ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಮತದಾನ ಆರಂಭವಾಗಿದೆ.
ಮತದಾನ ಸುಗಮವಾಗಿ ನಡೆಯಲು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಹಾಲಿ ಸದಸ್ಯ ಸುನೀಲಗೌಡ ಪಾಟೀಲ, ಬಿಜೆಪಿಯಿಂದ ಪಿ. ಎಚ್. ಪೂಜಾರ, ಐದು ಜನ ಪಕ್ಷೇತರರು ಸೇರಿದಂತೆ ಒಟ್ಟು ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಸವ ನಾಡು ವೆಬ್ ವಿಜಯಪುರ ತಾಲೂಕಿನ ಜುಮನಾಳ ಗ್ರಾ. ಪಂ. ಮತಗಟ್ಟೆಗೆ ಭೇಟಿ ನೀಡಿದಾಗ ಒಟ್ಟು 21 ಜನ ಮತದಾರರಲ್ಲಿ ಈವರೆಗೆ ಕೇವಲ ಓರ್ವ ಮತದಾರ ತನ್ನ ಮತ ಚಲಾಯಿಸಿದ್ದು ಕಂಡು ಬಂತು. ಸಂ. 4ರ ವರೆಗೆ ಮತದಾನಕ್ಕೆ ಅವಕಾಶವಿರುವ ಹಿನ್ನೆಲೆಯಲ್ಲಿ ಉಳಿದ ಮತದಾರರು ತಮಗೆ ಅನುಕೂಲವಾದ ಸಮಯದಲ್ಲಿ ಮತ ಹಾಕುವ ನಿರೀಕ್ಷೆಯಿದೆ. ಈ ಬಾರಿ ಶೇ. 95ಕ್ಕಿಂತಲೂ ಹೆಚ್ಚು ಮತದಾನ ನಿರೀಕ್ಷಿಸಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ 208 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 203 ಸೇರಿದಂತೆ ಒಟ್ಟು 411 ಮತಗಟ್ಟೆಗಳನ್ನು ತೆರೆಯಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 3940 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 3450 ಸೇರಿದಂತೆ ಒಟ್ಟು 7390 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. 3538 ಪುರುಷ ಮತ್ತು 3858 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 948 ಮತದಾರರು ಸಹಾಯಕರನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮತಗಟ್ಟೆಗಳ ಬಳಿ ಬಿಗೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ವಿಜಯಪುರ ಜಿಲ್ಲೆಯಲ್ಲಿ ಐದು ಜನ ಡಿವೈಎಸ್ಪಿ 14 ಜನ ಸಿಪಿಐ 82 ಜನ ಎ ಎಸ್ಐ 273 ಮುಖ್ಯ ಬೆಳೆಗಳು 424 ಪೇದೆಗಳು 13 ಕೆ ಎಸ್ ಆರ್ ಪಿ ಮತ್ತು ಡಿ ಎ ಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ಡಿವೈಎಸ್ಪಿ 10 ಸಿಪಿಐ 10 ಪಿಎಸ್ಐ 10 ಎ ಎಸ್ಐ 274 ಜನ ಮುಖ್ಯಪೇದೆ ಮತ್ತು ಪೇದೆಗಳು ಸೇರಿದಂತೆ ಒಟ್ಟು 307 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೆ ಈ ಚುನಾವಣೆ ಕಾರ್ಯಕ್ಕಾಗಿ 24 ಬಸ್ 58 ಮಿನಿ ಬಸ್ 61 ಜೀಪ್ ಸೇರಿದಂತೆ ಒಟ್ಟು 142 ವಾಹನ ಗಳನ್ನು ಬಳಕೆಮಾಡಲಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು.
1. ಪಿ. ಎಚ್. ಪೂಜಾರ,
2. ಸುನೀಲಗೌಡ ಪಾಟೀಲ,
3. ಕಾಂತಪ್ಪ ಇಂಚಗೇರಿ,
4. ದುರ್ಗಪ್ಪ ಸಿದ್ದಾಪುರ,
5. ಮಲ್ಲಿಕಾರ್ಜುನ ಕೆಂಗನಾಳ,
6. ಮಲ್ಲಿಕಾರ್ಜುನ ಲೋಣಿ,
7. ಶ್ರೀಮಂತ ಬಾರಿಕಾಯಿ.