ಬಸವ ನಾಡಿನಲ್ಲಿ ಹೃದಯಸ್ಪರ್ಷಿ ಘಟನೆ- ಕಲಿಸಿದ ಗುರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತು ಬೀಳ್ಕೋಟ್ಟ ಮಕ್ಕಳು

ಮಹೇಶ ವಿ. ಶಟಗಾರ

ವಿಜಯಪುರ: ಗುರು-ಶಿಷ್ಯರ ಸಂಬಂಧ ಈ ಹಿಂದಿನಂತಿಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ.  ಆದರೆ, ಗುರುಗಳೆಂದರೆ ಗುರುಗಳೇ.  ಶಿಷ್ಯಂದಿರಿಗೆ ತಮ್ಮ ಗುರುಗಳ ಬಗ್ಗೆ ಈಗಲವೂ ಅದೇಷ್ಟು ಗೌರವ, ಪ್ರೀತಿ, ಭಾವನಾತ್ಮಕ ಸಂಬಂಧ ಇದೆ ಎಂಬುದಕ್ಕೆ ಸಾಕ್ಷಿ ಎಂಬಂತಿದೆ ಬಸವ ನಾಡಿನಲ್ಲಿ ನಡೆದ ಈ ಘಟನೆ.

ಶಿಕ್ಷಕರೊಬ್ಬರು ಕಾರ್ಯಕ್ರಮ ನಂತರ ಮುಂದಿನ ಪಯಣಕ್ಕೆ ಸಜ್ಜಾಗಿ ತಮ್ಮ ಬೈಕ್ ಹತ್ತಿ ಹೊರಡಲು ಸಿದ್ಧರಾಗಿದ್ದರು.  ಆಗ, ಸುತ್ತಮುತ್ತಲಿದ್ದ ವಿದ್ಯಾರ್ಥಿಗಳ ಭಾವೋದ್ವೇಗ ತಡೆಯಲಾರದೇ ಬಿಕ್ಕಿ ಬಿಕ್ಕಿ ಅಳಳಾರಂಭಿಸಿದರು.  ಆಗ ಇಡೀ ವಾತಾವರಣವೇ ಬದಲಾಯಿತು.  ನೆರೆದ ಇತರ ಸಹಶಿಕ್ಷಕರ ಕಣ್ಣಾಲಿಗಳೂ ಕೂಡ ತೇವಗೊಂಡವು.  ಈ ಘಟನೆಯನ್ನು ನೋಡಿದ ಸ್ಥಳೀಯರೂ ಕೂಡ ತಮ್ಮ ಕಣ್ಣುಗಳನ್ನು ಒರೆಸಿಕೊಂಡಿದ್ದು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು.  ಇತ್ತೀಚಿನ ದಿನಗಳಲ್ಲಿ ಎಲ್ಲವೂ ಯಾಂತ್ರಿಕವಾಗುತ್ತಿರುವ ಸಮಯದಲ್ಲಿ ನಡೆದ ಈ ಘಟನೆ ನಿಜವಾಗಿಯೂ ಗುರು-ಶಿಷ್ಯರ ಆತ್ಮೀಯ ಬಾಂಧವ್ಯಕ್ಕೆ ಹೇಳಿ ಮಾಡಿಸಿದಂತಿತ್ತು.

 

ಅಷ್ಟಕ್ಕೂ ಆಗಿದ್ದೇನೆಂದರೆ, ಬಸವ ನಾಡು ವಿಜಯಪುರ ಜಿಲ್ಲೆಯ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿ ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 260 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಈ ಶಾಲೆಯಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವಿದ್ದು, ಮಕ್ಕಳಿಗೂ ಈ ಶಾಲೆ ಮತ್ತು ಇಲ್ಲಿನ ಶಿಕ್ಷಕರೆಂದರೆ ಬಲು ಪ್ರೀತಿ.  ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಶಿಕ್ಷಕರೊಬ್ಬರು ತಮ್ಮೂರಿಗೆ ವರ್ಗಾವಣೆಯಾದ ವಿಷಯ ಇಲ್ಲಿನ ವಿದ್ಯಾರ್ಥಿಗಳಲ್ಲಿ ತಳಮಳಕ್ಕೆ ಕಾರಣವಾಗಿದೆ.  ಈ ಶಾಲೆಯಲ್ಲಿ ಬಸಗೊಂಡ ರಾಮತೀರ್ಥ ಶಿಕ್ಷಕರು ಬಿ,. ಕೆ. ರಾಮತೀರ್ಥ ಎಂದೇ ಚಿರಪರಿಚಿತರು.  ಕಳೆದ ಐದು ವರ್ಷಗಳಿಂದ ಈ ಶಿಕ್ಷಕರು ಇಲ್ಲಿನ 260 ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಕಲಿಸುತ್ತಿದ್ದರು.  ಮಕ್ಕಳಿಗೆ ಮನಮುಟ್ಟುವಂತೆ ಬೋಧಿಸುತ್ತಿದ್ದ ಈ ಶಿಕ್ಷಕರೆಂದರೆ ಮಕ್ಕಳಿಗೂ ಅಚ್ಚುಮೆಟ್ಟು.  ಇತ್ತೀಚೆಗೆ ಈ ಶಿಕ್ಷಕರಿಗೆ ತಮ್ಮ ಸ್ವಂತ ಊರಾದ ಕೋಟ್ಯಾಳ ಗ್ರಾಮದ ಶಾಲೆಗೆ ವರ್ಗವಾಣೆಯಾಗಿದ್ದಾರೆ.  ಈ ವಿಚಾರ ಕುಪಕಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೇಸರ ತರಿಸಿದೆ.

ವರ್ಗಾವಣೆ ಎಂದ ಮೇಲೆ ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸಬೇಕಾದ ಮುಂದಿನ ಶಾಲೆಗೆ ಹೋಗಿ ಹಾಜರಾಗಲೇಬೇಕು.  ಹೀಗಾಗಿ ಬಿ. ಕೆ. ರಾಮತೀರ್ಥ ಸರ್ ಕೂಡ ತಮ್ಮೂರಿಗೆ ಹೊರಡಲು ತಯಾರಾಗಿ ಶಾಲೆಗೆ ಬಂದು ಬೀಳ್ಕೋಡುಗೆ ಸಮಾರಂಭದಲ್ಲಿ ಪಾಲ್ಗೋಂಡಿದ್ದಾರೆ.  ಈ ಕಾರ್ಯಕ್ರಮ ಮುಗಿದ ತಕ್ಷಣ ಬಿ. ಕೆ. ರಾಮತೀರ್ಥ್ ಅವರು ತಮ್ಮ ಬೈಕಿನಲ್ಲಿ ತೆರಳಲು ಶಾಲೆಯಿಂದ ಹೊರಗೆ ಬಂದಿದ್ದೇ ತಡ.  ವಿದ್ಯಾರ್ಥಿಗಳಲ್ಲಿದ್ದ ಶಿಕ್ಷಕರ ಬಗ್ಗೆ ಇದ್ದ ಪ್ರೀತಿ ಉಮ್ಮಳಿಸಿ ಬಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ್ದಾರೆ.  ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಮಕ್ಕಳು ಶಿಕ್ಷಕರನ್ನು ಸುತ್ತುವರೆದು ಅವರು ಮಾಡಿದ ಪಾಠಗಳು, ತಿಳಿ ಹೇಳಿದ ವಿಷಯಗಳನ್ನು ಸ್ಮರಿಸಿ ರೋಧಿಸಿದ್ದಾರೆ.

 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ರೋಧನೆ ಕಂಡು ಶಿಕ್ಷಕ ಬಿ. ಕೆ. ರಾಮತೀರ್ಥ ಅವರ ಕಣ್ಣಲ್ಲೂ ನೀರು ಬಂದಿದೆ.  ಶಾಲೆಯಲ್ಲಿ ಬೀಳ್ಕೋಡಲು ಬಂದಿದ್ದ ಶಿಕ್ಷಕರ ಕಣ್ಣಾಲಿಗಳೂ ತೇವಗೊಂಡಿವೆ.

ಸಹೋದ್ಯೋಗಿ ಮಾತ್ರವಲ್ಲ.  ಸಹೋದರ ಕೂಡ ಆಗಿದ್ದಾರೆ.  ಒಳ್ಳೆಯ ಗುಣ ಹೊಂದಿದ್ದಾರೆ.  ತಮ್ಮ ವೃತ್ತಿಯಲ್ಲಿ ಬಸವಣ್ಣನ ಪಾವಿತ್ರ್ಯತೆಯಿಂದ ಕೆಲಸ ಮಾಡಿದವರು.  ಅವರ ನೀತಿ ಮಾರ್ಗ ನಮ್ಮೆಲ್ಲ ಸಹ ಶಿಕ್ಷಕರಿಗೆ ಆದರ್ಶಮಯವಾಗಿದೆ.  ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಶಾಲೆಯನ್ನು ಇನ್ನೂ ಎತ್ತರ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ.  ಅವರು ಸಂತೋಷವನ್ನುಂಟು ಮಾಡುವ ರೀತಿಯಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸುತ್ತೇವೆ.  ಅವರ ಮುಂದಿನ ವೃತ್ತಿ ಜೀವನ ಅತ್ಯಂತ ಸುಖಮಯವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಸಹ ಶಿಕ್ಷಕ ಎಸ್. ಬಿ. ಕೋಟ್ಯಾಳ ತಮ್ಮ ಸಹೋದ್ಯೋಗಿ ಬಿ. ಕೆ. ರಾಮತೀರ್ಥ ಗುರುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಮತ್ತೋಬ್ಬ ಸಹ ಶಿಕ್ಷಕ ಎಚ್. ಟಿ. ಬಿರಾದಾರ ಮಾತನಾಡಿ, ನಮ್ಮ ಶಾಲೆಯಲ್ಲಿ ಬಿ. ಕೆ. ರಾಮತೀರ್ಥ ಬಹಳಷ್ಟು ಸುಧಾರಣೆ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.  ಮಕ್ಕಳನ್ನು ಶೈಕ್ಷಣಿಕವಾಗಿ ಮಾತ್ರವಲ್ಲ ಇನ್ನಿತರ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೇರಣೆ ನೀಡಿದ್ದಾರೆ.  ಅಲ್ಲದೇ, ಶಾಲೆಯ ಆವರಣದಲ್ಲಿ ಕೈತೋಟ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.  ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುಂದುವರೆಸಿಕೊಂಡು ಹೋಗುತ್ತೇವೆ.  ಅವರ ಮುಂದಿನ ಜೀವನ ಬಹಳ ಸುಖಕರವಾಗಿರಲಿ.  ಅವರ ಜೊತೆ ಕೇವಲ ಎರಡು ವರ್ಷ ಸೇವೆ ಸಲ್ಲಿಸಿದರು 20 ವರ್ಷಗಳಷ್ಟು ಒಳ್ಳೆಯ ಅನುಭವಗಳನ್ನು ಜೀವನದ ಪಾಠಗಳನ್ನು ಕಲಿತಿದ್ದೇವೆ.  ಇದು ಹೆಮ್ಮೆಯ ವಿಷಯ.  ಆದರೆ, ಅವರು ವರ್ಗವಾಗಿ ಹೋಗುತ್ತಿರುವುದು ದುಃಖದ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌