ವಿಜಯಪುರ: ಭಾರತ ಶ್ರೀಮಂತ ಸಂಸ್ಕೃತಿಯನ್ನು ಪೋಷಿಸುತ್ತ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿನ ಬಿತ್ತರಿಸುತ್ತಿದೆ. ಆದರೆ, ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂದಿನ ಯುವ ಜನಾಂಗ ಹಿಂದೇಟು ಹಾಕುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತರ ಫೇಡರೇಶನ್‍ದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೀದ ಜಮಾದಾರ ವಿಷಾಧ ವ್ಯಕ್ಯಪಡಿಸಿದ್ದಾರೆ.
ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 2021-22ನೇ ವರ್ಷದ ವಿಜಯಪುರ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ವ್ಯಾಮೋಹದಿಂದ ಯುವಜನತೆ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಿಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುವುದಕ್ಕಿಂತ ನಮ್ಮ ನೆಲದ ಭವ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪಣತೊಡಬೇಕಾಗಿದೆ. ಜನಪದ ಕಲೆಗಳು ಮಾನವೀಯ ಸಂಬಂಧದ ಸರಪಳಿ. ಜಾನಪದ ಕಲೆ ನಮ್ಮ ಪೂರ್ವಜರು ನೀಡಿದ ಅನುಪಮ ಕೊಡುಗೆಯಾಗಿದೆ. ಯುವಜನತೆ ಕಲೆ ಸಾಹಿತ್ಯದ ಆರಾಧಕರಾಗಿರಬೇಕು ಹಾಗೂ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಇದರಿಂದ ದೇಶದ ಕೀರ್ತಿ ಬೆಳೆಯುತ್ತದೆ ಎಂದು ಅವರು ಹೇಳಿದರು.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಮಾತನಾಡಿ, ವಿಜಯಪುರ ಜಿಲ್ಲೆ ಜನಪದ ಕಲೆಗಳ ತವರೂರು. ಇಲ್ಲಿನ ಯುವಕ ಯುವತಿಯರು ಜನಪದ ಕಲೆಗಳನ್ನು ಪ್ರೀತಿಸಬೇಕು. ಯುವಜನತೆ ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೇ ಬದಲಿಸಬಹುದು. ಬದಲಾದ ಜೀವನ ಶೈಲಿ ಒತ್ತಡಗಳಿಂದ ಜೀವನ ಮೌಲ್ಯಗಳ ಅಪಾಯದ ಅಂಚಿಗೆ ಸರಿಯುತ್ತಿದೆ. ಮೌಲ್ಯಗಳ ಅದಃಪತನಕ್ಕೆ ನಾವು ಸಾಂಸ್ಕೃತಿಕವಾಗಿ ವಿಮೂಕವಾಗಬಾರದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಯುವಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ, ಎಸ್. ಸಿ. ಎಸ್. ಟಿ. ದೌರ್ಜನ್ಯ ತಡೆ ಸಲಹಾ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ, ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯ ಭೀಮಸೇನ ಕೋಕರೆ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸಂಜೀವ ಖೋತ, ಸಂತೋಷಕುಮಾರ ನಿಗಡಿ, ಯುವಮುಖಂಡ ನಾಗರಾಜ ಲಂಬು, ಬಸವರಾಜ ಲಾಳಸಂಗಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ ಡೋಂಗ್ರೆ, ಎನ್. ಎಸ್. ಎಸ್. ಜಿಲ್ಲಾ ನೋಡಲ್ ಅಧಿಕಾರಿ ಎಚ್. ಎಂ. ಸಜ್ಜಾದೆ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಅರುಣ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಕುರಿತು ಎಲ್ಲರಿಗೆ ಪ್ರತಿಜ್ಞೆ ಮಾಡಲಾಯಿತು. ಜಾನಪದ ನೃತ್ಯ, ಜಾನಪದ ಗೀತೆ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದ್ಯ, ಶಾಸ್ತ್ರೀಯ ನೃತ್ಯ ಮುಂತಾದ ಸ್ಪರ್ಧೆಗಳಲ್ಲಿ ಯುವ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದ ಮೊದಲಿಗೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.