ವಿಪ ಚುನಾವಣೆ: ಮತ ಎಣಿಕೆ ಲೆಕ್ಕಾಚಾರ ಹೇಗಿರುತ್ತೆ? ಫಲಿತಾಂಶ ಎಷ್ಟೋತ್ತಿಗೆ ಸಿಗುತ್ತೆ? ಇಲ್ಲಿದೆ ಮಾಹಿತಿ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ಕಣದಲ್ಲಿರುವ ಕಾಂಗ್ರೆಸ್, ಬಿಜೆಪಿ ಮತ್ತು ಐದು ಜನ ಪಕ್ಷೇತರ ಅಭ್ಯರ್ಥಿಗಳು ಈ ಕ್ಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಡಿ. 10 ರಂದು ನಡೆದ ಮತದಾನದ ಮತ ಎಣಿಕೆ ಕಾರ್ಯ ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.  ಆದರೆ, ಈ ಚುನಾವಣೆ ಮತ ಎಣಿಕೆ ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಗಳಂತೆ ನಡೆಯುವುದಿಲ್ಲ.  ಇಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ.  ಈ ಮತ ಎಣಿಕೆಯ ಹೇಗೆ ನಡೆಯುತ್ತದೆ ಮತ್ತು ಫಲಿತಾಂಶ ಎಷ್ಟೋತ್ತಿಗೆ ಪ್ರಕಟವಾಗಬಹುದು ಎಂಬುದು ಕುತೂಹಲ ಮೂಡಿಸಿದೆ.

 

ಎಲ್ಲವೂ ಸುಸೂತ್ರವಾಗಿ ನಡೆದರೆ ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಮೊದಲ ಫಲಿತಾಂಶ ಪ್ರಕಟವಾಗಬಹುದು.  ಇಲ್ಲದಿದ್ದರೆ ಸಂಪೂರ್ಣ ಫಲಿತಾಂಶ ರಾತ್ರಿಯೂ ಪ್ರಕಟವಾಗುವ ಸಾಧ್ಯತೆಗಳಿವೆ.

ಬಿಜಾಪುರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ. 99.86 ರಷ್ಟು ಮತದಾನವಾಗಿದ್ದು, ಒಟ್ಟು 7363 ಮತದಾರರಲ್ಲಿ ಒಟ್ಟು 411 ಸ್ಥಳೀಯ ಸಂಸ್ಥೆಗಳ 7353 ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.  ಇಲ್ಲಿ ಎರಡು ಸ್ಥಾನಗಳಿಗೆ ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಹೀಗಾಗಿ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ನಿಗದಿತ ಮತಗಳನ್ನು ಪಡೆಯುವ ಗುರಿ ತಲುವುವ ಅಭ್ಯರ್ಥಿಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆದಿರುವ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.  ಬಳಿಕ ಮತ ಎಣಿಕೆ ಪ್ರಕ್ರಿಯೆ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಬಿಜಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 411 ಮತಗಟ್ಟೆಗಳಿದ್ದು, ತಲಾ ಒಂದರಂತೆ 411 ಮತಪೆಟ್ಟಿಗೆಗಳಲ್ಲಿ ಮತಗಳು ಭದ್ರವಾಗಿವೆ.  ಈ ಬಾರಿ  ಜಿಲ್ಲೆಯಲ್ಲಿ ಈಗ 7353 ಮತಗಳು ಚಲಾವಣೆಯಾಗಿವೆ.

 

ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಆರಂಭವಾದ ನಂತರ ಮತ ಎಣಿಕೆಗೆ ಮೀಸಲಾಗಿರುವ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಈ ಮತಪೆಟ್ಟಿಗೆಗಳನ್ನು ತರಲಾಗುತ್ತದೆ.  ಪ್ರತಿಯೊಂದು ಕೊಠಡಿಯಲ್ಲಿ ತಲಾ ಏಳು ಟೇಬಲ್ ಗಳನ್ನು ಮತ ಎಣಿಕೆಗೆ ಮೀಸಲಿಡಲಾಗಿದೆ.  ಪ್ರತಿ ಟೇಬಲ್ಲಿಗೆ ತಲಾ ಮೂರ ಜನ ಅಧಿಕಾರಿಗಳನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ.  ಅಲ್ಲದೇ, ಈ ಟೇಬಲ್ ಗಳ ಎದುರಿಗೆ ಅಭ್ಯರ್ಥಿಗಳ ಪರ ಮತ ಎಣಿಕೆ ಏಜೆಂಟರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಒಂದೊಂದು ಮತಪೆಟ್ಟಿಗೆಯನ್ನು ಈ ಟೇಬಲ್ಲಿಗೆ ತಂದಾಗ ಅವುಗಳಲ್ಲಿರುವ ಮತಗಳನ್ನು ಪ್ಲಾಸ್ಚಿಟ್ ಟ್ರೆ(ಚೌಕಾಕಾರದ ಬುಟ್ಟಿ)ಗೆ ಹಾಕಿ ಮಡಚಲಾಗಿರುವ ಮತಪತ್ರಗಳನ್ನು ಎಣಿಸಿ ಆ ಮತಪೆಟ್ಟಿಗೆಗೆ ಅಂಟಿಸಲಾದ ಮತಪತ್ರಗಳ ಒಟ್ಟು ಸಂಖ್ಯೆಯನ್ನು ಪರಿಶೀಲನೆ ಮಾಡಲಾಗುತ್ತದೆ.  ನಂತರ ತಲಾ 25 ರಂತೆ ಮತಪತ್ರಗಳನ್ನು ಸಂಗ್ರಹಿಸಿ ಅವುಗಳಿಗೆ ರಬ್ಬರ್ ಹಾಕಿ ಟ್ರೆ ನಲ್ಲಿ ಇಡಲಾಗುತ್ತದೆ.  ಹೀಗೆ ಸಂಗ್ರಹಿಸಲಾದ ಮತಪತ್ರಗಳ ಪೆಂಡಿ(ಬಂಡಲ್) ಯನ್ನು ಡ್ರಮ್(ಬ್ಯಾರಲ್) ವೊಂದಕ್ಕೆ ಹಾಕಲಾಗುತ್ತದೆ.   ಈ ಪ್ರಕ್ರಿಯೆ ಮುಗಿಯಲು ಒಂದೆರಡು ಗಂಟೆಯಾದರೂ ಬೇಕಾಗುತ್ತದೆ.

ನಂತರ ನಡೆಯುವುದೇ ಮತ ಎಣಿಕೆ.  ಇದಾದ ಬಳಿಕ ಬ್ಯಾರಲ್ ನಲ್ಲಿ ಸಂಗ್ರಹವಾದ ಮತಪತ್ರಗಳ ಬಂಡಲ್ ಗಳನ್ನು ತೆರೆಯಲಾಗುತ್ತದೆ.  ಎಲ್ಲ ಬಂಡಲ್ ಗಳನ್ನು ಸಮನಾಗಿ ಎರಡೂ ಕೋಣೆಯಲ್ಲಿರುವ ಮತ ಎಣಿಕೆ ಟೆಬಲ್ ಗೆ ಸಮನಾಗಿ ಹಂಚಲಾಗುತ್ತದೆ.  ಪ್ರತಿ ಟೆಬಲ್ಲಿನ ಮೇಲೆ ಇಡಲಾಗಿರುವ ಒಂಬತ್ತು ಟ್ರೆಯಗಳಲ್ಲಿ ತಲಾ ಒಂದರಂತೆ ಏಳು ಜನ ಅಭ್ಯರ್ಥಿಗಳು ಮತ್ತು ಒಂತು ಸಂಶಯಾಸ್ಪದ ಮತ್ತೋಂದು ತಿರಸ್ಕೃತ ಪಟ್ಟಿ ಅಂಟಿಸಲಾಗಿರುವ ಟ್ರೆಯೆಲ್ಲಿ ಈ ಮತಪತ್ರಗಳನ್ನು ಪರಿಶೀಲಿಸಿ ವಿಂಗಡಣೆ ಮಾಡಲಾಗುತ್ತದೆ.

ಇವುಗಳಲ್ಲಿ ವ್ಯಾಲಿಡ್ ಅಂದರೆ ಸ್ವೀಕೃತವಾದ ಎಲ್ಲ ಮತಗಳನ್ನು ಕ್ರೂಢಿಕರಿಸಿ ಪ್ರಥಮ ಪ್ರಾಶಸ್ತ್ಯದ ಮತಗಳಿಗೆ ಒಂದು ಮೌಲ್ಯವನ್ನು ನಿಗದಿ ಪಡಿಸಲಾಗುತ್ತದೆ.  ಅಂದರೆ, ಒಂದು ಪ್ರಥಮ ಪ್ರಾಶಸ್ತ್ಯದ ಮತಕ್ಕೆ 100 ಮತಗಳು ಎಂದು ಮೌಲ್ಯವನ್ನು ನಿಗದಿ ಪಡಿಸಲಾಗುತ್ತದೆ.  ಹೀಗೆ ಸ್ವೀಕೃತವಾದ ಒಟ್ಟು ಮತಗಳನ್ನು ಮೂರು ಭಾಗಗಳನ್ನಾಗಿ ವಿಭಜಿಸಿಸಲಾಗುತ್ತದೆ.  ಈ ಮೂರು ಭಾಗಗಳನ್ನು ವಿಂಗಡಿಸಿದ ನಂತರ ಸಿಗುವ ಮತಗಳಿಗಿಂತಲೂ ಒಂದು ಮತ ಹೆಚ್ಚಿಗೆ ಪಡೆದರೆ ಮೊದಲಿಗೆ ಅಂಥ ಅಭ್ಯರ್ಥಿಯನ್ನು ವಿಜಯಿ ಎಂದು ಗುರುತಿಸಲಾಗುತ್ತದೆ.

ಉದಾ: ವಿಜಯಪುರ ಜಿಲ್ಲೆಯಲ್ಲಿ ದಾಖಲಾದ ಒಟ್ಟು 7353 ಎಲ್ಲ ಮತಗಳು ಸ್ವೀಕೃತ ಎಂದು ಪರಿಗಣಿಸಿದರೆ ಅವುಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದಾಗ 2451 ಪ್ರಥಮ ಪ್ರಾಶಸ್ತ್ಯದ ಮತಗಳಾಗುತ್ತವೆ.  ಈ ಮತಗಳಿಗಿಂತ ಒಂದು ಹೆಚ್ಚಿಗೆ ಮತ ಅಂದರೆ 2452 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ಒಂದು ವೇಳೆ, ತೀವ್ರ ಜಿದ್ದಾಜಿದ್ದಿ ಏರ್ಪಟ್ಟು ಯಾರೊಬ್ಬರೂ ನಿಗದಿದ ಗುರಿ ತಲುಪದಿದ್ದರೆ, ಒಟ್ಟು ಏಳು ಜನ ಅಭ್ಯರ್ಥಿಗಳಲ್ಲಿ ಅತೀ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಯನ್ನು ಎಣಿಕೆ ಪ್ರಕ್ರಿಯೆಯಿಂದ ಕೈಬಿಡಲಾಗುತ್ತದೆ.  ಈ ಸಂದರ್ಭದಲ್ಲಿ ಆ ವ್ಯಕ್ತಿಯ ಮತಪತ್ರದಲ್ಲಿರುವ ದ್ವಿತೀಯ ಪ್ರಾಶಸ್ತ್ಯದ ಮತಗಳ ಮೌಲ್ಯವನ್ನು ಲೆಕ್ಕಾಚಾರ ಹಾಕಿ ಉಳಿದವರಿಗೆ ಸಮನಾಗಿ ಹಂಚಿಕೆ ಮಾಡಲಾಗುತ್ತದೆ.  ಈ ಸಂದರ್ಭದಲ್ಲಿ ಮೊದಲ ಪ್ರಾಶಸ್ತ್ಯದ ಮತಗಳ ಮೌಲ್ಯ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತಗಳ ಮೌಲ್ಯಗಳ ನಡುವೆ ಸಾಕಷ್ಟು ಅಂತರ ಉಂಟಾಗುತ್ತದೆ.  ನಂತರ ಕೈ ಬಿಡಲಾದ ಅಂದರೆ ಅತೀ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಗೆ ದೊರೆತಿರುವ ಪ್ರಥಮ ಪ್ರಾಶಸ್ತ್ಯದ ಮತಪತ್ರದಲ್ಲಿ ದಾಖಲಾಗಿರುವ ದ್ವಿತೀಯ ಪ್ರಾಶಸ್ತ್ಯತದ ಮತಗಳನ್ನು ಉಳಿದ ಆರು ಜನ ಅಭ್ಯರ್ಥಿಗಳಿಗೆ ಸಮನಾಗಿ ಹಂಚಲಾಗುತ್ತದೆ.  ಈ ಸಂದರ್ಭದಲ್ಲಿಯೂ ಯಾರೊಬ್ಬರೂ ನಿಗದಿತ ಮೌಲ್ಯದ ಮತಗಳನ್ನು ಗಳಿಸಲು ಸಾಧ್ಯವಾಗದಿದ್ದರೆ, ಒಟ್ಟ ಮತಗಳಿಗಳಿಕೆಯಲ್ಲಿ ಆರನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ಮುಂದಿನ ಮತ ಎಣಿಕೆ ಪ್ರಕ್ರಿಯೆಯಿಂದ ಕೈಬಿಟ್ಟು, ಆತ ಪ್ರಥಮ ಪ್ರಾಶಸ್ತ್ಯ ಪಡೆದ ಮತಪತ್ರದಲ್ಲಿ ದಾಖಲಾಗಿರುವ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಿ ಮೊದಲ ಐದು ಸ್ಥಾನದಲ್ಲಿರುವ ಅಭ್ಯರ್ಥಿಗಳಿಗೆ ಹಂಚಲಾಗುತ್ತದೆ.  ಆಗಲೂ ನಿಗದಿತ ಗುರಿ ತಲುಪದಿದ್ದರೆ, ಪ್ರತಿ ಸುತ್ತಿನಲ್ಲಿಯೂ ಅತೀ ಕಡಿಮೆ ಮತಗಳನ್ನು ಪಡೆದ ಒಬ್ಬೊಬ್ಬ ಅಭ್ಯರ್ಥಿಯನ್ನು ಮತ ಎಣಿಕೆ ಪ್ರಕ್ರಿಯೆಯಿಂದ ಎಲಿಮಿನೇಟ್(ಕೈಬಿಟ್ಟು) ಮುಂದಿನ ಸುತ್ತಿನ ಮತ ಎಣಿಕೆ ನಡೆಯುತ್ತದೆ.

ಒಂದು ವೇಳೆ ಓರ್ವ ಅಭ್ಯರ್ಥಿ ಮೊದಲ ಸುತ್ತಿನಲ್ಲಿಯೇ ನಿಗದಿತ ಮತಗಳನ್ನು ಪಡೆದು ಆಯ್ಕೆಯಾದರೆ, ಎರಡನೇ ಸುತ್ತಿನಲ್ಲಿ ಎರಡನೇ ಅಭ್ಯರ್ಥಿಯ ಆಯ್ಕೆಗೆ ಮತ ಎಣಿಕೆ ನಡೆಯುತ್ತದೆ.   ಆಗ, ಎರಡನೇ ಸುತ್ತಿನಲ್ಲಿ ಈಗಾಗಲೇ ವಿಜಯಿಯಾದ ಅಭ್ಯರ್ಥಿಯನ್ನು ಕೈ ಬಿಟ್ಟು, ಆತನ ಪ್ರಥಮ ಪ್ರಾಶಸ್ತ್ಯದ ಮತ ಪಡೆದ ಮತಪತ್ರದಲ್ಲಿ ದಾಖಲಾಗಿರುವ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಉಳಿದ ಅಭ್ಯರ್ಥಿಗಳ ಹೆಸರಿಗನುಸಾರವಾಗಿ ವಿಂಗಡಿಸಲಾಗುತ್ತದೆ.  ಈ ಸುತ್ತಿನಲ್ಲಿ ಅಭ್ಯರ್ಥಿ ನಿಗದಿತ ಗುರಿ ತಲುಪಿದರೆ ಆತನನ್ನು ವಿಜಯಿ ಎಂದು ಗುರುತಿಸಲಾಗುತ್ತದೆ.

ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಐದಾರು ಗಂಟೆಗಳಾದರೂ ಬೇಕಾಗುತ್ತದೆ.  ಅಲ್ಲದೇ, ಪ್ರತಿ ಸುತ್ತಿನಲ್ಲಿಯೂ ಸಂಪೂರ್ಣವಾಗಿ ಮತ ಎಣಿಕೆ ಮಾಡಬೇಕಾಗಿರುವುದರಿಂದ ಇಲ್ಲಿ ಗಣಿತ ಬಲ್ಲವರು ಕೆಲಸ ಬಹುಮುಖ್ಯವಾಗಿರುತ್ತದೆ.

ಕೊನೆಗೆ ಮತ ಎಣಿಕೆ ಕೈಪಿಡಿಯಲ್ಲಿರುವಂತೆ ಎಲ್ಲ ನಿಯಮಗಳನ್ನು ಪಾಲಿಸಿ ರಾಜ್ಯ ಚುನಾವಣೆ ಆಯೋಗದಿಂದ ಅನುಮತಿ ಪಡೆದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ಈ ವೇಳೆ ತಿರಸ್ಕೃತ ಮತಗಳಿಗೆ ಮಾನದಂಡವನ್ನೂ ನಿಗದಿ ಪಡಿಸಿದ ಮಾರ್ಗಸೂಚಿಯಂತೆಯೇ ನಡೆಯಲಿದೆ.

 

Leave a Reply

ಹೊಸ ಪೋಸ್ಟ್‌