ಬ್ಯಾಂಕ್ ಠೇವಣಿದಾರರ ವಿಮೆ ಸೌಲಭ್ಯದಲ್ಲಿ ಹೆಚ್ಚಳ- ಕೇಂದ್ರ ಸಚಿವ ಭಗವಂತ ಖೂಬಾ

ವಿಜಯಪುರ: ನಾನಾ ಬ್ಯಾಂಕುಗಳಲ್ಲಿ ಹಣ ಠೇವಣಿ ಮಾಡುವ ಬಡ ಮತ್ತು ಮಧ್ಯಮ ವರ್ಗದ ಠೇವಣಿದಾರರ ಅನುಕೂಲಕ್ಕಾಗಿ ಕೇಂದ್ರ ಸರಕಾರ ಠೇವಣಿ ವಿಮೆ ಹಾಗೂ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ (ಡಿಐಸಿಜಿಸಿ)ಯೋಜನೆ ಜಾರಿಗೆ ತಂದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. 

 

ವಿಜಯಪುರ ನಗರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ಕೆನರಾ ಬ್ಯಾಂಕ್ ತನ್ನ ಲೀಡ್ ಬ್ಯಾಂಕ್ ಗಳ ಸಂಯೋಜನೆಯೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೆಪಾಸಿಟ್ ಇನ್ಸೂರೆನ್ಸ ಪೇಮೆಂಟ್ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.

ಬ್ಯಾಂಕ್ ಗಳಲ್ಲಿನ ಠೇವಣಿ ಹಣ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ.  ವಿಮೆ ಪೇಮೆಂಟ್ ಪ್ರಮಾಣ ರೂ. 1 ದಿಂದ ರೂ. 5 ಲಕ್ಷದ ವರೆಗೆ ಹೆಚ್ಚಿಸಲಾಗಿದೆ.  ನಾನಾ ಆಡಳಿತ ನಿರ್ವಹಣೆಯಿಂದ ವಿಫಲವಾಗಿ,ಬ್ಯಾಂಕ್ ಗಳ ದಿವಾಳಿಯಿಂದ ವಿಮೆ ಮೊತ್ತ ಪಡೆಯಲು ತೀವ್ರ ಸಂಕಷ್ಟ ಎದುರಿಸುತ್ತಿದ್ದ ಬಡ, ಮಧ್ಯಮ ವರ್ಗದ ಫಲಾನುಭವಿಗಳಿಗೆ ಇನ್ನು ಮುಂದೆ 90 ದಿನಗಳೊಳಗೆ ವಿಮೆ ಮೊತ್ತ ಪಡೆಯುವ ಅವಕಾಶ ಲಭಿಸಿದೆ ಎಂದು ಅವರು ತಿಳಿಸಿದರು.

ನವದೆಹಲಿಯ ವಿಜ್ಞಾನ ಭವನದಿಂದ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಅಲ್ ವೇದಿಕೆ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ದೇಶದ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಬ್ಯಾಂಕ್ ಗಳ ಪಾತ್ರ ಅಪಾರ.  ಬ್ಯಾಂಕುಗಳ ಅಭಿವೃಧ್ಧಿಗೆ ಠೇವಣಿದಾರರು ಮುಖ್ಯ.  ಈ ಹಿನ್ನೆಲೆಯಲ್ಲಿ ಉಭಯರ ರಕ್ಷಣೆಗೆ ಕ್ರಮಕೈಗೊಂಡಿದ್ದು, ಡಿಐಸಿಜಿಸಿ ಜಾರಿಗೊಳಿಸಲಾಗಿದೆ.  ಬಡವರು, ಮಧ್ಯಮ ವರ್ಗದವರಿಗೆ ಇದರಿಂದ ಹೆಚ್ಚಿನ ನೆರವು ಸಿಗಲಿದೆ.  ಅಲ್ದೇ, ಠೇವಣಿದಾರರ ಠೇವಣಿ ಹಣ ರಕ್ಷಣೆಗೂ ಇದು ಸಹಾಯವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆ ಹಣ ಠೇವಣಿ ಮಾಡಿ ವಾಪಸ್ ಪಡೆಯದೆ ತೊಂದರೆಗೀಡಾಗಿದ್ದ ಫಲಾನುಭವಿಗಳಿಗೆ ಹಣ ಮರಳಿಸುವ ಚೆಕ್ ನ್ನು ಸಚಿವರು ವಿತರಿಸಿದರು.  ಈ ಸಂದರ್ಭದಲ್ಲಿ ಕೇನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ರವಿ ಸುಧಾಕರ, ರಿಜನಲ್ ಮ್ಯಾನೇಜರ್ ಎನ್. ಎಸ್. ಕಿರಣ ಹಾಗೂ ಇತರ ನಾನಾ ಬ್ಯಾಂಕ್ ಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌