ವಿಪ ಫಲಿತಾಂಶ 2023ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಿದೆ- ಕಾರಜೋಳ ಹೇಳಿಕೆಯಂತೆ ಬಿಜೆಪಿಗೆ ಬರಬೇಕಿದ್ದ 5000 ಮತಗಳು ಎಲ್ಲಿ ಹೋಗಿವೆ?- ಸುನೀಲಗೌಡ ಪಾಟೀಲ

ವಿಜಯಪುರ: ವಿಧಾನ ಪರಿಷತ ಚುನಾವಣೆ ಫಲಿತಾಂಶ 2023ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಿದೆ.  2023ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ತಿಗೆ ಸತತವಾಗಿ ಎರಡನೇ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ ಎಂ ಎಲ್ ಸಿ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಒಂದೇ ಒಂದು ಹೇಳಿಕೊಳ್ಳುವಂಥ ಕಾಮಗಾರಿ ಕೈಗೊಂಡಿಲ್ಲ.  ನೀರಾವರಿ ಯೋಜನೆ ರೂಪಿಸಿಲ್ಲ.  ಹೊಸದಾಗಿ ಒಂದೂ ಮನೆಗಳನ್ನು ನಿರ್ಮಿಸಿಲ್ಲ.  ಹಳೆಯ ಮನೆಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿವೆ.  ಅವುಗಳಿಗೆ ಸೂಕ್ತ ಸಮಯದಲ್ಲಿ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಬಡವರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ ಸದಸ್ಯರಾಗಿ ಆಯ್ಕೆಯಾದ ಮೂರೇ ವರ್ಷದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ.  ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳದ ಬಗ್ಗೆ ಸದನದಲ್ಲಿ ಗಮನ ಸೆಳೆದಿದ್ದೇನೆ.  ಪಿಂಚಣಿ ಬಗ್ಗೆ ಪ್ರಸ್ತಾಪಿಸಿದ್ದೇನೆ.  ಬಸ್ ಪಾಸ್ ಬಗ್ಗೆಯೂ ಧ್ವನಿ ಎತ್ತಿದ್ದೇನೆ.  ಪಿಡಿಓಗಳ ಸಮಸ್ಯೆ ಬಗ್ಗೆಯೂ ಮಾತನಾಡಿದ್ದೇನೆ.  ಹೀಗಾಗಿ ಮತದಾರರು ಈ ಬಾರಿ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಮತ ಪಡೆದ ಮೂರು ಜನರಲ್ಲಿ ಒಬ್ಬನನ್ನಾಗಿ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಕೆಲಸ ಮಾಡಲು ಸ್ಪೂರ್ತಿ ತುಂಬಿದ್ದಾರೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

ಮುಂಬರುವ ದಿನಗಳಲ್ಲಿ ವಿಧಾನ ಪರಿಷತ ಅಧಿವೇಶನದಲ್ಲಿಯೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಬಗ್ಗೆ ಸದಾ ಧ್ವನಿಯಾಗಿ ಕೆಲಸ ಮಾಡುತ್ತೇನೆ.  ಸರಕಾರದ ಗಮನ ಸೆಳೆಯುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದ ಸುನೀಲಗೌಡ ಪಾಟೀಲ, ತಾವು ತಮ್ಮ ಮತದಾರರ ಪರ ಕೆಲಸ ಮಾಡುವುದಾಗಿ ತಿಳಿಸಿದರು.

 

 

 

ತಾವು ಎಲ್ಲ 15 ವಿಧಾನ ಸಭೆ ಕ್ಷೇತ್ರಗಳಲ್ಲಿ ಸಭೆ ಮಾಡಿ ಶೇ.95 ರಷ್ಟು ಮತದಾರರನ್ನು ತಲುಪಿದ್ದೇನೆ. ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ಎಂ. ಬಿ. ಪಾಟೀಲ, ಮಾಜಿ ಶಾಸಕರಾದ ಸಿ. ಎಸ್. ನಾಡಗೌಡ, ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಮಾಜಿ ಶಾಸಕರು, ನಾಯಕರು ಮತ್ತು ಬಾಗಲಕೋಟೆ ಜಿಲ್ಲೆಯ ಶಾಸಕರಾದ ಎಸ್. ಸಿದ್ಧರಾಮಯ್ಯ, ಆನಂದ ನ್ಯಾಮಗೌಡ, ಮಾಜಿ ಶಾಸಕರಾದ ಎಸ್. ಜಿ. ನಂಜಯ್ಯನಮಠ, ಜೆ. ಟಿ. ಪಾಟೀಲ, ಮಾಜಿ ಶಾಸಕರು, ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಸೇರಿದಂತೆ ನಾನಾ ನಾಯಕರು ಮಾಡಿದ ಜನಪರ ಕೆಲಸಗಳಿಂದಾಗಿ ತಮಗೆ ಈ ಚುನಾವಣೆಯಲ್ಲಿ ಉತ್ತಮ ಮತಗಳು ಬಂದಿವೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಸಚಿವ ಗೋವಿಂದ ಕಾರಜೋಳ ವಿರುದ್ಧ ವಾಗ್ದಾಳಿ

ಇದೇ ವೇಳೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ವಾಗ್ಧಾಳಿ ನಡೆಸಿದ ಸುನೀಲಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ ಪಿ. ಎಚ್. ಪೂಜಾರ ಅವರಿಗೆ 5000 ಮತಗಳು ಬರಲಿವೆ.  ಕಾಂಗ್ರೆಸ್ಸಿನಲ್ಲಿ ಭಿನ್ನಮತವಿದೆ.  ಬಂಡಾಯ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದು ಪುಕಾರು ಎಬ್ಬಿಸಿದ್ದರು.  ಆದರೆ, ಈಗ ಪಿ. ಎಚ್. ಪೂಜಾರ ಅವರಿಗೆ ಬಂದ ಮತಗಳನ್ನು ಅವರು ನೋಡಬೇಕು.  ಉಳಿದ ಮತಗಳು ಎಲ್ಲಿ ಹೋಗಿವೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

 

ತಿರಸ್ಕೃತ ಮತಗಳಲ್ಲಿ ಬಹುತೇಕ ಮತಗಳು ನನಗೆ ಬಂದಿವೆ.  ಆದರೆ, ತಾಂತ್ರಿಕ ಕಾರಣದಿಂದಾಗಿ ಅವು ತಿರಸ್ಕೃತವಾಗಿವೆ.  ಭವಿಷ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ, ಪಿಂಚಣಿ, ಬಸ್ ಪಾಸ್, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ ಎಂದು ಅವರು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ವಸತಿಹೀನರಿಗೆ ಮನೆಗಳ ನಿರ್ಮಾಣ ಮತ್ತು ಹಂಚಿಕೆ ಈಗ ತುರ್ತಾಗಿ ಆಗಬೇಕಿದೆ.  ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ಕೆಲವು ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ತಾಂತ್ರಿಕವಾಗಿ ಅಷ್ಟೇ ಹಿಂದುಳಿದಿದ್ದೇವೆ.  ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಬೇಕಿದೆ ಎಂದು ಅವರು ತಿಳಿಸಿದರು.

ಒಮಿಕ್ರಾನ್ ಟಾಸ್ಕಫೋರ್ಸ್ ರಚಿಸಲು ಪತ್ರ ಬರೆಯುವೆ

ಇದೇ ವೇಳೆ, ಕೊರೊನಾ ಒಮಿಕ್ರಾನ್ ಆತಂಕ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಹಿಸಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ.  ಈ ಹಿಂದೆ ಕೊರೊನಾ ತೀವ್ರವಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಟಾಸ್ಕಫೋರ್ಸ್ ರಚಿಸಲಾಗಿತ್ತು.  ಆ ಕಾರ್ಯಪಡೆಗಳು ಆರಂಭದಲ್ಲಿಯೇ ಉತ್ತಮ ಕೆಲಸ ಮಾಡಿ ಸೋಂಕು ಹೆಚ್ಚಾಗದಂತೆ ಸಾಕಷ್ಟು ತಡೆದಿವೆ.  ಈಗಲೂ ಒಮಿಕ್ರಾನ್ ಆಂತಕ ಇರುವ ಹಿನ್ನೆಲೆಯಲ್ಲಿ ಕೂಡಲೇ ಮತ್ತೆ ಟಾಸ್ಕಫೋರ್ಸ್ ರಚಿಸಿ ಕಾರ್ಯೋನ್ಮುಖರಾಗಬೇಕು.  ಈ ಮೂಲಕ ಆರಂಭದಲ್ಲಿಯೇ ಒಮಿಕ್ರಾನ್ ತಡೆಯಲು ಸಹಾಯವಾಗಲಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ, ಕಾಂಗ್ರೆಸ್ ಮುಖಂಡರಾದ ವೈಜನಾಥ ಕರ್ಪೂರಮಠ, ಅಬ್ದುಲ್ ಹಮೀದ್ ಮುಶ್ರಿಫ್, ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ವಿದ್ಯಾರಾಣಿ ತುಂಗಳ, ಜಮೀರ ಅಹ್ಮದ ಭಕ್ಷಿ, ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌