ವಿಜಯಪುರ: ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೋಮ್ಮೆ ಸಾಬೀತಾಗಿದೆ ಎಂಬ ಚರ್ಚೆಗಳು ಈಗ ಜಿಲ್ಲಾದ್ಯಂತ ನಡೆಯುತ್ತಿವೆ. ವಿಧಾನ ಪರಿಷತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ತಿಣುಕಾಟಕದ ಗೆಲುವು ಇದಕ್ಕೆ ಪುಷ್ಠಿ ನೀಡಿದಂತಿದೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಇಬ್ಬರು ಬಿಜೆಪಿ ಸಂಸದರು, ಇಬ್ಬರು ವಿಧಾನ ಪರಿಷತ ಸದಸ್ಯರು, ಏಳು ಜನ ಶಾಸಕರಿದ್ದಾರೆ. ಆದರೆ, ಮಂಗಳವಾರ ಪ್ರಕಟವಾದ ವಿಧಾನ ಪರಿಷತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಹಾಲಿ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು ಮತ್ತು ಕಾರ್ಯಕರ್ತರ ಶ್ರಮದಿಂದಾಗಿ ಮೊದಲ ಸುತ್ತಿನಲ್ಲಿಯೇ ನಿಗದಿಗಿಂತಲೂ ಹೆಚ್ಚು ಪ್ರಾಥಮಿಕ ಪ್ರಾಶಸ್ತ್ಯದ ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 2013ರಲ್ಲಿ ಬಾರಿಸಿದ್ದ ಜಯದ ಮುನ್ಸೂಚನೆ ನೀಡಿದ್ದಾರೆ.
ಆದರೆ, ಇತ್ತ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರಕಾರ, ಇಬ್ಬರು ಸಂಸದರು, ಏಳು ಜನ ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಪ್ರಥಮ ಪ್ರಾಶಸ್ತ್ಯ ಮತಗಳನ್ನು ನಿಗದಿಗಿಂತ ಕಡಿಮೆ ಪಡೆದರು. ಅಲ್ಲದೇ, ದ್ವಿತೀಯ ಸುತ್ತಿನಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರಿಂದ ಪ್ರಬಲ ಪೈಪೋಟಿ ಪಡೆದು ಗೆಲುವು ಸಾಧಿಸಿರುವುದು ಬಿಜೆಪಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆಯಾದರೂ ಇಷ್ಟೋಂದು ಕಷ್ಚಕರ ಗೆಲುವು ಉಭಯ ಜಿಲ್ಲೆಗಳ ಬಿಜೆಪಿ ನಾಯಕರ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿದೆ.
ಹಾಗೆ ನೋಡಿದರೆ, ಕಳೆದ ವಿಧಾನ ಪರಿಷತ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದವು. ಈ ಬಾರಿ ಒಂದು ಸ್ಥಾನ ಗೆದ್ದಿರುವ ತೃಪ್ತಿ ಬಿಜೆಪಿಗೆ ಇದೆಯಾದರೂ, ಜಯದ ವಿಳಂಬ ಈಗ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತಿಗೆ ಪುಷ್ಠಿ ನೀಡಿದಂತಾಗಿದೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸ್ವತಃ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಬಂದು ಭರ್ಜರಿ ಪ್ರಚಾರ ಮಾಡಿ ಹೋಗಿದ್ದರು. ಅಲ್ಲದೇ, ಇತ್ತೀಚೆಗಷ್ಟೇ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ನಿರೀಕ್ಷೆಗೂ ಮೀರಿ 30000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಉತ್ತಮ ವಾತಾವರಣ ಬಿಜೆಪಿ ಪರವಾಗಿರಬೇಕಿತ್ತು. ಆದರೆ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಬಿಜೆಪಿಗರ ಎಲ್ಲ ಲೆಕ್ಕಾಚಾರಗಳಿಗೂ ಪ್ರಬಲ ಪ್ರತಿರೋಧ ತೋರಿರುವುದು ಈ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
ಗೆಲುವಿನ ಬಳಿಕ ಮಾತನಾಡಿದ ಬಿಜೆಪಿ ಅಭ್ರರ್ಥಿ ಪಿ. ಎಚ್. ಪೂಜಾರ, ಎಲ್ಲ ನಾಯಕರು, ಕಾರ್ಯಕರ್ತರ ಸಂಘಟಿತ ಪ್ರಯತ್ನದ ಫಲವಾಗಿ ತಾವು ಗೆಲುವ ಸಾಧಿಸಿದ್ದೇನೆ. ಫಲಿತಾಂಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ವಿಧಾನ ಪರಿಷತ ಬಿಜೆಪಿ ನೂತನ ಸದಸ್ಯ ಪಿ. ಎಚ್. ಪೂಜಾರ ಹೇಳಿರುವುದು ಕೂಡ ಇದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ, ಈ ಚುನಾವಣೆಯಲ್ಲಿ ತಮಗೆ ಜಯ ತಡವಾಗಲು ಜಾತಿ ಮತ್ತು ದುಡ್ಡು ಕೆಲಸ ಮಾಡಿದೆ ಎಂದು ಮಾರ್ಮಿಕವಾಗಿ ಹೇಳಿರುವುದೂ ಕೂಡ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಬಿಜೆಪಿಯಲ್ಲಿನ ಶೀತಲ ಸಮರಕ್ಕೆ ಉದಾಹರಣೆ ಎಂಬುದಂತಿದೆ.
ಬಿಜೆಪಿ ಈಗಲಾದರೂ ಎಚ್ಚರಗೊಳ್ಳದಿದ್ದರೆ, 2013ರ ಫಲಿತಾಂಶ ಉಭಯ ಜಿಲ್ಲೆಗಳಲ್ಲಿ ಮರುಕಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೆ ಚರ್ಚಿಸುತ್ತಿರುವುದು ಈಗ ಗಮನ ಸೆಳೆದಿದೆ.