ಹಾಲುಮತಸ್ಥರು ಎಲ್ಲ ಸಂಸ್ಕಾರಗಳನ್ನು ಗುರುಒಡೆಯರ ಪೌರೋಹಿತ್ಯದಲ್ಲಿ ನೆರವೇರಿಸಬೇಕು- ಚಂದ್ರಕಾಂತ ಬಿಜ್ಜರಗಿ

ವಿಜಯಪುರ: ಹಾಲುಮತ ಸಮುದಾಯಕ್ಕೆ ಒಡೆಯರು ಕುಲಗುರುಗಳು. ಆದ್ದರಿಂದ ಹಾಲುಮತಸ್ಥರ ಮನೆಯಲ್ಲಿ ನಡೆಯುವ ನಿಶ್ಚಿತಾರ್ಥ, ವಿವಾಹ, ಜವಳ ಮುಂತಾದ ಸಂಸ್ಕಾರಗಳ ಪೌರೋಹಿತ್ಯಕ್ಕಾಗಿ ಬೇರೆ ಮತದವರನ್ನು ಆಹ್ವಾನಿಸುವ ಬದಲು ನಮ್ಮ ಧರ್ಮದ ಗುರುಗಳಾದ ಗುರುಒಡೆಯರನ್ನೇ ಅಹ್ವಾನಿಸಬೇಕು ಎಂದು ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಹೇಳಿದರು.

ವಿಜಯಪುರ ನಗರದ ಜೇಲದರ್ಗಾದಲ್ಲಿರುವ ಹಳೆಯ ಶ್ರೀ ವಿಠ್ಠಲ ಮಂದಿರದಲ್ಲಿ ನಡೆದ ಹಾಲುಮತ ಗುರು-ಒಡೆಯರ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಒಂದು ವೇಳೆ ಗುರುಒಡೆಯರು ಲಭ್ಯವಿಲ್ಲದಿದ್ದರೆ ಪಟ್ಟದ ಪೂಜಾರಿಗಳನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಪ್ರಪಂಚದ ಸರ್ವಧರ್ಮಗಳ ತಾಯಿಸ್ಥಾನದಲ್ಲಿರುವ ಹಾಲುಮತಕ್ಕೆ ತನ್ನದೇ ಆದ ಪೌರೋಹಿತ್ಯ ವರ್ಗ ಮತ್ತು ಪ್ರತ್ಯೇಕವಾದ ಪರಂಪರೆಯಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಮತ-ಧರ್ಮಗಳ ಪ್ರಭಾವಕ್ಕೆ ಒಳಗಾಗಿ ಹಾಲುಮತಸ್ಥರು ತಮ್ಮ ಸಂಸ್ಕಾರ ಮತ್ತು ಗತವೈಭವದ ಇತಿಹಾಸವನ್ನು ಮರೆತಿದ್ದರಿಂದ ಸಮಾಜವು ಕೇಳಮಟ್ಟಕ್ಕೆ ಜಾರುತ್ತಿದೆ. ಈ ಕಾರಣದಿಂದ ಇಂದು ಧರ್ಮಗ್ರಂಥ ರಚಿಸುವ ಅನಿವಾರ್ಯತೆಯಿಂದ 25 ಅಧ್ಯಾಯಗಳಲ್ಲಿ ಹಾಲುಮತ ಧರ್ಮಗ್ರಂಥ ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಗುರು ಪರಂಪರೆ ಮತ್ತು ದೀಕ್ಷೆಗಳು ಎಂಬ ಅಧ್ಯಾಯದಲ್ಲಿ ಯಾವುದೇ ವಿಷಯಗಳು ಕಣತಪ್ಪಿನಿಂದ ಹೋಗಬಾರದೆಂದು ಹಾಲುಮತ ಗುರುಒಡೆಯರ ಧರ್ಮಸಭೆ ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆ ವಹಿಸಿ ಗುರುಒಡೆಯರಿಂದ ಸಲಹೆ ಸೂಚನೆಗಳನ್ನು ಪಡೆದ ಚಂದ್ರಕಾಂತ ಬಿಜ್ಜರಗಿಯವರು ತಮ್ಮ ವಿಚಾರಗಳನ್ನು ಹೇಳಿದರು.

ಈ ಸಭೆಯಲ್ಲಿ ಗುರುಒಡೆಯರ ನೀತಿಸಂಹಿತೆ, ಆಚಾರ-ವಿಚಾರ-ಪೂಜಾ ಪದ್ಧತಿಗಳ ಬಗ್ಗೆ ಸುಧಿರ್ಘವಾಗಿ ಚರ್ಚೆ ನಡೆಯಿತು. ‌ಹಾಲುಮತ ಒಡೆಯರು ಮೊದಲು ನೀತಿವಂತರಾಗಿರಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗಿರಬಾರದು. ಪೂಜೆಯ ಸಮಯದಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು. ಕೆಲವರು ಫಿಟ್‍ಪ್ಯಾಂಟ ಧರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು. ಒಡೆಯರು ಮಧ್ಯ-ಮಾಂಸಗಳಿಂದ ದೂರವಿರಬೇಕು. ಮಿತಹಾರಿಯಾಗಿರಬೇಕು. ಹಾಲುಮತಸ್ಥರ ಮನೆಗಳಲ್ಲಿ ಸಂಸ್ಕಾರಗಳನ್ನು ನೆರವೇರಿಸುವ ಸಮಯದಲ್ಲಿ ಧಾರ್ಮಿಕ ವಸ್ತ್ರಗಳನ್ನು ಧರಿಸಿರಬೇಕು. ನೈವೇದ್ಯಗಳಲ್ಲಿ ಸಿಹಿಯಾದ ಶಾಖಹಾರಿ ಬಳಸಬೇಕು ಎಂದು ಅವರು ಹೇಳಿದರು.

ಡೊಳ್ಳಿನ ಹಾಡುಗಳ ತಂಡಗಳು ಬೇಕಾಬಿಟ್ಟಯಾಗಿ ಪಾಲುಮತಸ್ಥರ ದೈವಗಳನ್ನು ನಿಂದಿಸಿ ಹಾಡುತ್ತಿದ್ದು, ಅವರಿಂದ ಧರ್ಮ ಹಾಳಾಗುತ್ತಿದೆ. ಆದ್ದರಿಂದ ಡೊಳ್ಳಿನ ಗಾಯನ ತಂಡಗಳು ದೈವಗಳ ಚರಿತ್ರೆ, ಅವರ ಹೊಗಳಿಕೆ, ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳನ್ನು ಮಾತ್ರ ಹಾಡಬೇಕೆ ಹೊರತು ಯಾವುದೇ ದೇವರ ನಿಂದನೆಗಳಲ್ಲಿ ತೊಡಗಬಾರದು. ದೇವರ ನಿಂದನೆ ಮಾಡುವ ಮತ್ತು ಚಾರತ್ರೆ ವಧೆ ಮಾಡುವ ತಂಡಗಳಿಗೆ ಯಾರು ಅಹ್ವಾನ ನೀಡಬಾರದು. ಗುಟ್ಕಾ,, ಕುರುಕುರೆಯ ಪಾಕಿಟುಗಳನ್ನು ಕೊರಳಿಗೆ ಮಾಲೆಯಂತೆ ಧರಿಸಿ ನರ್ತಿಸುವುದು ನಿಲ್ಲಬೇಕು. ಕೆಲವು ಡೊಳ್ಳಿನ ಗಾಯನ ತಂಡದ ಯುವತಿಯರು ಬಲುನುಗಳನ್ನು ಎದೆಗೆ ಮತ್ತು ಹಿಂಬದಿಗೆ ಕಟ್ಟಿಕೊಂಡು ಕ್ಯಾಬರೆ ತರಹದ ನೃತ್ಯ ಮಾಡುತ್ತಿರುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಇಂಥವರಿಂದ ನಮ್ಮ ಧರ್ಮ ಟೀಕೆಗೆ ಗುರಿಯಾಗುತ್ತಿದೆ ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.

ಗುರುಗಳಿಗೆ ಬಫೆ ಊಟ ನೀಡದೆ ಗೌರವದಿಂದ ದೇವರ ಕೊಣೆಯಲ್ಲಿ ಮಣೆಹಾಕಿ ಅನ್ನಪ್ರಸಾದ ನೀಡಬೇಕು. ಶಿಷ್ಯರು ಗುರುಗಳನ್ನು ಸಮಾನ ದೃಷ್ಟಿಯಿಂದ ಗೌರವಿಸಬೇಕು. ಅವರಲ್ಲಿ ಬೇದ-ಭಾವ ಮೇಲು-ಕೀಳಾಗಿ ಕಾಣಬಾರದು. ಒಡೆಯರು ಅಕ್ಷರಸ್ಥರಾಗಿ ಸಕಲ ವಿದ್ಯೆಗಳನ್ನು ಕಲಿತಿರಬೇಕು. ನಮ್ಮ ಸಮಾಜದ ಗುರುಗಳಿಗೆ ಧಾರ್ಮಿಕ ವಿಧಿ-ವಿಧಾನಗಳನ್ನು ಕಲಿಸಿಕೊಡುವ ಪಾಠಶಾಲೆ ತೆರೆಯಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು


ಹಾಲುಮತ ಮಹಾಪುರುಷರ ನಿಜವಾದ ಚರಿತ್ರೆಗಳನ್ನು ದಾಖಲಿಸಬೇಕು. ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಹಾಲುಮತ ಗುರು ಒಡೆಯರ ಸಭೆ ಆಯೋಜಿಸಬೇಕು ಎಂದು ಸಭೆಯ ಒಪ್ಪಿಗೆ ಪಡೆಯಲಾಯಿತು.

ಈ ಸಭೆಯಲ್ಲಿ ಸಿದ್ಧಯ್ಯ ಸಣ್ಣಯ್ಯ ಗುರಿವಿನ ಸರೂರ, ಸಿದ್ಧಣ್ಣ ಪೂಜಾರಿ ಶಿರನಾಳ, ಶರಭಯ್ಯ ಗುರುಗಳು ಸರೂರ, ಶಾಂತಯ್ಯ. ಹು ಗುರುವಿನ ಸರೂರ, ದೇವೇಂದ್ರ ಒಡೆಯರ ಮಖನಾಪುರ, ಪದ್ಮಯ್ಯ ಸ್ವಾಮಿ ಒಡೆಯರ ಬೂದಿಹಾಳ(ಬೆಂಗಳೂರು), ನಿಂಗಯ್ಯ ಒಡೆಯರ ಗುಡುರು. ಗಂಗಯ್ಯ ಅಮೋಘಿಮಠ ಹಿರೆಕುಂಬಿ (ಕುಂದಗೋಳ), ಕಣಯ್ಯ ಮಹಾರಾಜ ಗುಬ್ಬೆವಾಡ, ವಿಠ್ಠಲ ಒಡೆಯರ, ಬಸಯ್ಯಸಾಮಿ ಬೂದಿಹಾಳ, ಶಿವಯ್ಯಸ್ವಾಮಿ ಒಡೆಯರ ಹೊನಗನಹಳ್ಳಿ, ಜಗದೀಶಯ್ಯ ಒಡೆಯರ ಬಾದಾಮಿ, ಬಸಯ್ಯ ಒಡೆಯರ, ಭೀಮರಾಜ ಒಡೆಯರ ಹಿಡಕಲ್, ಶಿವಾನಂದ ಶಿ. ಒಡೆಯರ ಮುಗಳಖೋಡ, ಬಸಯ್ಯ ಗುರುವಿನ ತೂಗುಡ್ಡ, ಮುತ್ತು ಒಡೆಯರ ತಿಕ್ಕುಂಡಿ, ಬಸವರಾಜ ಒಡೆಯರ ಗೋಕಾಕ, ಅಪ್ಪು ಪೂಜಾರಿ ಶಿರನಾಳ ಮುಂತಾದವರು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯ ಆರಂಭದಲ್ಲಿ ಹಾಲುಮತ ಕುಲದೈವ ಬೀರೇಶ್ವರ, ಕುಲಗುರು ರೇವಣಸಿದ್ಧೇಶ್ವರ ಮತ್ತು ಅಮೋಘಸಿದ್ಧರ ಭಾವಚಿತ್ರಕ್ಕೆ ಗುರುಒಡೆಯರು ಪೂಜೆ ಸಲ್ಲಿಸುವ ಮೂಲಕ ಧರ್ಮಸಭೆಗೆ ಚಾಲನೆ ನೀಡಿದರು. ಬೀರಪ್ಪ ಜುಮನಾಳ ಸ್ವಾಗತಿಸಿದರು. ಅಮೋಘ ಬೂದಿಹಾಳ ವಂದಿಸಿದರು. ಮಲ್ಲು ಬಿದರಿ‌ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌