ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಸದಸ್ಯರೇ ಅಲ್ಲ- ಎಂ ಎಲ್ ಸಿ ಸುನೀಲಗೌಡ ಪಾಟೀಲರಿಗೆ ಮತ ನೀಡಿ- ಪ್ರೊ. ರಾಜು ಆಲಗೂರ

ವಿಜಯಪುರ: ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಹೇಳುತ್ತಿರುವ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಲೋಣಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನೂ ಕೂಡ ಹೊಂದಿಲ್ಲ. ಕಾಂಗ್ರೆಸ್ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಅವರು ಕಾಂಗ್ರೆಸ್ ಪಕ್ಷದ ಕಾರ್ಯಾಲಯಕ್ಕೂ ಬಂದಿಲ್ಲ ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ತೊ. ರಾಜು ಆಲಗೂರ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಪಕ್ಷೇತರ ಅಭ್ಯರ್ಥಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಆರೋಪಿಸಿದರು.

ಸ್ಥಳೀಯ ಸಂಸ್ಥೆಗಳಿಗೆ ಬಲ‌ ತುಂಬಿದ್ದು ಕಾಂಗ್ರೆಸ್. ಈ ಮೊದಲು ಸ್ವಾವಲಂಬನೆ ಇರದ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಸ್ವಾವಲಂಬನೆ ಇರಲಿಲ್ಲ. ಈ ವಿಷಯವನ್ನು ಮನದಟ್ಟು ಮಾಡಿಕೊಂಡ ಅಂದಿನ ಪ್ರಧಾನಿ ದಿ. ರಾಜೀವ ಗಾಂಧಿ ಅವರು ಗ್ರಾ. ಪಂ. ವ್ಯವಸ್ಥೆಗರ ಮೀಸಲಾತಿ‌ ಕಲ್ಪಿಸಿ ಈ ಎಲ್ಲ ಸಂಸ್ಥೆಗಳಿಗೆ ಹೊಸ ಚೈತನ್ಯ ತುಂಬಿದ್ದಾರೆ ಎಂದು ಅವರು ಹೇಳಿದರು.

ನಂತರ ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ಅವರು, ಒಂದು ಹೆಜ್ಜೆ ಮುಂದೆ ಹೋಗಿ ನರೇಗಾ ಯೋಜನೆ ಮೂಲಕ ವಿದ್ಯುತ್ ಬಿಲ್ ತುಂಬಲು ಸಾಮರ್ಥ್ಯ ಇಲ್ಲದ ಗ್ರಾಮಗಳು ಇಂದು ಆರ್ಥಿಕವಾಗಿ ಸಬಲವಾಗುವ ಕೆಲಸ ಮಾಡಿದರು. ಹೀಗಾಗಿ ಸ್ಥಳೀಯ ಸಂಸ್ಥೆಗಳ ನೈಜ ಕಾಳಜಿ ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್‌ಗೆ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರು ಕೊರೊನಾ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಸೆನೆಟೈನಿಸಿಂಗ್ ಮಷೀನ್ ನೀಡಿದ್ದಾರೆ. ಗ್ರಾ.‌ ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕಾಗಿ, ಪಿಂಚಣಿ ಸಭಲಭ್ಯ ಕಲ್ಲಿಸಲು, ಬಸ್ ಪಾಸ್ ಸೌಲಭ್ಯ ಒದಗಿಸಲು ವಿಧಾನ ಪರಿಷತ್ತಿನಲ್ಲಿ ಪ್ರಬಲವಾಗಿ ಧ್ವನಿ ಎತ್ತಿದ್ದಾರೆ. ಹೀಗೆ ಮೂರು ವರ್ಷಗಳ ಕಡಿಮೆ ಅವಧಿಯಲ್ಲಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುನೀಲಗೌಡ ಪಾಟೀಲ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕುವಂತೆ ಮನವಿ ಮಾಡಿದರು.

ಮಾಜಿ ಸಚಿವ ಎಂ. ಬಿ. ಪಾಟೀಲ ಅವರದು ಜಾತ್ಯಾತೀತ ಮನೋಭಾವದ ಕುಟುಂಬ. ದಲಿತ, ಅಲ್ಪಸಂಖ್ಯಾತ ಸಮುದಾಯದ ಅನೇಕ ನಾಯಕರನ್ನು ರಾಜ್ಯ ಮಟ್ಟದ ನಾಯಕರನ್ನಾಗಿ ಬೆಳೆಸಿದ ಕೀರ್ತಿ ಈ ಕುಟುಂಬಕ್ಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಂಗಮೇಶ ಬಬಲೇಶ್ವರ, ಸುರೇಶ ಘೊಣಸಗಿ, ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ಜಮೀರ್ ಭಕ್ಷಿ, ಪ್ರೊ. ಯಂಕಂಚಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌