ಮಹೇಶ ವಿ. ಶಟಗಾರ
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಶರಣರ ನಾಡು, ಸೂಫಿ ಸಂತರ ಬೀಡು ಮಾತ್ರವಲ್ಲ ಧಾರ್ಮಿಕ ಆಚರಣೆ, ಪಾರಂಪರಿಕ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬಂದಿರುವುದಕ್ಕೂ ಸಾಕ್ಷಿಯಾಗುತ್ತಲೇ ಬಂದಿದೆ.
ಇಂಥ ಪಾರಂಪರಿಕ ಆಚರಣೆಯ ಸಂದರ್ಭದಲ್ಲಿ ಅನೇಕ ಗಮನಾರ್ಹ ಸಾಧನೆಗಳೂ ಹೊರ ಬರುತ್ತಲೇ ಇವೆ. ನಗರ ಪ್ರದೇಶಗಳ ಕ್ರೀಡೆಗಳು ಒಂದೆಡೆಯಾದರೆ, ಗ್ರಾಮೀಣ ಸೊಗಡು ಮತ್ತು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಶಕ್ತಿ ಪ್ರದರ್ಶನಕ್ಕೂ ಇಲ್ಲಿನ ಆಚರಣೆಗಳು ಕಾರಣವಾಗುತ್ತಿವೆ.
ಇಂಥದ್ದೆ ವಿಶೇಷ ಮತ್ತು ಎಲ್ಲರೂ ಹುಬ್ಬೇರಿಸುವಂಥ ವಿಶಿಷ್ಠ ಸಾಧನೆಯೊಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಬಬಲೇಶ್ವರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ 61ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಈ ಜಾತ್ರೆಯ ಅಂಗವಾಗಿ ಬಬಲೇಶ್ವರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವೀರಭದ್ರೇಶ್ವರನ ಪಲ್ಲಕಿಯ ಮೆರವಣಗೆ, ಸುಮಂಗಲೆಯರಿಂದ ಆರತಿ, ನಾನಾ ಕಲಾ ತಂಡಗಳಿಂದ ಕರಡಿ ಮಜಲು ಕುಣಿತ, ನಾನಾ ವಾದ್ಯಗಳೊಂದಿಗೆ ಅದ್ಧೂರಿಯಾಗಿ ನೆರವೇರಿದೆ.
ಈ ಜಾತ್ರೆಯಲ್ಲಿ ಪ್ರತಿವರ್ಷ ಒಂದಿಲ್ಲೋಂದು ವಿಶೇಷ ಸಾಧನೆಗಳು ನಡೆಯುತ್ತಲೇ ಇರುತ್ತವೆ. ಈ ಬಾರಿಯ ಜಾತ್ರೆಯಲ್ಲಿ ಸುಮಾರು 400 ಪುರವಂತರು ಭಾಗವಹಿಸಿದ್ದರು. ಕಾವಿ ದೋತ್ರ ತೊಟ್ಟು, ಪೇಟ ಧರಿಸಿಕೊಂಡು, ತೋಳಿಗೆ ಬೆಳ್ಳಿಯ ನಾಗರವನ್ನು ಸುತ್ತಿಕೊಂಡು, ಕಿವಿಗೆ ರುದ್ರಾಕ್ಷಿ ಹಾಕಿಕೊಂಡು, ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡು ಸೊಂಟಕ್ಕೆ ಗಂಟೆ ಮತ್ತು ಕತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಎದೆಯ ಮೇಲೆ ನರಸಿಂಹನ ಮುಖ, ಕೈಗೆ ರುದ್ರಾಕ್ಷಿ, ಸೊಂಟಕ್ಕೆ ಬಣ್ಣದ ಬಟ್ಟೆ ಧರಿಸಿದರು. ಅಲ್ಲದೇ, ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ನಿಂಬೆ ಹಣ್ಣಿನ ಶಸ್ತ್ರ ಹಿಡಿದ ಪುರವಂತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗಯಲ್ಲಿ ಸಾಗಿದರು.
ಈ ಮೆರವಣಿಗೆಯಲ್ಲಿ ಪಾಲ್ಗೋಂಡ ವೀರಭದ್ರನ ಆರಾಧಕರ ಸಾಹಸ ಪ್ರದರ್ಶನ ನೋಡುಗರ ಮೈ ನವಿರೇಳಿಸುವಂತಿತ್ತು. ಅದರಲ್ಲಿಯೂ ಪುರವಂತಿಗರೊಬ್ಬರು ಒಂದು ಕಿಲೋ ಮೀಟರ್ ಗೂ ಹೆಚ್ಚು ಉದ್ದದ ಅಂದರೆ 1066 ಅಡಿ ಉದ್ದದ ಸಣ್ಣ ಹಗ್ಗವನ್ನು ತಮ್ಮ ಗದ್ದ ಅಂದರೆ ಕೆನ್ನೆಗೆ ರಂಧ್ರ ಮಾಡಲಾಗಿದ್ದ ಜಾಗದಲ್ಲಿ ಹಾಯಿಸುವ ಮೂಲಕ ಭಕ್ತಿಯ ಪರಾಕಾಷ್ಟೆ ಮೆರೆದರು.
ಈ ವಿನೂತನ ಸಾಹಸ ಮಾಡಿದ ಪುರವಂತಿಗ ಚಿನ್ನಪ್ಪ ಮರ್ಯಾಣಿ ತಮ್ಮ ಬಾಯಿಯಿಂದ ಕೆನ್ನೆಯ ಮೂಲಕ ಹಾಕಿ ಬಾಯಿಯ ಮೂಲಕ ಹಗ್ಗವನ್ನು ಹೊರ ಹಾಕುತ್ತಿದ್ದರೆ, ನೆರೆದ ಭಕ್ತರು ವೀರಭದ್ರನ ಹೆಸರು ಹೇಳಿ ಖಡೆ, ಖಡೆ ಎಂದು ನಮಿಸುತ್ತ ಹುರುಪು ತುಂಬುತ್ತಿದ್ದರು. ಈ ಪುರವಂತಿಗನ ಸಾಹಸ ಕಂಡು ನೆರೆದ ಜನರ ಮೈಜುಮ್ಮೆಂದಿದೆ. ಈ ಸಾಹಸದ ದೃಷ್ಯವನ್ನು ಅಲ್ಲಿ ನೆರೆದ ಜನ ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಈ ದೃಶ್ಯ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದೆ. ಇದೇ ಸಮಯದಲ್ಲಿ ಉತರ ಪುರವಂತಿಗರು ಕುಣಿದು ಕುಪ್ಪಳಿಸುತ್ತ ವೀರಭದ್ರನ ಗುಗ್ಗಳ ನಡೆಸಿದ್ದಾರೆ. ಅಲ್ಲದೇ, ಉಳಿದ ಪುರವಂತಿಗರಲ್ಲಿ ಬಹುತೇಕರು ತಮ್ಮ ನಾಲಿಗೆ, ಕೈಗೆ ಶಸ್ತ್ರ ಚುಚ್ಚಿಸಿಕೊಂಡು ತಾವೂ ಸಾಹಸಗಾಥೆ ಪ್ರದರ್ಶಿಸಿದ್ದಾರೆ. ಈ ಭಾಗದಲ್ಲಿ ನಾಲಿಗೆ ಮತ್ತು ಕೈಗೆ ಶಸ್ತ್ರ ಚುಚ್ಚಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿ ಹಗ್ಗವನ್ನು ಹಾಕಿದ ಉದಾಹರಣೆಗಳಿವೆ. ಆದರೆ, ಒಂದು ಕಿಲೋ ಮೀಟರ್ ಗೂ ಹೆಚ್ಚು ಹಗ್ಗವನ್ನು ಹಾಕಿಕೊಳ್ಳುವ ಮೂಲಕ ಚಿನ್ನಪ್ಪ ಮರ್ಯಾಣಿ ಪುರವಂತಿಗರಲ್ಲಿಯೇ ಅತೀ ಧೈರ್ಯ ಮತ್ತು ಶಕ್ತಿಶಾಲಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಸಾಧನೆಯ ಬಳಿಕ ಉಳಿದ ಪುರವಂತರು ಸಾಹಸ ಪ್ರದರ್ಶಿಸಿದ ಪುರವಂತಿಗನ ಕೆನ್ನೆಗೆ ಹಣೆಗೆ ಹಚ್ಚುವ ವಿಭೂತಿಯನ್ನು ಮಲಾಮಿನಂತೆ ಹಚ್ಚಿದ್ದಾರೆ. ಇಂಥ ಪ್ರದರ್ಶನಗಳಲ್ಲಿ ಮೈಗೆ ಶಸ್ತ್ರ ಚುಚ್ಚಿಸಿಕೊಳ್ಳುವ ಪುರವಂತಿಗರ ಪಾಲಿಗೆ ಹಣೆಗೆ ಹಚ್ಚುವ ವಿಭೂತಿ ರಾಮಬಾಣದಂತೆ ಕೆಲಸ ಮಾಡುವುದು ವಿಶೇಷವಾಗಿದೆ.
ಈ ಮೂಲಕ ಈ ಬಾರಿಯ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಮದಲ್ಲಿ ನಡೆದ ಪುರವಂತನ ವಿನೂತನ ಸಾಹಸ ಈಗ ಗಮನ ಸೆಳೆದಿದೆ.