ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಮತ್ತು ವಿಧಾನ ಪರಿಷತ ಹಾಲಿ ಸದಸ್ಯ ಸುನೀಲಗೌಡ ಪಾಟೀಲ ಮತ್ತು ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಸಾಧಿಸಿದಂತಾಗಿದೆ.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ನಿರೀಕ್ಷೆಯಂತೆ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಗೆಲುವಿಗೆ ನಿಗದಿಯಾಗಿದ್ದ ಮತಗಳಿಗಿಂತ ಹೆಚ್ಚು ಮತ ಪಡೆದ ಸುನೀಲಗೌಡ ಪಾಟೀಲ ಒಟ್ಟು 3332 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ವಿಜಯಶಾಲಿಯಾದರು.
ಮೊದಲ ಸುತ್ತಿನಲ್ಲಿ ಗೆಲುವಿನ ಗುರಿ ತಲುವುವಲ್ಲಿ ವಿಫಲರಾದ ಮಾಜಿ ಶಾಸಕ ಪಿ. ಎಚ್. ಪೂಜಾರ ಎರಡನೇ ಸ್ಥಾನಕ್ಕಾಗಿ ಎರಡನೇ ಸುತ್ತಿನ ಮತ ಎಣಿಕೆಗೆ ಕಾಯಬೇಕಾಯಿತು. ಈ ಹಂತದಲ್ಲಿ ಮೊದಲ ಸುತ್ತಿನಲ್ಲಿ ನಿಗದಿತ ಮತಗಳಿಗಿಂತ ನೂರಕ್ಕೂ ಹೆಚ್ಚು ಕಡಿಮೆ ಮತಗಳನ್ನು ಪಡೆದ ಪೂಜಾರ ಎರಡನೇ ಸುತ್ತಿನಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ವಿರುದ್ಧ ತೀವ್ರ ಪೈಪೋಟಿ ನಡೆಸಬೇಕಾಯಿತು. ಅಂತೂ ಇಂತೂ ಮುಸ್ಸಂಜೆ ವೇಳೆಗೆ ಪಿ. ಎಚ್. ಪೂಜಾರ ಗೆಲುವಿನ ನಗೆ ಬೀರಿದರು.
ತಮ್ಮ ಗೆಲುವಿನ ಕುರಿತು ಬಸವ ನಾಡು ವೆಬ್ ಜೊತೆ ಮಾತನಾಡಿದ ಸುನೀಲಗೌಡ ಪಾಟೀಲ, ತಾವು ತಮಗೆ ಸಿಕ್ಕ ಮೂರು ವರ್ಷಗಳಲ್ಲಿ ಮಾಡಿದ ಮತದಾರರ ಪರ ಕೆಲಸಗಳು, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಶಾಸಕರಾದ ಎಂ. ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ಆನಂದ ನ್ಯಾಮಗೌಡ, ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ, ಮಾಜಿ ಶಾಸಕರಾದ ಎಸ್. ಜಿ. ನಂಜಯ್ಯನಮಠ, ಉಮಾಶ್ರೀ, ವಿಜಯಾನಂದ ಕಾಶಪ್ಪನವರ, ಜೆ. ಟಿ. ಪಾಟೀಲ, ಪ್ರೊ. ರಾಜು ಆಲಗೂರ ಮಾಡಿರುವ ಕೆಲಸ, ಕಾಂಗ್ರೆಸ್ ಮುಖಂಡರಾದ ಹಮೀದ ಮುಶ್ರಿಫ್, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರು ಶ್ರಮ ಮತ್ತು ಮತದಾರರ ಆಶೀರ್ವಾದದಿಂದ ಗೆಲುವು ಸಾಧಿಸಿರುವುದಾಗಿ ತಿಳಿಸಿದರು.
ತಮ್ಮ ಗೆಲುವನ್ನು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಸಲ್ಲಿಸುವುದಾಗಿ ತಿಳಿಸಿದ ಅವರು, ಪಕ್ಷ ತಮ್ಮ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿ ಮುಂಬರುವ ದಿನಗಳಲ್ಲಿ ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬಲಪಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಭಾಷ ಛಾಯಾಗೋಳ, ಟಪಾಲ ಎಂಜಿನಿಯರ್, ಡಾ. ಮಹಾಂತೇಶ ಬಿರಾದಾರ, ಡಾ,. ಗಂಗಾಧರ ಸಂಬಣ್ಣಿ, ಉದ್ಯಮಿ ಅರುಣ ಮಾಚಪ್ಪನವರ, ದಿನೇಶ ಹಳ್ಳಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ತಮ್ಮ ಗೆಲುವಿನ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ, ತಮ್ಮ ಗೆಲುವಿಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಒಗ್ಗಟ್ಟು ಕಾರಣ. ಗೆಲುವಿನ ಶ್ರೆಯಸ್ಸು ಪಕ್ಷದ ಮುಖಂಡರಿಗೆ ಸಲ್ಲುತ್ತದೆ. ಮೊದಲ ಸುತ್ತಿನಲ್ಲಿಯೇ ಗೆಲುವು ನಿರೀಕ್ಷಿಸಿದ್ದೆ. ಆದರೆ, ಎರಡನೇ ಸುತ್ತಿನವರೆಗೂ ಕಾಯಬೇಕಾಯಿತು. ಇದಕ್ಕೆ, ಜಾತಿ ಮತ್ತು ಹಣದ ಪ್ರಭಾವ ಕಾರಣವಾಗಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಂಡು ಬಿಜೆಪಿಯನ್ನು ಮತ್ತಷ್ಟು ಬಲಿಷ್ಠ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ಈ ಚುನಾವಣೆಯಲ್ಲಿ ಸೋತ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ನನ್ನನ್ನು ಕಣಕ್ಕಿಳಿಸಿದ್ದ ಮತದಾರರು ಅವರಿಗೆ ಸರಿಯಾದ ತಿಳುವಳಿಯಾಗಿಲ್ಲ. ಅದರಿಂದ ತಮ್ಮ ಸೋಲಾಗಿದೆ. ಮತದಾರರು ಗೊಂದಲದಿಂದಾಗಿ ನನಗೆ ಬರಬೇಕಾದ ಪ್ರಥಮ ಪ್ರಾಶಸ್ತ್ಯದ ಮತಗಳು ಸಾಕಷ್ಟು ಸಂಖ್ಯೆಯಲ್ಲಿ ಬರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕಿದ ಮತದಾರರು ತಮ್ಮ ಎರಡನೇ ಪ್ರಾಶಸ್ತ್ಯದ ಮತಗಳನ್ನು ನನಗೆ ಹಾಕಿದ್ದಾರೆ. ಅವರು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ತಮ್ಮ ಪಕ್ಷಕ್ಕೆ ಮತ್ತು ಎರಡನೇ ಪ್ರಾಶಸ್ತ್ಯದ ಮತವನ್ನು ನನಗೆ ನೀಡಿದ್ದಾರೆ. ಇನ್ನು ಮುಂದೆ ರಾಜಕೀಯದಲ್ಲಿ ಮುಂದುವರೆಯುವ ಮತ್ತು ಸಮಾಜ ಸೇವೆ ಮಾಡುವ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.