ವಿಜಯಪುರ: ಭಾರತೀಯ ಸೇನೆಯಲ್ಲಿಯೂ ನನ್ನ ಅಭಿಮಾನಿಗಳಿದ್ದಾರೆ. ನನ್ನ ಭಾಷಣ ಕೇಳುತ್ತಾರೆ. ಮಾತನಾಡಿದರೆ ನಿಮ್ಮಂತೆ ಗಂಡಸರ ರೀತಿ ಮಾತನಾಡಬೇಕು ಎಂದು ಯೋಧರು ಹೇಳುತ್ತಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ವಿಜಯವಾಣಿ-ದಿಗ್ವಿಜಯ ವಾಹಿನಿ ಆಯೋಜಿಸಿದ್ದ 1971ರ ಭಾರತ ಪಾಕಿಸ್ತಾನ ಯುದ್ಧ ಸುವರ್ಣ ವರ್ಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಭಾಷಣ ಕೇಳಿ ಸೈನಿಕರು ಖುಷಿಯಾಗಿದ್ದಾರೆ. ಇದು ನನಗೆ ಖುಷಿ ತಂದಿದೆ. ಮೊನ್ನೆ ಗೃಹ ಖಾತೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೆ. ಒಬ್ಬರಾದರೂ ಧ್ವನಿ ಎತ್ತುತ್ತಾರಾ ನೋಡಿ ಎಂದು ಹೇಳಿದ್ದೆ. ಈಗಿರುವ ಗೃಹ ಸಚಿವರು ಒಳ್ಳೆಯವರಿದ್ದಾರೆ. ಸಂಭಾವಿತರಾಗಿದ್ದಾರೆ. ಅವರಿಗೆ ಅರಣ್ಣ ಅಥವಾ ಕಂದಾಯ ಇಲಾಖೆ ನೀಡಿ ಎಂದು ಹೇಳಿದ್ದೇನೆ. ಮೊನ್ನೆ ಮಂಗಳೂರಿನಲ್ಲಿ ಪೊಲೀಸರ ಮೇಲೆ ಧಾಳಿ ಮಾಡಿದ್ದಾರೆ. ಹೀಗೆ ಮಾಡಿದರೆ ಸುಮ್ಮನಿರಬೇಕಾ? ಇವರಿಗೆ ಕಾನೂನು ಹೇಗೆ ಇರ್ಥವಾಗುತ್ತೆ? ಎಂದು ಅವರು ಪ್ರಶ್ನಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಯತ್ನಾಳ, ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೋಮು ಸೌಹಾರ್ಧಕ್ಕೆ ಧಕ್ಕೆ ಹಾಗೂ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಉದ್ದೇಶಪೂರಕವಾಗಿ ಶಿವಾಜಿ ಮಹಾರಾಜರ ಪ್ರತಿಮೆಯ ಮೇಲೆ ಅವಮಾನ ಮಾಡಲಾಗಿದೆ. ಕೆಲವು ಬಾರಿ ಬಾಬಾಸಾಹೇಬ ಅಂಬೇಡ್ಕರ ಅವರ ಪುತ್ಥಳಿಯ ಮೇಲೆ ಅವಮಾನ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ, ಬಸವಣ್ಣ, ಬುದ್ಧನ ಪ್ರತಿಮೆಯ ಮೇಲೆ ಅವಮಾನ ಮಾಡುತ್ತಿದ್ದಾರೆ. ಇದರಲ್ಲಿ ದೊಡ್ಡ ಗುಂಪಿದೆ. ಇದನ್ನು ನಮ್ಮ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಆರೋಪಿಗಳು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೊಲ್ಹಾಪುರದಲ್ಲಿ ಕನ್ನಡ ಧ್ವಜ ಸುಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಧಾನ ಸಭೆಯಲ್ಲಿ ನಿರ್ಣಯ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಪ್ರಜಾತಾಂತ್ರಿಕವಾಗಿ ಹೋರಾಟ ಮಾಡಲಿ. ರಾಷ್ಟ್ರೀಯ ಪುರುಷರ ಪುತ್ಥಳಿಗೆ ಅವಮಾನ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆ ಪೊಲೀಸರು ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ ಒತ್ತಾಯಿಸಿದರು.
ಎಂಇಎಸ್, ಶಿವಸೇನೆ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಶಿವಸೇನೆ ಭಾಷಾ ವಿಷಯದ ಬಗ್ಗೆ ತಳೆದಿರುವ ನಿಲುವು ದುರ್ದೈವವಾಗಿದೆ. ಕೇವಲ ತನ್ನ ಮಹಾರಾಷ್ಟ್ರ ಸರಕಾರ ಉಳಿಸಿಕೊಳ್ಳಲು ಈ ರೀತಿ ವರ್ತಿಸುವುದು ಸರಿಯಲ್ಲ. ಎಂಇಎಸ್ ಗೆ ಕನ್ನಡ, ಮರಾಠಿ ಭಾಷೆಯ ಬಗ್ಗೆ ತಕರಾರಿದೆ. ಆ ವಿಚಾರ ಬೇರೆ. ಆದರೆ, ರಾಷ್ಟ್ರ ಪುರುಷರನ್ನು ಒಂದು ಜಾತಿಗೆ ಸೀಮಿತ ಮಾಡಲು ಬರುವುದಿಲ್ಲ. ಅವರು ಇಡೀ ದೇಶಕ್ಕೆ, ಇಡೀ ಜನ ನೆಮ್ಮದಿಯಿಂದ ಜೀವನ ಮಾಡಲು ಕಾರಣರಾಗಿದ್ದಾರೆ. ಅನೇಕ ಕಡೆ ಅಂಬೇಡ್ಕರ್ ಮೂರ್ತಿಗೂ ಅವಮಾನ ಮಾಡುತ್ತಾರೆ. ಅವರು ದೇಶದ ಸಂವಿಧಾನ ಬರೆದವರು. ಇಂಥ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಅವಮಾನ ಮಾಡುವವರನ್ನು ಎಂದಿಗೂ ಕ್ಷಮಿಸಬಾರದು. ಇಂಥ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡಿ ತಕ್ಷಣವೇ ಟ್ರೀಟಮೆಂಟ್ ನೀಡಬೇಕು. ಇಲ್ಲಿದ್ದರೆ, ಇಂಥ ಕೆಟ್ಟ ಹುಳುಗಳು ಕೆಲವೊಂದು ಸಂಘಟನೆಗಳನ್ನು ಕಟ್ಟಿಕೊಂಡು ಇದನ್ನೇ ಉದ್ಯೋಗ ಮಾಡಿಕೊಂಡು ಬಿಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ರಾತ್ರಿ ವೇಳೆ ರಾಷ್ಟ್ರ ಪುರುಷರ ಪ್ರತಿಮೆಗಳಿಗೆ ಅವಮಾನ ಮಾಡಿದರೆ ಅದು ಗೃಹ ಸಚಿವರ ವೈಫಲ್ಯ ಎನ್ನಲು ಸಾಧ್ಯವಿಲ್ಲ. ಆದರೆ, ಘಟನೆ ಬೆಳಕಿಗೆ ಬಂದ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಅದು ಗೃಹ ಸಚಿವರ ವೈಫಲ್ಯವಾಗುತ್ತದೆ. ವಿಧಾನ ಸಭೆ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪ ಮಾಡುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.