ಸುನೀಲಗೌಡ ಪಾಟೀಲರನ್ನು ಗೆಲ್ಲಿಸಿ ಡಿ. 14 ರಂದು ವಿಜಯೋತ್ಸವ ಆಚರಿಸೋಣ- ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ಸುನೀಲಗೌಡ ಪಾಟೀಲ ಅವರನ್ನು ಗೆಲ್ಲಿಸಿ ಡಿ.14 ರಂದು ವಿಜಯೋತ್ಸವ ಆಚರಿಸೋಣ. ಅವರನ್ನು ಬೇಕಿರುವುದು ನಮ್ಮ ಧರ್ಮ ಎಂದು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದ್ದಾರೆ.

ಇಂಡಿಯಲ್ಲಿ ವಿಧಾನ ಪರಿಷತ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜಕಾರಣ ಬೇರೆ, ಹೃದಯ ಶ್ರೀಮಂತಿಕೆ ಬೇರೆ ಎಂಬುದು ಇಂಡಿ ಭಾಗದ ಜನರು ತೋರಿಸಿ ಕೊಟ್ಟಿದ್ದಾರೆ. ಇಂಡಿ ತಾಲೂಕಿನ 37 ಗ್ರಾ. ಪಂ. ಗಳಲ್ಲಿ 31 ಗ್ರಾ. ಪಂ. ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಎಲ್ಲ ಗ್ರಾ. ಪಂ. ಜನಪ್ರತಿನಿಧಿಗಳು, ಪುರಸಭೆ ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರಿಗೆ ಕಳೆದ ಬಾರಿಯಂತೆ ಪ್ರಾಶಸ್ತ್ಯದ ಮತ ನೀಡಿ ಭಾರಿ ಅಂತರದಿಂದ ಆಶಿರ್ವಾದ ಮಾಡಬೇಕು ಎಂದು ಶಾಸಕ ಹೇಳಿದರು.

 

ಈ ಭಾಗದಿಂದ ಎಸ್. ಆರ್. ಪಾಟೀಲ ಅವರಿಗೆ ನಾಲ್ಕು ಬಾರಿ ಗೆಲ್ಲಿಸಿ ಕಳುಹಿಸಿದ್ದೇವೆ. ಅವರಿಗೆ ಈ ಬಾರಿಯೂ ಅವಕಾಶ ಸಿಗಬೇಕು ಎಂಬುದು ನಮ್ಮೆಲ್ಲರ ಸದಾಶಯ ಆಗಿತ್ತು. ಓರ್ವ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮಾತ್ರ ಸ್ಪರ್ಧಿಸುತ್ತೇನೆ. ಇಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಸ್ಪರ್ಧಿಸುವುದಿಲ್ಲ ಎಂದು ಎಸ್. ಆರ್. ಪಾಟೀಲ ಅವರು ಹೇಳಿದ್ದರು. ಹೀಗಾಗಿ ಪಕ್ಷ ಸುನೀಲಗೌಡ ಪಾಟೀಲ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆ ನಮ್ಮದು ಎಂದು ಹೇಳಿದರು.

ಚುನಾವಣೆ ರಾಜಕಾರಣ ಕೆಳಮಟ್ಟದಿಂದ ಮಾಡಿರುವುದಿಲ್ಲ. ಸುನೀಲಗೌಡ ಪಾಟೀಲ ಅವರ ಮನೆತನದ ಋಣ ನಮ್ಮ ಮೇಲಿದೆ. ಅವರ ಅಣ್ಣನನ್ನು ಲೋಕಸಭೆ ಸದಸ್ಯ ಹಾಗೂ ತಮ್ಮನಿಗೆ ಎರಡನೇ ಬಾರಿ ಎಂ ಎಲ್ ಸಿ ಮಾಡುವ ಅವಕಾಶವನ್ನು ಶ್ರೀ ಶಾಂತೇಶ್ವರ ಕಲ್ಪಿಸಿಕೊಟ್ಟಿದ್ದಾನೆ. ತಾಲೂಕಿನ ಜನರ ಋಣ ಹಾಗೂ ಪಕ್ಷದ ಋಣ ನನ್ನ ಮೇಲಿದೆ. ಅದನ್ನು ತೀರಿಸುವ ಕೆಲಸ ನಿಷ್ಠೆಯಿಂದ ಮಾಡಲಾಗುತ್ತದೆ ಎಂದು ಅವರು ಹೇಳಿದರು.

2013 ಮತ್ತು 2018ರಲ್ಲಿ ಇಂಡಿ ತಾಲೂಕಿನ ಮತದಾರರು ಜಾತಿ ಲೆಕ್ಕಾಚಾರ ಬುಡಮೇಲು ಮಾಡಿ ನನ್ನನ್ನು ಅಭೂತಪೂರ್ವವಾಗಿ ಗೆಲ್ಲಿಸಿದ್ದಾರೆ. ಮುಂದಿನ 2023ರಲ್ಲಿ ಹಾಗೂ ಮುಂದೆಯೂ ಇಲ್ಲಿ ಇದೆ ನಡೆಯುತ್ತದೆ ಎಂದು ಹೇಳಿದರು.

2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಾಗ ಶೇ. 10 ಕಮಿಷನ್ ಸರಕಾರ ಎಂದು ಹೇಳಿದ್ದರು. ಆದರೆ, ಇಂದು ರಾಜ್ಯದಲ್ಲಿ ಶೇ.40 ರಷ್ಟು ಕಮಿಷನ್ ಆರೋಪ ಕೇಳಿ ಬರುತ್ತಿದೆ. ಇಂದು ಮೋದಿ ಹಾಗೂ ಶಾ ಅವರು ಇದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು ಶಾಸಕರು ಹೇಳಿದರು.

ಇದೊಂದು ಎಮರ್ಜನ್ಸಿ ಸರಕಾರ. ಇದನ್ನು ನಾನು ಹೇಳುತ್ತಿಲ್ಲ. ಲಾಲಕೃಷ್ಣ ಅಡ್ವಾನಿ, ಯಶವಂತಸಿನ್ಹಾ, ಸುಬ್ರಹ್ಮಣ್ಯಸ್ವಾಮಿ ಅವರೇ ಹೇಳಿದ್ದನ್ನು ನಾನು ನೇನಪಿಸಿದ್ದೇನೆ. ಇಂಥ ಸರಕಾರದಿಂದ ಏನು ಬಯಸಲು ಸಾಧ್ಯ? ಬಿಜೆಪಿ ಸರಕಾರ ಕೊನೆ ದಿನಗಳನ್ನು ಎಣಿಸುತ್ತಿದೆ. ಇನ್ನೊಂದು ಪಕ್ಷಕ್ಕೆ ಎಂ ಎಲ್ ಸಿ ಅಭ್ಯರ್ಥಿಯನ್ನು ನಿಲ್ಲಿಸಲು ಶಕ್ತಿ ಇಲ್ಲ. ಬ್ಲಾಕಮೇಲ್, ಬದ್ದತೆ ಇಲ್ಲದ ಪಕ್ಷ, ಕುಟುಂಬದ ಪಕ್ಷವಾಗಿದೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್‍ನಲ್ಲಿ ಸೇಕ್ಯೂಲರ್ ಎಂಬ ಪದ ಸೇರಿಸಿದ್ದಾರೆ. ಸೆಕ್ಯೂಲರ್ ಪದ ತಗೆದು ಹಾಕುವಂತೆ ಮಾಜಿ ಪ್ರಧಾನಿ ದೇವೆಗೌಡರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮಾತನಾಡಿ, ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆಗಳ ಪರ ಅಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ಇನ್ನೊಮ್ಮೆ ತಮ್ಮ ಮತವನ್ನು ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಯಶವಂತರಾಯಗೌಡ ಪಾಟೀಲ ಶಾಸಕರಾದ ಮೇಲೆ ಇಂಡಿ ಪಟ್ಟಣ ಸಾಕಷ್ಟು ಅಭಿವೃದ್ಧಿಯಾಗಿದೆ. ಜಿಲ್ಲಾ ಕೇಂದ್ರವಾಗಲು ಏನೆಲ್ಲ ಸೌಲಭ್ಯಗಳಿರಬೇಕೋ ಅದೆಲ್ಲ ಕೆಲಸಗಳು ಇಲ್ಲಿ ಆಗಿವೆ. ಸಿದ್ಧರಾಮಯ ಸರಕಾರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಯಶವಂತರಾಯಗೌಡ ಪಾಟೀಲ ಅವರು ವಿಧಾನ ಸಭೆಯಲ್ಲಿ ಮತ್ತು ನಾನು ವಿಧಾನ ಪರಿಷತ್ತಿನಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕೈಗೆ ಅಧಿಕಾರ ನೀಡಿದ್ದು ಕಾಂಗ್ರೆಸ್. ಇದನ್ನು ನೆನಪಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರಿಗೆ ಮತ ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಅವರು, ಇಂಡಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಇಂಡಿಯನ್ನು ಬಂಗಾರದ ಗಿಂಡಿಯನ್ನಾಗಿ ಮಾಡಿದ್ದಾರೆ. ಸುನೀಲಗೌಡ ಪಾಟೀಲ ವಿಧಾನ ಪರಿಷತ್ತಿನಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳ ಕುರಿತು ಧ್ವನಿ ಎತ್ತಿ ಜನಪರ ಕಾರ್ಯ ಮಾಡುತ್ತಿದ್ದಾರೆ. ಸುನೀಲಗೌಡ ಪಾಟೀಲ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

 

)

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಇಲಿಯಾಸ ಬೋರಾಮಣಿ, ರುಕ್ಮುದ್ದಿನ ತದ್ದೇವಾಡಿ, ಶ್ರೀಶೈಲ ಪೂಜಾರಿ, ಅಣ್ಣಪ್ಪ ಬಿದರಕೋಟಿ, ಗುರಣ್ಣಗೌಡ ಪಾಟೀಲ, ಸಂಬಾಜಿ ಮಿಸಾಳೆ, ಬಿ. ಎಂ. ಕೊರೆ, ಕಲ್ಲನಗೌಡ ಬಿರಾದಾರ, ಮುತ್ತಪ್ಪ ಪೋತೆ, ಶೇಖರ ನಾಯಕ, ಹಣಮಂತ ಖಂಡೆಕರ, ಭೀಮಣ್ಣ ಕವಲಗಿ, ಸದಾಶಿವ ಪ್ಯಾಟಿ,ಮಲ್ಲುಗೌಡ ಪಾಟೀಲ,ಸಿದ್ದನಗೌಡ ಬಿರಾದಾರ, ಜಟ್ಟೆಪ್ಪ ರವಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌