ರಾಜಕೀಯಕ್ಕಿಂತ ಮೀಗಿಲಾದುದು ಸ್ನೇಹ, ಸಂಬಂಧ, ಮಾನವೀಯ ಮೌಲ್ಯಗಳು ಎಂಬುದಕ್ಕೆ ಸಾಕ್ಷಿ ಈ ಪ್ರಸಂಗ

ವಿಜಯಪುರ: ಇದು ಚುನಾವಣೆ ಮತ ಎಣಿಕೆ ಬಿಸಿ ಬಿಸಿ ಸಂದರ್ಭದಲ್ಲಿಯೂ ಭಾರತೀಯರಲ್ಲಿ ರಾಜಕೀಯಕ್ಕಿಂತಲೂ ಸ್ನೇಹ, ಸಂಬಂಧ ಮತ್ತು ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆಯಿದೆ ಎಂಬುದಕ್ಕೆ ಕೈಗನ್ನಡಿ ಪ್ರಸಂಗ. ದೇಶದಲ್ಲಿ ಇಂದಿಗೂ ಇಂತಹ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಸಾಕ್ಷಾತ್ ನಿದರ್ಶನ.

ಇಲ್ಲಿ ಕಾಂಗ್ರೆಸ್-ಬಿಜೆಪಿ ಎಂಬ ಭೇದ ಭಾವ ಇರಲಿಲ್ಲ. ಗತಕಾಲದ ಕ್ಷಣಗಳು, ವರ್ತಮಾನದ ವಿದ್ಯಮಾನಗಳಿಗೆ ಸಾಕ್ಷಿಯಾದ ಈ ಘಟನೆ ನಡೆದಿದ್ದು ವಿಜಯಪುರ ನಗರದಲ್ಲಿ. ಅದು ಕೂಡ ಮತ ಎಣಿಕೆ ಕೇಂದ್ರದಲ್ಲಿ.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ವಿಜಯಪುರ ನಗರದ ವಿ. ಭ. ದರ್ಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲಗೌಡ ಪಾಟೀಲ ಪ್ರಥಮ ಸುತ್ತಿನಲ್ಲಿ ಮತ ಎಣಿಕೆಯಲ್ಲಿ ನಿಗದಿಗಿಂತಲೂ ಅತೀ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಂದಿದ್ದ ಮತ ಎಣಿಕೆ ಏಜೆಂಟರು ವಿಜಯೋತ್ಸವಕ್ಕೆ ತೆರಳಿದರು.

ಆದರೆ, ಇದೇ ವೇಳೆ ಪ್ರಥಮ ಸುತ್ತಿನಲ್ಲಿಯೇ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ್ ನಿಗದಿತ ಪ್ರಥಮ ಪ್ರಾಶಸ್ತ್ಯದ ಮತಗಳಿಗಿಂತ ನೂರಕ್ಕೂ ಹೆಚ್ಚು ಮತಗಳನ್ನು ಕಡಿಮೆ ಪಡೆದರು. ಪರಿಣಾಮ ದ್ವಿತೀಯ ಸುತ್ತಿನ ಮತ ಎಣಿಕೆಗೆ ಕಾಯಬೇಕಾಯಿತು. ದ್ವಿತೀಯ ಸುತ್ತಿನಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರು ಪಿ. ಎಚ್. ಪೂಜಾರ ಅವರಿಗಿಂತಲೂ ಹೆಚ್ಚಿನ ಮತ ಫಡೆಯತೊಡಗಿದರು. ಈ ವಿದ್ಯಮಾನ ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಅವರಲ್ಲಿ ಒತ್ತಡಕ್ಕೆ ಕಾರಣವಾಯಿತು. ಫಲಿತಾಂಶದ ಬಗ್ಗೆ ದುಗುಡ ಹೆಚ್ಚಾದಂತೆ ಕಂಡುಬಂತು. ಪಕ್ಷೇತರ ಅಭ್ಯರ್ಥಿ ತಮಗಿಂತಲೂ ಹೆಚ್ಚು ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆಯುತ್ತಿರುವುದನ್ನು ಕಂಡು ಎಲ್ಲರಂತೆ ಸಹಜವಾಗಿಯೇ ಸ್ವಲ್ಪ ಟೆನ್ಶನ್ ಗೊಳಗಾದರು.

ಈ ಪ್ರಸಂಗವನ್ನು ಸೂಕ್ಷ್ಮವಾಗಿ ಗಮನಿಸಿದ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ‌ ಅವರ ಪರವಾಗಿ ಬಂದಿದ್ದ ಡಾ. ಮಹಾಂತೇಶ ಬಿರಾದಾರ ಅವರು, ಪಿ. ಎಚ್. ಪೂಜಾರ ಅವರನ್ನು ಭೇಟಿಯಾಗಿ ಮತ ಎಣಿಕೆ ನಡೆಯುತ್ತಿದ್ದ ಮೊದಲ ಮೊಹಡಿಯ ಕೊಠಡಿಯಿಂದ ಕೆಳಗಡೆ ಕರೆದುಕೊಂಡು ಬಂದರು. ಅಲ್ಲದೆ ಅವರನ್ನು ಕೆಳಗಡೆ ಗಿಡದ ನೆರಳಿನಲ್ಲಿ ಕೂಡಿಸಿ ಆತ್ಮೀಯವಾಗಿ ಮಾತನಾಡಿ ಹಳೆಯ ಸಂಬಂಧ, ಸ್ನೇಹದ ಮೂಲಕ ಸಮಾಧಾನ ಪಡಿಸಿದರು. ಅಲ್ಲದೇ, ಸ್ನೇಹಿತರೊಬ್ಬರನ್ನು ಕರೆದು ನೀರು ಕುಡಿಯಲು ನೀಡಿ ಊಟಕ್ಕೆ ವ್ಯವಸ್ಥೆ ಮಾಡಿದರು. ಬಳಿಕ ಚಹಾ ಕೂಡ ತರಿಸಿದರು. ಅಲ್ಲದೆ ಫಲಿತಾಂಶದ ಬಗ್ಗೆ ಆತಂಕವಾಗಿ ಅಗತ್ಯವಿಲ್ಲ. ಒಳ್ಳೆಯದಾಗಲಿದೆ ಎಂದು ವಿಶ್ವಾಸ ತುಂಬಿದರು.

K

ಈ ಸಂದರ್ಭದಲ್ಲಿ ಜಮಖಂಡಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಕೂಡ ಉಪಸ್ಥಿತರಿದ್ದರು. ಅಲ್ಲದೆ ಶ್ರೀಕಾಂತ್ ಕುಲಕರ್ಣಿ ಅವರ ಆಪ್ತ ಸಹಾಯಕ ಅಂಗಡಿ ಗುರಲಿಂಗಪ್ಪ ಅಂಗಡಿ ಹಾಗೂ ಕೆಲವು ಜನ ಪತ್ರಕರ್ತರೂ ಅಲ್ಲಿಯೇ ಇದ್ದರು.

ಡಾ. ಮಹಾಂತೇಶ ಬಿರಾದಾರ ಹೀಗೆ ಮಾಡಲು ಕಾರಣವಿತ್ತು. ಪಿ. ಎಚ್. ಪೂಹಾರ ಮತ್ತು ತಾವು ರಾಜಕೀಯವಾಗಿ ಈಗ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಹಳೆಯ ಸಂಬಂಧ, ಸ್ನೇಹ ಮತ್ತು ಮಾನವೀಯತೆ ಇಗಲೂ ಬೆಲೆ ಇದೆ ಎಂಬುದು ಇಲ್ಲಿ ಕಣ್ಣಿಗೆ ರಾಚುತ್ತಿತ್ತು‌ 1992 ರಿಂದ 2000ದ ವರೆಗೆ ಡಾ. ಮಹಾಂತೇಶ ಎಬಿವಿಪಿ, ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಆ ದಿನಗಳಲ್ಲಿ ಪಿ. ಎಚ್. ಪೂಜಾರ ಅಖಂಡ ಬಿಜಾಪುರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. ಅಲ್ಲದೆ ಬಾಗಲಕೋಟೆಯಿಂದ ಬಸ್ಸಿನಲ್ಲಿ ಬಂದು ವಿಜಯಪುರ ಬಸ್ ನಿಲ್ದಾಣದಲ್ಲಿ ಇಳಿದು ಆಟೋದಲ್ಲಿ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದರು. ಅಲ್ಲಿ ಪೂರ್ವ ನಿಗದಿತ ಪ್ರತಿಭಟನೆ ಮತ್ತು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂದು ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಕೆಲವೇ ಕೆಲವು ಜನ ಮುಖಂಡರ ಜೊತೆಗೂಡಿ ಪ್ರತಿಭಟನಾ ಮೆರವಣಿಗೆ ಮುಗಿದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಪಕ್ಕದಲ್ಲಿದ್ದ ಬಸ್ ನಿಲ್ದಾಣಕ್ಕೆ ತೆರಳಿ ಬಾಗಲಕೋಟೆಗೆ ಮರಳುತ್ತಿದ್ದರು.

ಕಾಲಕ್ರಮೇಣ ಡಾ. ಮಹಾಂತೇಶ ಬಿರಾದಾರ ಅಂದಿನ ಕೆಲವು ಜನ ಬಿಜೆಪಿ ನಾಯಕರ ವರ್ತನೆಗೆ ಬೇಸತ್ತು 2000 ಇಸವಿಯಲ್ಲಿ ಎಂ. ಬಿ. ಪಾಟೀಲ ಅವರ ಸ್ನೇಹ ಮತ್ತು ಪ್ರೀತಿಗೆ ಮಾರುಹೋಗಿ ಕಾಂಗ್ರೆಸ್ ಬಳಗ ಸೇರಿಸಿಕೊಂಡರು. ಅಲ್ಲದೆ ಈಗ ಎಂ. ಬಿ. ಪಾಟೀಲ ಅವರು ಪರಮಾಪ್ತರಲ್ಲಿ ಒಬ್ಬರಾಗಿದ್ದಾರೆ.

ರಾಜಕಾರಣದಲ್ಲಿ ರಾಜಕೀಯ ಏನೇ ಇದ್ದರೂ, ತತ್ವಾದರ್ಶ ಸಿದ್ಧಾಂತಗಳು ಬೇರೆ ಬೇರೆಯಾಗಿದ್ದರೂ ಸ್ನೇಹ, ಸಂಬಂಧ ಮತ್ತು ಮಾನವೀಯತೆ ಬೆಲೆ ಇದೆ. ಇದುವೇ ಭಾರತೀಯರ ಸಂಸ್ಕತಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು.

ಪಿ. ಎಚ್. ಪೂಜಾರ ಕೂಡ ಅಷ್ಟೇ ಆತ್ಮೀಯತೆಯಿಂದ ಹಳೆಯ ಘಟನೆಗಳನ್ನು ನೆನಪಿಸಿಕೊಂಡು ಗತಕಾಲದ ವೈಭವವನ್ನು ಸ್ಮರಿಸಿದರು.

ಅಷ್ಟೇ ಅಲ್ಲ, ಡಾ. ಮಹಾಂತೇಶ ಬಿರಾದಾರ ತಡರಾತ್ರಿ 11ರ ವರೆಗೂ ಜೊತೆಗಿದ್ದು ಪಿ. ಎಚ್. ಪೂಜಾರ್ ಅವರು ಗೆಲುವಿನ ಸರ್ಟಿಫಿಕೇಟ್ ಪಡೆದ ಬಳಿಕ ಅವರನ್ನು ಶುಭಕೋರಿ ಬೀಳ್ಕೊಟ್ಟರು.

Leave a Reply

ಹೊಸ ಪೋಸ್ಟ್‌