ವಿಜಯಪುರ: ಗೆಲುವು ಸಾಧಿಸಿದ ಸುಮಾರು 11 ಗಂಟೆಗಳ ಬಳಿಕ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಗೆಲುವಿನ ಸರ್ಟಿಫಿಕೇಟ್ ಪಡೆದಿದ್ದಾರೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆ ಮತ ಎಣಿಕೆ ಮಂಗಳವಾರ ವಿಜಯಪುರ ನಗರದ ವಿ. ಭ. ದರಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮ.12ರ ಸುಮಾರಿಗೆ ನಿಗದಿಗಿಂತ ಅತೀ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಜಯಶಾಲಿಯಾದರು. ನಂತರ ಮಧ್ಯಾಹ್ನವೇ ಗೆಲುವಿನ ಸರ್ಟಿಫಿಕೇಟ್ ಪಡೆಯಲು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಆಗ, ಇನ್ನೋಂದು ಸ್ಥಾನದ ಮತ ಎಣಿಕೆ ಕಾರ್ಯ ನಡೆದಿತ್ತು. ಎರಡೂ ಸ್ಥಾನಗಳ ಮತ ಎಣಿಕೆ ಮುಕ್ತಾಯವಾದ ಬಳಿಕ ಗೆಲುವಿನ ಸರ್ಟಿಪಿಕೇಟ್ ನೀಡಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆ ಮನೆಗೆ ಮರಳಿದರು.
ಸಂ. 6.45ರ ಸುಮಾರಿಗೆ ಮತ ಎಣಿಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸುನೀಲಗೌಡ ಪಾಟೀಲ ಮತ ಎಣಿಕೆ ಕೇಂದ್ರಕ್ಕೆ ಬಂದರು. ಆದರೆ, ಕೇಂದ್ರ ಚುನಾವಣೆ ಆಯೋಗದ ಕ್ಲಿಯರೆನ್ಸ್ ಸಿಕ್ಕ ಬಳಿಕ ತಡರಾತ್ರಿ 11ರ ಸುಮಾರಿಗೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಗೆಲುವಿನ ಸರ್ಟಿಫಿಕೇಟ್ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಗಂಗಾಧರ ಸಂಬಣ್ಣಿ, ಪ್ರಶಾಂತ ದೇಸಾಯಿ, ಡಾ. ಮಹಾಂತೇಶ ಬಿರಾದಾರ, ಅರುಣ ಮಾಚಪ್ಪನವರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.