ವಿಜಯಪುರ: ಎಸ್ .ಆರ್. ಪಾಟೀಲರು ರಾಜ್ಯದ ಹಿರಿಯ ನಾಯಕರು, ಅವರಿಗೆ ದೊಡ್ಡಮಟ್ಟದ ಸ್ಥಾನಮಾನವನ್ನು ಪಕ್ಷ ನೀಡಲಿದೆ. ಸುನೀಲಗೌಡ ಪಾಟೀಲ ಅವರ ಗೆಲುವಿಗೆ ಎಸ್. ಆರ್. ಪಾಟೀಲ ಸಂಕಲ್ಪ ಮಾಡಿದ್ದಾರೆ, ಹೀಗಾಗಿ ನಮ್ಮಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಪ್ರಕಾಶ ರಾಠೋಡ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವುದೇ ಇಲ್ಲ, ಅವರನ್ನು ಕೂಡಲೇ ಕಾಂಗ್ರೆಸ್ಸಿನಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸುವೆ, ಈ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ ಗೆಲುವು ಶತಸಿದ್ಧ ಎಂದು ಹೇಳಿದರು.
ಯುಕೆಪಿ ರಾಷ್ಟ್ರೀಯ ಯೋಜನೆಯಾಗಿ ಘೋಸಿಸಲು ಆಗ್ರಹ
ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನೂ ರಾಷ್ಚ್ರೀಯ ಯೋಜನೆಯಾಗಿ ಅನುಷ್ಠಾನ ಮಾಡಬೇಕು ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಪ್ರಕಾಶ ರಾಠೋಡ ಆಗ್ರಹಿಸಿದ್ರಾರೆ.
ಸರಕಾರ ಈ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ, ಬಿಜೆಪಿ ಸರಕಾರ ವಿಜಯಪುರಕ್ಕೆ ಘೋರ ಅನ್ಯಾಯ ಮಾಡುತ್ತಿದೆ. ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ರೂ. 10 ಸಾವಿರ ಕೋ. ಅನುದಾನ ನೀಡುವ ಮೂಲಕ ಕಾಂಗ್ರೆಸ್ ಸರಕಾರ ಆದ್ಯತೆ ನೀಡಿತ್ತು, ಮಾಜಿ ಸಚಿವ ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಕೆರೆಗೆ ನೀರು ತುಂಬುವ ಯೋಜನೆ, ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ಹಸಿರು ಕ್ರಾಂತಿಯನ್ನು ಮಾಡಿದ್ದಾರೆ. ಆದರೆ, ಬಿಜೆಪಿ ಸರಕಾರ ಮಾತ್ರ ಈ ಯೋಜನೆಗಳಿಗೆ ಅನ್ಯಾಯ ಮಾಡಿದೆ, ಆದರೂ ಸಹ ಯಾವ ಮುಖವಿಟ್ಟುಕೊಂಡು ಮತ ಕೇಳುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಬರಗಾಲ ಜಿಲ್ಲೆ ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಆಗ್ರಹ
ಇದೇ ವೇಳೆ ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದರೆ, ಮತ್ತೋಂದೆಡೆ ಅತೀಯಾದ ಮಳೆಯಿಂದಾಗಿ ಅನ್ನದಾತರು ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪ್ರಕಾಶ ರಾಠೋಡ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚಾಂದಸಾಬ ಗಡಗಲಾವ, ಅಶೋಕ ರಾಠೋಡ, ಎಂ. ಎಸ್. ನಾಯಕ, ರಾಜು ಚವ್ಹಾಣ, ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.