ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ನಡೆಯುತ್ತಿರು ಚುನಾವಣೆಯ ಮತದಾನದ ದಿನ ಅನಕ್ಷರಸ್ಥ, ಅಂಧ ಮತ್ತು ಅಸ್ವಸ್ಥ ಮತದಾರರಿಗೆ ಒದಗಿಸಲಾಗಿರುವ ಜೊತೆಗಾರರಿಂದ ಚುನಾವಣೆಯ ಯಾವುದೇ ಹಂತದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚುನಾವಣೆಗೆ ನಿಯೋಜಿತ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಮತ್ತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎರಡೂ ಜಿಲ್ಲೆಗಳ ಸಂಬಂಧಪಟ್ಟ ಚುನಾವಣೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಅನಕ್ಷರಸ್ಥ, ಅಂಧ ಮತ್ತು ಅಸ್ವಸ್ಥ ಮತದಾರರಿಗೆ ಮತ ಹಾಕಲು ಓರ್ವ ಸಹಾಯಕರನ್ನು ಒದಗಿಸಿರುವ ಬಗ್ಗೆ ಕೆಲವರು ದೂರುಗಳನ್ನು ಸಲ್ಲಿಸಿದ್ದಾರೆ. ಈ ಸೌಲಭ್ಯ ದುರುಪಯೋಗ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿನೆ ನೀಡಿದರು.
ಅನಕ್ಷರಸ್ಥ, ಅಂಧ ಮತ್ತು ಅಸ್ವಸ್ಥ ಮತದಾರರಿಗೆ ನೆರವಾಗುವ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಒತ್ತಡ ಹೇರಬಾರದು. ಅಲ್ಲದೇ, ಹಾಗೂ ಪ್ರಭಾವ ಬೀರಬಾರದು. ಮತದಾರರ ಜೊತೆಗಾರರು ಮತದಾರರ ಅಕ್ಕ-ಪಕ್ಕದಲ್ಲೇ ಇದ್ದುಕೊಂಡು ಮತದಾರರಿಗೆ ಸಹಕರಿಸಬೇಕು. ಇಂಥ ಮತದಾರರು ಮತದಾನ ಮಾಡುವಾಗ ಜೊತೆಗಾರರು ಅಗತ್ಯ ಸಹಕಾರ ಮಾತ್ರ ನೀಡಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಇನ್ನಷ್ಟು ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ವೇಳೆ ಇಂಥ ಮತದಾರರು ತಮಗೆ ಜೊತೆಗಾರರ ಅವಶ್ಯಕತೆ ಇಲ್ಲವೆಂದು ಹೇಳಿದರೆ, ಅವರಿಂದ ಲಿಖಿತ ರೂಪದಲ್ಲಿ ಪತ್ರ ಪಡೆದುಕೊಂಡು, ಅವರು ಸ್ವ ಇಚ್ಛೆಯಿಂದ ಮತದಾನ ಮಾಡಲು ಅವಕಾಶ ಮಾಡಿ ಕೊಡಬೇಕು. ಅಧಿಕಾರಿಗಳು ಅವರಿಗೆ ಮುಕ್ತ ಅವಕಾಶ ಮಾಡಿ ಕೊಡಬೇಕು. ಅನಗತ್ಯವಾಗಿ ಗೊಂದಲ ಉಂಟು ಮಾಡಬಾರದು ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.
ಮತದಾನ ದಿನದಂದು ವಿಡಿಯೋ ಗ್ರಾಫರ್‍ಗಳಿಗೆ ಕಡ್ಡಾಯವಾಗಿ ಐಡಿ ಕಾರ್ಡ್‍ಗಳನ್ನು ಒದಗಿಸಬೇಕು. ಬಂದೋಬಸ್ತ್ ಗೆ ನೇಮಿಸಿದ ಪೊಲೀಸ್ ಅಧಿಕಾರಿಗಳು ಮತಗಟ್ಟೆಗಳ ಮೇಲೆ ಸೂಕ್ತ ನಿಗಾ ಇಡಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಜಿ. ಪಂ. ಸಿಇಒ ಗೋವಿಂದ ರೆಡ್ಡಿ, ಎಸ್ಪಿ ಎಚ್. ಡಿ. ಆನಂದ ಕುಮಾರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಸೀಲ್ದಾರರು, ಬಾಗಲಕೋಟ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಬಾಗಲಕೋಟ ಜಿಲ್ಲೆಯ ನಾನಾ ಚುನಾವಣೆ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ನಾನಾ ಚುನಾವಣೆ ಅಧಿಕಾರಿಗಳು ಉಪಸ್ಥಿತರಿದ್ದರು.