ಹಲಸಂಗಿ ಗೆಳೆಯರ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ಕೆಲಸ ಆಗಬೇಕಿದೆ- ಕಲಬುರಗಿ ವಿವಿ ಡಾ. ಎಚ್. ಟಿ. ಪೋತೆ

ವಿಜಯಪುರ: ಹಲಸಂಗಿ ಗೆಳೆಯರ ಶ್ರೇಷ್ಠ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಅವರ ಸಾಹಿತ್ಯವನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಲು ಜಿಲ್ಲಾಡಳಿತ ಹಾಗೂ ಸರಕಾರ ಪ್ರಯತ್ನಿಸಬೇಕು ಎಂದು ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ. ಎಚ್. ಟಿ. ಪೋತೆ ಹೇಳಿದ್ದಾರೆ‌.

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣ ಮತ್ತು ಭಾವಚಿತ್ರಗಳ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ವಿಜಯಪುರ ಜಿಲ್ಲೆಯಲ್ಲಿ ಪ್ರತಿಷ್ಠಾನದಿಂದ ಇನ್ನೂ ಹೆಚ್ಚಿನ ಕ್ರಿಯಾತ್ಮಕ ಕೆಲಸ ಕಾರ್ಯಗಳಾಗಲು ಹಲಸಂಗಿ ಗೆಳೆಯರ ಸ್ಮಾರಕ, ಕೇಂದ್ರ ನಿರ್ಮಾಣಕ್ಕೂ ಜಿಲ್ಲಾಡಳಿತ ಹಾಗೂ ಸರಕಾರಗಳು ಮನಸ್ಸು ಮಾಡಬೇಕು. ಹಲಸಂಗಿ ಪ್ರತಿಷ್ಠಾನ ನಿರ್ಲಕ್ಷಕ್ಕೆ ಒಳಗಾಗಿರುವುದು ಶೋಚನೀಯ ಎಂದು ಅವರು ಹೇಳಿದರು.

ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಹಲಸಂಗಿ ಗೆಳೆಯರ ಕೊಡುಗೆ ಅಪಾರ. ಅವರೆಲ್ಲರ ಸಾಧನೆ ಸದಾ ಸ್ಮರಣೀಯ. ಆ ಎಲ್ಲ ಮಹನೀಯರನ್ನು ನಾವು ಸದಾ ಸ್ಮರಿಸಬೇಕು ಎಂದು ಡಾ. ಎಚ್. ಟಿ. ಪೋತೆ ಹೇಳಿದರು.

ಈ ಸಂದರ್ಭದಲ್ಲಿ ಕೋಲಾರದ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಡಾ. ವಿ. ಚಂದ್ರಶೇಖರ ನಂಗಲಿ, ತುಮಕೂರಿನ ಸಂಸ್ಕೃತಿ ಚಿಂತಕರಾದ ಡಾ. ಎಸ್. ನಟರಾಜ ಬೂದಾಳು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅತಿಥಿ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ದೊಡ್ಡಣ್ಣ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಈರಪ್ಪ ಆಶಾಪೂರ, ಡಾ. ಎಂ. ಎಸ್. ಮದಭಾವಿ ಸೇರಿದಂತೆ ನಾನಾ ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌