ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನಗಳನ್ನು ಗಳಿಸಿವೆ.
ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮೊದಲ ಸುತ್ತಿನಲ್ಲಿಯೇ ನಿಗದಿಗಿಂತ ಅತ್ಯಧಿಕ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಆದರೆ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಶಾಸಕ ಪಿ. ಎಚ್. ಪೂಜಾರ ಗೆಲುವಿಗಾಗಿ ಬಹಳಷ್ಟು ಸಮಯ ಕಾಯಬೇಕಾಯಿತು. ಪ್ರಥಮ ಸುತ್ತಿನಲ್ಲಿ ಮಿಗದಿತ ಗುರಿ ತಲುಪದ ಅವರು, ದ್ವಿತೀಯ ಸುತ್ತಿನಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರಿಂದ ಪ್ರಬಲ ಪೈಪೋಟಿ ಎದರಿಸಿದರು.
ಸಂ. 6:.45ರ ಸುಮಾರಿಗೆ ಪಿ. ಎಚ್. ಪೂಜಾರ ಗೆಲುವು ಸಾಧಿಸಿದರು. ಆದರೆ ಈ ವಿಜಯದ ಸರ್ಟಿಫಿಕೇಟ್ ಪಡೆಯಲು ಪಿ. ಎಚ್. ಪೂಜಾರ ತಡರಾತ್ರಿವರೆಗೂ ಕಾಯಬೇಕಾಯಿತು. ಇದಕ್ಕೆ ಸಕಾರಣವೂ ಇತ್ತು. ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿಜಯಪುರ ಚುನಾವಣೆ ಅಧಿಕಾರಿಗಳು ಸಕಲ ಮಾಹಿತಿಯನ್ನು ರಾಜ್ಯ ಮತ್ತು ಕೇಂದ್ರ ಚುನಾವಣೆ ಆಯೋಗ ಗಳಿಗೆ ಕಳುಹಿಸಿದ್ದರು. ಆದರೆ ಕೇಂದ್ರ ಚುನಾವಣೆ ಆಯೋಗದಿಂದ ಕ್ಲಿಯರೆನ್ಸ್ ಬರಲು ತಡವಾಯಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಪಾಟೀಲ ಮತ್ತು ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ತಡ ರಾತ್ರಿ 11 ಗಂಟೆ ಸುಮಾರಿಗೆ ಗೆಲುವಿನ ಪ್ರಮಾಣ ಪತ್ರ ಪಡೆದರು.
ಪಿ. ಎಚ್. ಪೂಜಾರ ಅವರಿಗೆ ಬಿಜಾಪುರ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಪಿ ಸುನಿಲ ಕುಮಾರ ಗೆಲುವಿನ ಪ್ರಮಾಣ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಸಂಪತ ಕೊವಳ್ಳಿ, ವಿಜಯ್ ಜೋಶಿ, ಚಿದಾನಂದ ಚಲವಾದಿ, ರಾಜೇಂದ್ರ ವಾಲಿ, ವಿವೇಕ ಡಬ್ಬಿ, ಪ್ರಕಾಶ ಅಕ್ಕಲಕೋಟ ಮುಂತಾದವರು ಉಪಸ್ಥಿತರಿದ್ದರು.