ವಿಜಯಪುರ: ಸ್ವತಃ ರಸ್ತೆಗಿಳಿದ ವಿಜಯಪುರ ಎಸ್ಪಿ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ವಿನೂತನ ಜಾಗೃತಿಗೆ ಮುಂದಾಗಿದ್ದಾರೆ.
ವಿಜಯಪುರ ನಗರದ ಗಾಂಧಿಚೌಕಿನಲ್ಲಿ ತಸ್ತೆಗಿಳಿದ ಎಸ್ಪಿ ಎಚ್. ಡಿ. ಆನಂದ ಕುಮಾರ, ಬೈಕ್ ಸವಾರರಿಗೆ ಗುಲಾಬಿ ಹೂವು ನೀಡಿ ಕಿವಿಮಾತು ಹೇಳಿ ವಿನೂತನವಾಗಿ ಕಾನೂನು ಪಾಲನೆ ಮಾಡುವಂತೆ ಮನವಿ ಮಾಡಿದರು.
ಇತ್ತೀಚಿನ ವರ್ಷಗಳಲ್ಲಿ ಸಂಭವಿಸುತ್ತಿರುವ ಬೈಕ್ ಅಪಘಾತಗಳಲ್ಲಿ ಬೈಕ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕರಿಗೆ ತಲೆಗೆ ಪೆಟ್ಟಾಗಿ ಹೆಚ್ಚಿನ ತೊಂದರೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಈಗ ಬೈಕ್ ಸವಾರರಲ್ಲಿ ಶಿರಸ್ತ್ರಾಣ ಅಂದರೆ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿಗೆ ಮುಂದಾಗಿದ್ದಾರೆ.
ಇದರ ಅಂಗವಾಗಿ ವಿಜಯಪುರ ನಗರದ ಗಾಂಧಿಚೌಕಿನಲ್ಲಿ ಎಸ್ಪಿ ಎಚ್. ಡಿ. ಆನಂದ ಕುಮಾರ ಮೊದಲಿಗೆ ಪೊಲೀಸರಿಂದ ಬೈಕ್ ಜಾಥಾ ನಡೆಸುವ ಮೂಲಕ ಜನ ಜಾಗೃತಿ ಮೂಡಿಸಿದರು. ಬೈಕ್ ಓಡಿಸುವ ಪೊಲೀಸ್ ಮತ್ತು ಹಿಂಬದಿಯ ಸವಾರ ಇಬ್ಬರೂ ಹೆಲ್ಮೆಟ್ ಧರಿಸಿದ್ದರು. ಅಲ್ಲದೇ, ಬೈಕ್ ಹಿಂಬದಿಯ ಸವಾರ ಕೈಯಲ್ಲಿ ಹೆಲ್ಮೆ ಟ್ ಧರಿಸುವ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರ ಹಿಡಿದು ಕುಳಿತಿದ್ದರು.
ಬೈಕ್ ಜಾಥಾ ಬಳಿಕ ಟ್ರಾಪಿಕ್ ಸಿಗ್ನಲ್ ಗೆ ತೆರಳಿದ ಎಸ್ಪಿ ಎಚ್. ಡಿ. ಆನಂದ ಕುಮಾರ ಕೈಯಲ್ಲಿ ಹಿಡಿದ ಗುಲಾಬಿ ಹೂವನ್ನು ಬೈಕ್ ಸವಾರರಿಗೆ ನೀಡಿದರು. ಅಲ್ಲದೇ, ಅವರಿಗೆ ಹೆಲ್ಮೆಟ್ ಧರಿಸುವಂತೆ ಕಿವಿಮಾತು ಹೇಳಿದರು. ಹೆಲ್ಮೆಟ್ ಧರಿಸುವುದರಿಂದ ಅಪಘಾತದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಮನವರಿಕೆ ಮಾಡಿಕೊಟ್ಟರು.
ಬಳಿಕ ಕೆಲವು ಜನರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಿಸಿದ ಎಸ್ಪಿ ತಮ್ಮ ಅಭಿಯಾನದ ಕುರಿತು ಮಾಹಿತಿ ನೀಡಿದರು.
ರಸ್ತೆ ಅಪಘಾತಗಳಲ್ಲಿ ಬೈಕ್ ಸವಾರರಿಗೆ ಹೆಚ್ಚಿನ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ವಿಜಯಪುರ ಜಿಲ್ಲಾ ಪೊಲೀಸ್ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೈಕ್ ಜಾಥಾ ಮೂಲಕ ಹೆಲ್ಮೆಟ್ ಧರಸಬೇಕೆಂದು ಜಾಗೃತಿ ಮೂಡಿಸಲಾಗುತ್ತಿದೆ. ಹೆಲ್ಮೆಟ್ ಧರಿಸದೇ ಬೈಕ್ ಚಲಿಸುತ್ತಿದ್ದವರಿಗೆ ಗುಲಾಬಿ ಹೂವು ನೀಡಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಜನೇವರಿ 1 ರೊಳಗೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಸಬೇಕು. ಇಲ್ಲದಿದ್ದರೆ ಇಂಡಿಯನ್ ಮೋಟರ್ ವೆಹಿಕಲ್ ಆ್ಯಕ್ಟ್ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಹೆಲ್ಮೆಟ್ ಇಲ್ಲದ ಕಾರಣ 2019 ರಲ್ಲಿ ನಡೆದ ಅಪಘಾತಗಳಲ್ಲಿ 130 ಜನ ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ 2020 ರಲ್ಲಿ 185 ಸವಾರರು
ಜೀವ ಕಳೆದುಕೊಂಡಿದ್ದಾರೆ. 2021 ರಲ್ಲಿ ಈವರೆಗೆ 127 ಸವಾರರು ಕೊನೆಯುಸಿರೆಳೆದಿದ್ದಾರೆ ಎಂದು ಎಸ್ಪಿ ಎಚ್. ಡಿ. ಆನಂದ ಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ದಿ, ವಿಜಯಪುರ ಡಿವೈಎಸ್ಪಿ ಕೆ. ಸಿ. ಲಕ್ಷ್ಮಿನಾರಾಯಣ, ಗಾಂಧಿಚೌಕ ಸಿಪಿಐ ರವೀಂದ್ರ ನಾಯ್ಕೋಡಿ, ಎಸ್ಪಿ ಕಚೇರಿ ಸಿಪಿಐ ಸುನೀಲ ಕಾಂಬಳೆ, ಮಹಿಳಾ ಪೊಲೀಸ್ ಠಾಣೆ ಸಿಪಿಐ ಸಿ. ಪಿ. ಬಾಗಢವಾಡಿ, ಸಂಚಾರಿ ಪಿಎಸ್ಐ ಗಳು, ಗಾಂಧಿಚೌಕ ಪಿಎಸ್ಐ ಗಳು, ಸಂಚಾರಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.