ಗೆದ್ದರೂ ಸರ್ಟಿಫಿಕೇಟ್ ಗಾಗಿ ಕಾದು ಸುಸ್ತಾದ ಅಭ್ಯರ್ಥಿಗಳು- ಕಾರಣವೇನು ಗೊತ್ತಾ?

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಆದರೆ, ಉಭಯ ಅಭ್ಯರ್ಥಿಗಳು ಗೆಲುವಿನ ಸರ್ಟಿಪಿಕೇಟ್ ಗಾಗಿ ತಡರಾತ್ರಿವರೆಗೆ ಕಾಯ್ದ ಘಟನೆ ವಿಜಯಪುರದಲ್ಲಿ ನಡೆದಿದೆ.  ವಿಜಯಪುರ ನಗರದಲ್ಲಿರುವ ವಿ. ಭ. ದರವಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ಈ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಕಾದು ಕಾದು ಸುಸ್ತಾದ ಘಟನೆ ನಡೆಯಿತು.

ನೀಲಗೌಡ ಪಾಟೀಲ(ಕಾಂಗ್ರೆಸ್) ಮತ್ತು ಪಿ. ಎಚ್. ಪೂಜಾರ(ಬಿಜೆಪಿ) ಗೆಲುವು ದಾಖಲಿಸಿದ್ದಾರೆ. ಸುನೀಲಗೌಡ ಪಾಟೀಲ ಗೆಲುವು ದಾಖಲಿಸಿ ಸುಮಾರು 11 ಗಂಟೆಗಳು ಕಳೆದಿವೆ. ಅಲ್ಲದೇ, ಪಿ. ಎಚ್. ಪೂಜಾರ ವಿಜಯಿಯಾಗಿ ಸುಮಾರು ಮೂರ್ನಾಲ್ಕು ಗಂಟೆಗಳು ಕಳೆದಿವೆ. ಆದರೆ, ಕೇಂದ್ರ ಚುನಾವಣೆ ಆಯೋಗದಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಉಭಯ ಅಭ್ಯರ್ಥಿಗಳು ಕಾದು ಕುಳಿತ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರ ಜೊತೆ ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ಅರುಣ ಮಾಚಪ್ಪನವರ ಜೊತೆಗಿದ್ದರು.  ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಜೊತೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಜಯಪುರ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಜೊತೆಗಿದ್ದರು.

ನಂತರ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ನಿರಂತರ ಪ್ರಯತ್ನದ ಬಳಿಕ ತಡರಾತ್ರಿ ವಿಜಯಿ ಅಭ್ಯರ್ಥಿಗಳಿಗೆ ಗೆಲುವಿನ ಸರ್ಟಿಫಿಕೇಟ್ ವಿತರಿಸಲಾಯಿತು.

Leave a Reply

ಹೊಸ ಪೋಸ್ಟ್‌