ವಿಜಯಪುರ: ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ವಿಧಾನ ಪರಿಷತ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಸ್ಪಂದಿಸಿದ್ದು, ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ.
ಬಸವನ ಬಾಗೇವಾಡಿಯಲ್ಲಿ ವಿಧಾನ ಪರಿಷತ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಪರ ಮತ ಯಾಚಿಸಿದ ಅವರು, ಸುನೀಲಗೌಡ ಪಾಟೀಲ ಅವರು ತಮ್ಮ ಮೂರು ವರ್ಷದ ಅವಧಿಯಲ್ಲಿ ಸದನದಲ್ಲಿ ಧ್ವನಿ ಎತ್ತುವ ಮೂಲಕ ಸ್ಪಂದಿಸಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಮತದಾರರು ಸುನೀಲಗೌಡ ಪಾಟೀಲ ಅವರಿಗೆ ಮತ ನೀಡುವ ಮೂಲಕ ಅವರು ಮತ್ತೊಮ್ಮೆ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಆಡಳಿತ ನಡೆಸುವ ಸರಕಾ ಜನ ಸಾಮಾನ್ಯರಿಗೆ ಕನಿಷ್ಟ ಸೌಲಭ್ಯವನ್ನಾದರೂ ಕೊಡಬೇಕು. ಆದರೆ ರಾಜ್ಯದ ಬಿಜೆಪಿ ಸರಕಾರ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಕೊರೊನಾದಿಂದ ಮೃತಪಟ್ಟವರಿಗೆ ಬಿಜೆಪಿ ಸರಕಾರ ಪರಿಹಾರ ನೀಡಿಲ್ಲ. ಗ್ರಾ.ಪಂ ಗಳು ಸರಕಾರದ ಅನುದಾನಕ್ಕಾಗಿ ಕಾಯದೇ ಸ್ಥಳೀಯವಾಗಿ ಆದಾಯ ಕಂಡುಕೊಳ್ಳಬೇಕು. ಶೇ.100 ರಷ್ಟು ಕರ ವಸೂಲಿ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಜವಾಬ್ಧಾರಿ, ಅಧಿಕಾರವನ್ನು ಅರಿತುಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಇ ಸುನೀಲಗೌಡ ಪಾಟೀಲ ಮಾತನಾಡಿ, ತಮಗೆ ಸಿಕ್ಕ ಮೂರು ವರ್ಷದ ಅವಧಿಯಲ್ಲಿ ಎರಡು ವರ್ಷ ಲಾಕ್ ಡೌನ್ ಮಧ್ಯೆಯೂ ಶಕ್ತಿಮೀರಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಅಭಿವೃದ್ಧಿಗೆ ಪಕ್ಷವು ಕಂಕಣಬದ್ದವಾಗಿದೆ. ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಅವರು ಗ್ರಾ.ಪಂ ಗಳ ಅಭಿವೃದ್ಧಿಗೆ ಹಣದ ಕೊರತೆಯಾಗದಂತೆ ನೋಡಿಕೊಂಡಿದ್ದರು. ಬಸವನಬಾಗೇವಾಡಿ ಕ್ಷೇತ್ರದಲ್ಲಿ ಶಾಸಕ ಶಿವಾನಂದ ಪಾಟೀಲ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಮಾದರಿಯಾಗಿವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಯರನಾಳ ಗ್ರಾ.ಪಂ ಸದಸ್ಯ ಶ್ರೀಶೈಲ ವಾಲಿಕಾರ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬಸವನ ಬಾಗೇವಾಡಿ ಕಾಂಗ್ರೆಸ್ ಚುನಾವಾಣೆ ಉಸ್ತುವಾರಿ ಮಹಮ್ಮದರಫಿಕ ಟಪಾಲ ಎಂಜಿನಿಯರ್, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಧ್ಯಾರಾಣಿ ತುಂಗಳ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಕೊಲ್ಹಾರ ಬ್ಲಾಕ್ ಘಟಕದ ಅಧ್ಯಕ್ಷ ರಫೀಕ ಪಕಾಲಿ, ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ಸಿದ್ದಣ್ಣ ನಾಗಠಾಣ ಶೇಖರ ಗೊಳಸಂಗಿ, ಅಣ್ಣಾಸಾಹೇಬ ಪಾಟೀಲ, ರಮೇಶ ಸೂಳಿಭಾವಿ, ರಾಜುಗೌಡ ಪಾಟೀಲ, ಕಲ್ಲು ದೇಸಾಯಿ, ರಿಯಾಜ ಸಿದ್ದಕಿ, ಬಸಣ್ಣ ದೇಸಾಯಿ, ತಾನಾಜಿ ನಾಗರಾಳ, ಪ್ರಕಾಶಗೌಡ ಪಾಟೀಲ, ಮಂಜುಳಾ ಜಾಧವ, ಶ್ರೀದೇವಿ ಉತ್ಲಾಸರ ಇದ್ದರು.
ಕಾಂಗ್ರೆಸ್ ಬ್ಲಾಕ್ ಘಟಕದ ಪ್ರಧಾನ ಕಾರ್ಯದರ್ಶಿ ನಿರೂಪಿಸಿದರು, ಸಂಗಮೇಶ ಓಲೇಕಾರ ವಂದಿಸಿದರು.