸಲಾಗುವುದು.  ಈ ಕುರಿತಂತೆ ಚುನಾವಣೆ ಆಯೋಗದ ನಿರ್ದೇಶನದ ಆಧಾರದ ಮೇಲೆ ಅವಧಿ ನಿಗದಿಯಾಗಲಿದೆ.  ಶೂನ್ಯ ಅವಧಿಯಲ್ಲಿ ಸಾಮೂಹಿಕ ಪ್ರಚಾರ ಅಂತ್ಯಗೊಳ್ಳಲಿದ್ದು, ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿರಲಿದೆ ಎಂದು ಪಿ. ಸುನೀಲ ಕುಮಾರ ತಿಳಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಚುನಾವಣೆಗೆ ಸಂಬಂಧಪಟ್ಟ ಮಾಹಿತಿ ನೀಡಿದರು. ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌