ವಿಪ ಚುನಾವಣೆ: ವಿಜಯಪುರದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ- ಪೊಲೀಸ್ ಬಿಗೀ ಬಂದೋಬಸ್ತ್- ಡಿಸಿ ಪರಿಶೀಲನೆ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ವಿಜಯಪುರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ವಿಜಯಪುರ ನಗರದ ವಿ. ಬ. ದರಬಾರ ಹೈಸ್ಕೂಲಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.  ಮಂಗಳವಾರ ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಯನ್ನು ತೆರಯಲಾಗುತ್ತದೆ.  ನಂತರ ಬೆ. 8ಕ್ಕೆ ಮತ ಎಣಿಕೆ ಆರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ದರಬಾರ ಹೈಸ್ಕೂಲ್ ಶಾಲೆಗೆ ಭೇಟಿ ನೀಡಿ ಮತ ಎಣಿಕೆ ಸಿದ್ಧತೆ ಮತ್ತು ಪೊಲೀಸ್ ಬಂದೋಬಸ್ತ್ ಪರಿಶೀಲನೆ ನಡೆಸಿದರು.  ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಜೊತೆ ಸಂಜೆ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಪಿ. ಸುನೀಲ ಕುಮಾರ ಮತ ಎಣಿಕೆ ಸಿಬ್ಬಂದಿ ಮತ್ತು ಚುನಾವಣೆ ಕರ್ತವ್ಯ ನಿರತ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟ ಸೂಚನೆ ನೀಡಿದರು.  ಅಲ್ಲದೇ, ಮಾಧ್ಯದವರಿಗೂ ಕೂಡ ಚಿತ್ರೀಕರಣ ಹಾಗೂ ಮತ ಎಣಿಕೆ ಹೇಗೆ ನಡೆಯುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು.

ಮತ ಎಣಿಕೆಗೆಗಿ ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಎರಡು ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ಪ್ರತಿಯೊಂದು ಕೊಠಡಿಗಳಲ್ಲಿ ತಲಾ ಏಳು ಟೆಬಲ್ ಗಳನ್ನು ಹಾಕಲಾಗಿದೆ.  ಅಲ್ಲದೇ, ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರು ಮತ ಎಣಿಕೆ ಕೇಂದ್ರಕ್ಕೆ ಯಾವ ರೀತಿ ಪ್ರವೇಶ ಮಾಡಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.

 

ಪ್ರತಿಯೊಂದು ಮತ ಎಣಿಕೆ ಟೆಬಲ್ ಗೆ ತಲಾ ಮೂರು ಜನರಂತೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ.  ಅಲ್ಲದೇ, ಪ್ರತಿಯೊಂದು ಕೊಠಡಿಯಲ್ಲಿ ಚುನಾವಣೆ ಅಧಿಕಾರಿಗಳು ಕೂಡ ಕೆಲಸಕ್ಕೆ ನಿಯೋಜಿತರಾಗಿರುತ್ತಾರೆ.  ಮತ ಎಣಿಕೆ ಟೇಬಲ್ ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತು ಪಡಿಸಿ ಯಾರೂ ಪ್ರವೇಶಿಸದಂತೆ ಕಟ್ಟಿಗೆಯನ್ನು ಕಟ್ಟಿ ಪಾರದರ್ಶಕವಾಗಿ ಜಾಳಿಗೆಯನ್ನು ಹಾಕಲಾಗಿದೆ.  ಅಲ್ಲದೇ, ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಪಾರದರ್ಶಕ ಪ್ಲಾಸ್ಟಿಕ್ ಶೀಟನ್ನು ಕೂಡ ಅಂಟಿಸಲಾಗಿದೆ.

ಈ ಮಧ್ಯೆ, ದರಬಾರ ಹೈಸ್ಕೂಲ್ ಮೈದಾನದಲ್ಲಿ ಪೊಲೀಸ್ ಹಾಜರಾತಿ ನಡೆಯುತ್ತಿದ್ದ ಸ್ಥಳಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಅಲ್ಲಿದ್ದ ಉಪಸ್ಥಿತರಿದ್ದ ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಗಾಂಧಿಚೌಕ ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಗೋಲಗುಂಬಜ ಸಿಪಿಐ ರಮೇಶ ಅವಜಿ ಅವರಿಂದ ಬಂದೊಬಸ್ತ್ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ವಿಜಯಪುರ ವಾರ್ತಾ ಮತ್ತು ಸಂಪರ್ಕಾಧಿಕಾರಿ ಸುಲೇಮಾನ ನಧಾಫ, ಸಿಬ್ಬಂದಿಯಾದ ಸುರೇಶ ಅಂಬಿಗೇರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌