ಕಾಲು-ಬಾಯಿ ಬೇನೆ ರೋಗ ನಿರೋಧಕ ಲಸಿಕೆ ಹಾಕಿಸಿ, ಜಾನುವಾರುಗಳನ್ನು ಆರೋಗ್ಯವಾಗಿ ಇರಿಸಿಕೊಳ್ಳಿ-ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜಾನುವಾರುಗಳ ಮಾಲಿಕರು ತಮ್ಮ ರಾಸುಗಳಿಗೆ ಕಾಲು-ಬಾಯಿ ಬೇನೆ ರೋಗ ನಿರೋಧಕ ಲಸಿಕೆ ಹಾಕಿಸಿ ಆರೋಗ್ಯವಾಗಿ ಇರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಕರೆ ನೀಡಿದ್ದಾರೆ. 

ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾಲುಬಾಯಿ ಬೇನೆ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಜಾನುವಾರುಗಳಿವೆ ಎಂದು ವಾಸ್ತವಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.  ಅವುಗಳಿಗೆ ಮನೆ ಬಾಗಿಲಿಗೆ ಹೋಗಿ ಕಿವಿಯೋಲೆ ಹಾಕಿಸಿ ಲಸಿಕೆ ಹಾಕಿಸುವ ಅಭಿಯಾನವನ್ನು ಡಿ. 13 ರಿಂದ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದ ಪ್ರಾರಂಭಿಸಲಾಗಿದೆ.  ಇದು ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ಜಾರಿಯಲ್ಲಿರುತ್ತದೆ.  ಪಶುಪಾಲನೆ ಇಲಾಖೆಯ ಹಾಗೂ ಇತರೆ ಲಸಿಕೆದಾರರು ಸೇರಿ 327 ಪ್ರತಿ ಗ್ರಾಮ ಹಾಗೂ ನಗರವನ್ನು 100 ಜಾನುವಾರುಗಳಿಗೆ ಒಂದು ಬ್ಲಾಕ್ ಎಂದು ವರ್ಗೀಕರಿಸಿ ಲಸಿಕೆ ಹಾಕಲಿದ್ದಾರೆ.  ಲಸಿಕೆದಾರರಿಗೆ ತರಬೇತಿ ನೀಡಲಾಗಿದ್ದು, ಪ್ರತಿ ಜಾನುವಾರಿಗೆ ಒಂದರಂತೆ ಸಿರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ ಎಂದು ಡಿಸಿ ತಿಳಿಸಿದರು.

ಕಾಲು-ಬಾಯಿ ರೋಗ ಮಾರಕವಾಗಿದ್ದು, ಇದರಿಂದ ಹೆಣ್ಣು ದನಗಳಲ್ಲಿ ಉತ್ಪಾದನೆ ಕುಂಠಿತ ಹಾಗೂ ಗಂಡು ದನಗಳಲ್ಲಿ ಶಕ್ತಿ-ಸಾಮಥ್ರ್ಯ ಕುಂಠಿತವಾಗಿ ರೈತಾಪಿ ಜನರಿಗೆ ಹೆಚ್ಚಿನ ಆರ್ಥಿಕ ಹೊಡೆತ ಉಂಟಾಗುತ್ತದೆ.  ಆದ್ದರಿಂದ ಪ್ರತಿಯೊಂದು ಜಾನುವಾರುಗಳ ಮಾಲಿಕರು ಯಾವುದೇ ರೀತಿಯ ಹಿಂಜರಿಕೆಯಿಲ್ಲದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಪ್ರತಿಯೊಂದು ಜಾನುವಾರನ್ನು ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಪ್ರಾಣೇಶ ಜಹಾಗಿರದಾರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಸಿಬ್ಬಂದಿಯ ಕೊರತೆ ತೀವ್ರವಾಗಿದೆ.  ಪ್ರತಿದಿನ ಬೆಳಗ್ಗೆ ಲಸಿಕಾ ಕಾರ್ಯಕ್ರಮಕ್ಕೆ ಸಿಬ್ಬಂದಿ ಚಿಕಿತ್ಸೆ ನೀಡಲು ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಬಹುದು.  ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಿಸಿದ್ಧಿ, ಪಶುಪಾಲನೆ ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಎಸ್. ಪಿ. ಕುಂಬಾರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌