ಘಟಪ್ರಭಾ ಅಚ್ಚುಕಟ್ಟಿಗೆ ಹಿಂಗಾರು ಹಂಗಾಮಿನಲ್ಲಿ ನೀರು: ಗೋವಿಂದ ಎಂ. ಕಾರಜೋಳ

ಬೆಳಗಾವಿ: ಘಟಪ್ರಭಾ ಎಡದಂಡೆ ಕಾಲುವೆ ಮತ್ತು ಬಲದಂಡೆ ಕಾಲುವೆಗಳಿಗೆ 2021-22ನೇ ವರ್ಷದ ಹಿಡಕಲ್ ಜಲಾಶಾಯದಿಂದ ಹಿಂಗಾರು ಹಂಗಾಮಿನಲ್ಲಿ ರೈತರ ಕೃಷಿ ಜಮೀನುಗಳಿಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈಗ ಜಲಾಶಯದಲ್ಲಿ ನೀರಾವರಿಗಾಗಿ 38.85 ಟಿಎಂಸಿ ನೀರು ಲಭ್ಯವಿದ್ದು, ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಡಿ. 18 ರಿಂದ ಜ. 7 ರವರೆಗೆ 20 ದಿನಗಳ ಕಾಲ ನೀರು ಹರಿಸಲಾಗುವುದು. ನಂತರ ಜ. 22 ರಿಂದ ಫೆ. 11ರ ವರೆಗೆ ಮತ್ತು ಫೆ. 26 ರಿಂದ .ಅ. 18ರ ವರೆಗೆ ಒಟ್ಟು 60 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಇದೇ ರೀತಿ ಚಿಕ್ಕೋಡಿ ಶಾಖಾ ಕಾಲುವೆಯಿಂದ ಡಿ. 18 ರಿಂದ ಜ. 7ರ ವರೆಗೆ 20 ದಿನಗಳ ಕಾಲ ನೀರು ಹರಿಸಲಾಗುವುದು. ಜ. 27 ರಿಂದ ಫೆ. 16ರ ವರೆಗೆ ಮತ್ತು ಮಾ. 8ರಿಂದ ಮಾ. 28ರ ವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಣಯಿಸಿದೆ ಎಂದು ಸಚಿವರು ತಿಳಿಸಿದರು.

ಬೆಳಗಾವಿ, ಹುಕ್ಕೇರಿ, ಸಂಕೇಶ್ವರ ನಗರಗಳಿಗೆ ಕುಡಿಯುವ ನೀರಿಗಾಗಿ 1.702 ಟಿಎಂಸಿ ಮತ್ತು ಮುಧೋಳ, ಬಾಗಲಕೋಟೆ‌ ನಗರಗಳಿಗೆ 5 ಟಿಎಂ‌ಸಿ ನೀರನ್ನು ಕುಡಿಯುವ ನೀರಿಗಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರಕಾರಿ ಆದೇಶದಂತೆ ಬಿಡುಗಡೆ ಮಾಡಲು ಮೀಸಲಿಡಲಾಗಿದೆ. ಅಲ್ಲದೇ, ಚಿಂಚಲಿ ಮಾಯಾಮಂದಿರ ಜಾತ್ರೆಗೆ ಹಾಗೂ ಕುಡಿಯುವ ನೀರಿಗಾಗಿ 1 ಟಿಎಂಸಿ ನೀರನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಘಟಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ವರದಿಯನ್ನು ಈ ಸಭೆಯಲ್ಲಿ ಪರಿಶೀಲಿಸಲಾಯಿತು. 2021-22ನೇ ವರ್ಷದ ಹಿಂಗಾರು ಹಂಗಾಮು ಪ್ರಾರಂಭವಾಗಿದೆ. ರೈತರ ಬೆಳೆಗಳಿಗಾಗಿ ಒಟ್ಟು ಕ್ಷೇತ್ರ 127301 ಹೆಕ್ಟೇರ್ ಭೂಮಿಗೆ ನೀರು ಹರಿಸುವ ಪ್ರಕ್ರಿಯೆಯಿಂದ ಅನುಕೂಲವಾಗಲಿದೆ ಎಂದು ಸಚಿವರು ಸಂತೋಷ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ, ರಾಯಭಾಗ, ಮೂಡಲಗಿ, ಅಥಣಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ ತಾಲೂಕುಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೌಲಭ್ಯ ದೊರೆಯಲಿದೆ. ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಈ ಸಾರಿ ವಿಫುಲವಾಗಿ ನೀರು ದೊರೆಯುವುದರಿಂದ ಈ ಭಾಗವೆಲ್ಲ ಹಸಿರಿನಿಂದ ನಳನಳಿಸುವಂತಾಗುತ್ತದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ರೈತರು ನೀರನ್ನು ಮಿತವಾಗಿ ಬಳಸಿ, ಕಾಲುವೆ ಕೊನೆಯ ಅಂಚಿನ ರೈತರಿಗೂ ನೀರು ದೊರಕುವಂತೆ ಸಹಕರಿಸಿ ತಮ್ಮ ಭೂಮಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.

ಜಲಸಂಪನ್ಮೂಲ ಸಚಿವರಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ ರವರ ಅಧ್ಯಕ್ಷತೆಯಲ್ಲಿ 2021-22 ನೇ ಹಿಂಗಾರು ಹಂಗಾಮಿನ ನೀರಾವರಿಗಾಗಿ ಹಿಡಕಲ್ ಜಲಾಶಯದಿಂದ ನೀರು ಬಿಡುವ ಕುರಿತು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಸಚಿವರಾದ ಮುರಗೇಶ ನಿರಾಣಿ, ಶಾಸಕರದ ಸಿದ್ದು ಸವದಿ, ಪಿ. ರಾಜೀವ, ದುರ್ಯೋದನ ಐಹೊಳೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌