ವಿಪ ಚುನಾವಣೆ: 4000 ಮತಗಳನ್ನು ಪಡೆದು ಗೆಲ್ಲುವೆ- ಮಲ್ಲಿಕಾರ್ಜುನ ಲೋಣಿ

ವಿಜಯಪುರ : ವಿಧಾನ ಪರಿಷತ ಚುನಾವಣೆಯಲ್ಲಿ 4000 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲ್ಲುವುದಾಗಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ವಿಶ್ಬಾಸ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ವಿ. ಭ. ದರಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ಈ ಚುನಾವಣೆಯಲ್ಲಿ ಶೇ. 100 ರಷ್ಟು ಗೆಲ್ಲುವ ವಿಶ್ವಾಸವಿದೆ. ಎಲ್ಲ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ನನಗೆ ಮತ ಹಾಕುವ ಮೂಲಕ ತಮ್ಮ ಅಭಿಮಾನವನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಖಂಡಿತವಾಗಿಯೂ ನಾನು ಜಯ ಗಳಿಸುತ್ತೇನೆ. ನನ್ನ ವಿರುದ್ಧ ಕುತಂತ್ರಗಳನ್ನು ಮಾಡಲಾಗಿದೆ. ರಾಜಕೀಯಕ್ಕೆ ಬರಬಾರದು ಎಂಬಂತೆ ರಾಜಕಾರಣ ಮಾಡಿದ್ದಾರೆ. ಭಗವಂತ ನನ್ನ ಪರ ಇದ್ದಾನೆ ಎಂದು ಹೇಳಿದರು.

ಚುನಾವಣೆಯ ಕೊನೆಯ ಘಳಿಗೆಯಲ್ಲಿ ಮತದಾರರ ಮನಸ್ಸನ್ನು ಬದಲಿಸಲು ಈ ಕುತಂತ್ರ ಮಾಡಿದ್ದಾರೆ ಇದು ಸರಿಯಲ್ಲ. ಆದರೂ, ಎಲ್ಲ ಮತದಾರರು ನನಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಧೈರ್ಯ ಕಳೆದುಕೊಳ್ಳಬೇಡಿ ಎಂದು ಬೆಂಬಲ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಎರಡೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನಸ್ಸನ್ನು ಗೆಲ್ಲುವಲ್ಲಿ ವಿಓಲರಾಗಿದ್ದಾರೆ. ಮತಗಳನ್ನು ಗೆಲ್ಲುವಲ್ಲಿ ಪಡೆಯಲೂ ವಿಫಲರಾಗಿದ್ದಾರೆ ಎಂದು ಹೇಳಿದ ಅವರು, ಚುನಾವಣೆಗೂ ಮುಂಚೆ ಅವರಿಬ್ಬರೂ ಒಪ್ಪಂದ ಮಾಡಿಕೊಂಡಿದ್ದರು. ‌ಮತದಾರರ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಮತದಾರರಿಗೆ ಇವರ ತಂತ್ರ ಗೊತ್ತಿದೆ. ಎರಡೂ ಪಕ್ಷಗಳ ಬಗ್ಗೆ ಮತದಾರರು ಮುನಿಸಿಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿದ ತೋರಿಸಲಿದ್ದಾರೆ ಎಂದು ಅವರು ತಿಳಿಸಿದರು.

ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ದೂರು ಕೊಟ್ಟಿದ್ದೇನೆ. ಚುನಾವಣೆ ಮುಗಿದ ನಂತರ ಹೋರಾಟ ಆರಂಭಿಸುತ್ತೇನೆ. ಮಾಧ್ಯಮಗಳ ಮೂಲಕ ಬಹಿರಂಗ ಪಡಿಸುತ್ತೇನೆ. ಕಾನೂನು ಮೂಲಕವೂ ಹೋರಾಟ ಮಾಡುತ್ತೇನೆ. ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಬಸವಣ್ಣ ಹುಟ್ಟಿದ ನಾಡಿನಲ್ಲಿ ಇಂಥ ರಾಜಕಾರಣ ಮಾಡಬಾರದು. ಈ ವಿಚಾರದಲ್ಲಿ ನಾನು ವೈಯಕ್ತಿಕವಾಗಿ ಹೋರಾಟ ಮಾಡುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌