ಪಿ. ಎಚ್. ಪೂಜಾರ ಗೆದ್ದರೂ ಬಿಜೆಪಿಯಲ್ಲಿ ಸಂಭ್ರಮಿಸಿದವರ ಸಂಖ್ಯೆ ಕಡಿಮೆ-ಕಾರಜೋಳ, ಚರಂತಿಮಠ ಸೇರಿ ಕೆಲವರಿಂದ ಮಾತ್ರ ಫೇಸ್ ಬುಕ್ ನಲ್ಲಿ ಅಭಿನಂದನೆ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ದ್ವಿತೀಯ ಸುತ್ತಿನಲ್ಲಿ ಕಷ್ಟಪಟ್ಟು ಆಯ್ಕೆಯಾಗಿದ್ದಾರೆ. ಆದರೆ ಇವರ ಗೆಲುವು ಬಿಜೆಪಿಗರಿಗೆ ಅಷ್ಟೊಂದು ಖುಷಿ ತಂದಂತೆ ಕಾಣುತ್ತಿಲ್ಲ.

ಕೆಲವು ಜನ ನಾಯಕರು ಮತ್ತು ಕಾರ್ಯಕರ್ತರನ್ನು ಹೊರತುಪಡಿಸಿದರೆ ಉಳಿದವರು ಎಷ್ಟರ ಮಟ್ಟಿಗೆ ಅಭಿನಂದನೆ ಶುಭಾಶಯ ಕೋರಿದ್ದಾರೆ ಎಂಬುದು ಈಗ ಬಿಜೆಪಿ ಕಾರ್ಯಕರ್ತರಲ್ಲಿ ಚರ್ಚೆಯಾಗುತ್ತಿದೆ.

ಬಿಜೆಪಿ ಮತ್ತು ಬಿಜೆಪಿಯ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರೆಂದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿವುದಕ್ಕೆ ಸಿದ್ಧಹಸ್ತರು. ಆದರೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಮಟ್ಟಿಗೆ ಪಿ. ಎಚ್. ಪೂಜಾರ ಗೆಲುವು ಅಪಥ್ಯ ಎನಿಸಿದೆಯಾ ಎಂಬ ಸಂಶಯ ಕಾರ್ಯಕರ್ತರಲ್ಲಿ ಮೂಡಿದೆ. ಇದಕ್ಕೆ ಕಾರಣ ಪಿ. ಎಚ್. ಪೂಜಾರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಚಿವ ಗೋವಿಂದ ಕಾರಜೋಳ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಬೆಳಗಾವಿ ವಿಭಾಗಿಯ ಸಂಘಟಕ ಪ್ರಕಾಶ ಅಕ್ಕಲಕೋಟ, ಬಿಜೆಪಿ ಮುಖಂಡರಾದ ಗೋಪಾಲ ಕಾರಜೋಳ, ಉಮೇಶ ಕಾರಜೋಳ, ರಾಮಸಿಂಗ್ ಕನ್ನೊಳ್ಳಿ, ರಾಜೇಂದ್ರ ವಾಲಿ, ವಿಜಯ ಜೋಷಿ, ವಿವೇಕ ಡಬ್ಬಿ ಹಾಗೂ ಕೆಲವು ಮುಖಂಡರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ತಮ್ಮ ಫೇಸ್ ಬುಕ್ ಖಾತೆಗಳಲ್ಲಿ ಶುಭಾಷಯ ಕೋರಿ ಸಂತಸ ಹಂಚಿಕೊಂಡಿದ್ದಾರೆ.

ಸಚಿವ ಗೋವಿಂದ ಕಾರಜೋಳ ಅವರಿಂದ ಅಭಿನಂದನೆ.

ಶಾಸಕ ವೀರಣ್ಣ ಚರಂತಿಮಠ ಅವರಿಂದ ಅಭಿನಂದನೆ.

ಪ್ರಕಾಶ ಅಕ್ಕಲಕೋಟ ಅವರಿಂದ ಅಭಿನಂದನೆ.

ಗೋಪಾಲ ಮತ್ತು ಉಮೇಶ ಕಾರಜೋಳ ಅವರಿಂದ ಅಭಿನಂದನೆ.

ವಿಜಯ ಜೋಶಿ, ರಾಜೇಂದ್ರ ವಾಲಿ, ರಾಮಸಿಂಗ್ ಕನ್ನೊಳ್ಳಿ, ವಿವೇಕ ಡಬ್ಬಿ ಅವರಿಂದ ಅಭಿನಂದನೆ

ಆದರೆ ವಿಜಯಪುರ ಮತ್ತು ಬಾಲ ಕೋಟೆ ಜಿಲ್ಲಾ ನಾಯಕರ ಫೇಸ್ ಬುಕ್ ಖಾತೆಗಳಲ್ಲಿ ಯಾವುದೇ ಶುಭಾಶಯ ಮತ್ತು ಅಭಿನಂದನೆಗಳು ಸಲ್ಲಿಕೆ ಆಗದಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ನಿನ್ನೆ ಪಿ. ಎಚ್. ಪೂಜಾರ ಗೆಲುವು ಸಾಧಿಸಿದ ಬಳಿಕ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹಾಗೂ ಕೆಲವೇ ಕೆಲವು ಜನ ಗೆಲುವಿನ ಸರ್ಟಿಫಿಕೇಟ್ ನೀಡುವವರೆಗೂ ವಿಜಯಪುರ ನಗರದ ವಿ. ಭ. ದರ್ಬಾರ್ ಹೈಸ್ಕೂಲ್ ಮತಗಟ್ಟೆಯಲ್ಲಿ ಉಪಸ್ಥಿತರಿದ್ದದ್ದು ಇದಕ್ಕೆ ಪುಷ್ಠಿ ನೀಡುವಂತಿದೆ. ಬೇರಾವ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

ವಿಧಾನ ಮಂಡಲ ಅಧಿವೇಶನ ಇದೇ ಸಂದರ್ಭದಲ್ಲಿ ನಡೆಯುತ್ತಿರುವುದು ಕೂಡ ಉಳಿದ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ಗೈರು ಹಾಜರಾಗಲು ಪ್ರಮುಖ ಕಾರಣ ಎಂದೆನಿಸಿದರೂ ಅದು ಕಾಕತಾಳಿಯ ಎಂದು ಸಮರ್ಥಿಸಲು ಅವಕಾಶ ನೀಡಿದಂತಿದೆ. ಆದರೆ ಈ ಎಲ್ಲ ವಿದ್ಯಮಾನಗಳು ಬಾಗಲಕೋಟೆ ಜಿಲ್ಲೆಯನ್ನು ಒಳಗೊಂಡಂತೆ ಅಖಂಡ ವಿಜಯಪುರ ಜಿಲ್ಲೆಗಳ ಬಿಜೆಪಿಯಲ್ಲಿ ಉಂಟಾಗಿರುವ ಶೀತಲ ಸಮರಕ್ಕೆ ಸಾಕ್ಷಿಯಾದಂತಿದೆ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಅಷ್ಟೇ ಅಲ್ಲ, ಬಿಜೆಪಿ ನಾಯಕರ ಮಧ್ಯೆ ಏನೇ ಶೀತಲ ಸಮರವಿರಲಿ. ತಮಗೇನು ಸಂಬಂಧವಿಲ್ಲ. ನಮ್ಮ ಸಂಭ್ರಮವನ್ನು ನಾವು ಕಾರ್ಯಕರ್ತರಾಗಿ ಆಚರಿಸೋಣ ಎಂಬ ಭಾವನೆಯೊಂದಿಗೆ ಬಿಜೆಪಿ ಕೆಳ ಹಂತದ ಕಾರ್ಯಕರ್ತರು ಸಂತೃಪ್ತರಾಗಿದ್ದಾರೆ ಎಂಬುದು ಮೇಲ್ನೊಟಕ್ಕೆ ಕಾಣಿಸುತ್ತಿದರೆ.

Leave a Reply

ಹೊಸ ಪೋಸ್ಟ್‌