ವಿಪ ಚುನಾವಣೆ: ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ- ಚಿಮ್ಮನಕಟ್ಟಿ ಅವರಿಗೆ ವಯಸ್ಸಾಗಿದೆ- ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ರಾಜ್ಯದಲ್ಲಿ ಸ್ಪರ್ಧಿಸಿರುವ ಎಲ್ಲ ವಿಧಾನ ಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ.  ಮೈಸೂರಿನಿಂದ ಹಿಡಿದು ಬೀದರ್ ವರೆಗೆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗ ಗೆಲುವು ಖಚಿತವಾಗಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಸದುದ್ದೇಶದಿಂದ ಪಂಚಾಯಿತಿ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ.  ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಅಧಿಕಾರದಲ್ಲಿದ್ದಾಗ ಹಳ್ಳಿಗಳ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದ್ದರು ಎಂದು ಅವರು ತಿಳಿಸಿದರು.

ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ವಿರುದ್ಧ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾಜಿ ಸಚಿವ ಬಿ. ಬಿ. ಚಿಮ್ಮನಕಟ್ಟಿ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚಿಮ್ಮನಕಟ್ಟಿಗೆ ವಯಸ್ಸಾಗಿದೆ,  ಹೀಗಾಗಿ ಮಾತಾಡುತ್ತಾರೆ.  ಆ ಭಾಗದ ಹಿರಿಯರು ಅಂತ ಸಿದ್ದರಾಮಯ್ಯನವರೇ ಮಾತನಾಡಲು ಅವಕಾಶ ಕೊಟ್ಟಿದ್ದರು.  ಬಿ. ಬಿ. ಚಿಮ್ಮನಕಟ್ಟಿ ಅವರಿಗೆ ಏನು ಮಾತನಾಡಬೇಕು ಅಂತ ಅರ್ಥವಾಗುವುದಿಲ್ಲ,  ನಮಗೂ, ನಿಮಗೂ ವಯಸ್ಸಾದರೇ ಹೀಗೆ ಆಗುತ್ತೆ,  ಚಿಮ್ಮನಕಟ್ಟಿ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಎಂ, ಬಿ, ಪಾಟೀಲ ಹೇಳಿದರು.

ಇದೇ ವೇಳೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಮಾಡದಿರುವುದಕ್ಕೆ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು, ಸೋಲಿನ ಭಯದ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಮುಂದೂಡಿದೆ.  ಬಿಜೆಪಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಜಯಪುರ ವಿಧಾನ ಪರಿಷತ್ ಕ್ಷೇತ್ರಕ್ಕೆ ಒಂದೇ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೇಟ್ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಬ್ಬರಿಗೆ ಟಿಕೇಟ್ ನೀಡಲು ಪಕ್ಷಕ್ಕೆ ಮನವಿ ಮಾಡಿದ್ದೇವು.  ಆದರೆ, ಪಕ್ಷ ಅನೇಕ ಲೆಕ್ಕಾಚಾರಗಳಿಂದ ಸುನೀಲಗೌಡ ಪಾಟೀಲ ಅವರಿಗೆ ಟಿಕೆಟ್ ನೀಡಿದೆ.  ನಾವು ಎಸ್, ಆರ್. ಪಾಟೀಲ ಹಾಗೂ ಸುನೀಲ‌ಗೌಡ ಪಾಟೀಲ ಅವರಿಗೆ ಟಿಕೇಟ್ ನೀಡಲು ಕೇಳಿದ್ದೇವು ಎಂದು ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಎರಡೂ ಜಿಲ್ಲೆಗಳಲ್ಲಿ ಶಾಸಕರು, ಮಾಜಿ ಸಚಿವರು, ಹಿರಿಯ ನಾಯಕರ ನೇತೃತ್ವದಲ್ಲಿ ಪ್ರಚಾರ ನಡೆಸಿದ್ದೇವೆ.   ಹೀಗಾಗಿ ಸಧ್ಯ ಪರಿಸ್ಥಿತಿ ವಿಭಿನ್ನವಾಗಿದೆ.  ಬಿಜೆಪಿ ಸರಕಾರವಿದೆ.  ಅವರ ಶಾಸಕರ ಬಲ ಹೆಚ್ಚಿದೆ,  ಆದರೂ ನಮ್ಮ ಅಭ್ಯರ್ಥಿಗೆ ಅಪಾರ ಬೆಂಬಲ ವ್ಯಕ್ತವಾಗಿದೆ.  ಮೊದಲ ರೌಂಡ್ ನಲ್ಲಿ 5000 ಮತಗಳಿಂದ ಗೆಲವು ಸಾಧಿಸಲಿದ್ದೇವೆ ಎಂದು ಸುನೀಲಗೌಡ ಪಾಟೀಲ ಅವರ ಗೆಲುವಿನ ಬಗ್ಗೆ ಶಾಸಕ ಎಂ. ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಈಗ ಎಐಎಂಐಎಂ ಮಾಡುತ್ತಿರುವ ಕೆಲಸವನ್ನು ಮಾಡುತ್ತಿದೆ.  ಜೆಡಿಎಸ್ ಗೆ ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಜೆಡಿಎಸ್ ಪ್ರಾಬಲ್ಯ ಇರುವ ಕಡೆ ಮುಸ್ಲಿಮರಿಗೆ ಟಿಕೆಟ್ ನೀಡಿ ಆರಿಸಿ ತನ್ನಿ ಎಂದು ಜೆಡಿಎಸ್ ನಾಯಕರಿಗೆ ಎಂ. ಬಿ. ಪಾಟೀಲ ಸವಾಲು ಹಾಕಿದ್ದಾರೆ.  ಮಂಡ್ಯ, ಹಾಸನ, ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಿ.  ಉಪ ಚುನಾವಣೆಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿ ಗೆಲ್ಲಿಸಿ ತರಲಿಲ್ಲ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.

ಇತ್ತಿಚೆಗೆ ರಾಜ್ಯದಲ್ಲಿ ಅಕಾಲಿಕ‌ ಮಳೆಯಿಂದ ಉಂಟಾದ ಬೆಳೆಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಧ್ವನಿ ಎತ್ತಲಿದ್ದೇವೆ,  ಸಿದ್ದರಾಮಯ್ಯನವರು ಎಲ್ಲ ಮಾಹಿತಿ ಸಂಗ್ರಹಿಸಿಕೊಂಡು ಅಧಿವೇಶನಕ್ಕೆ ಬರಲು ಸೂಚಿಸಿದ್ದಾರೆ.  ದ್ರಾಕ್ಷಿ, ತೊಗರಿ ಹಾನಿಯಾದ ರೈತರಿಗೆ ಪ್ಯಾಕೇಜ್ ಘೋಷಣೆಯಾಗಬೇಕು ಎಂದು ಆಗ್ರಹಿಸಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಿದ್ದೇವೆ.  ಬೆಳೆಗಳಿಗೆ ರೈತರು ವಿಮೆ ಮಾಡಿಸಬೇಕು,  ‌ವಿಮೆ ಮಹತ್ವದ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಹಾಗೂ ರೈತರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

 

Leave a Reply

ಹೊಸ ಪೋಸ್ಟ್‌