ಮಹೇಶ ವಿ. ಶಟಗಾರ
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಹಿಂದುಳಿದ ಮತ್ತು ಗಡಿಗೆ ಹೊಂದಿಕೊಂಡಿರುವ ಲಂಬಾಣಿ ತಾಂಡಾವೊಂದರಲ್ಲಿ ಸರಕಾರಿ ಶಾಲೆಯ ಶಿಕ್ಷಕ ಮಾಡಿರುವ ಕಾರ್ಯ ಈಗ ಮನೆ ಮಾತನಾಗಿದೆ.
ಸರಕಾರಿ ಶಾಲೆಗಳು ಮತ್ತು ಸರಕಾರಿ ಶಾಲೆಗಳ ಶಿಕ್ಷಕರೆಂದರೆ ಟೀಕೆ ಮಾಡುವವರಿಗೆ ಇಂಥವರೂ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರಾ? ಅವರು ಹೀಗೂ ಅಭಿವೃದ್ಧಿ ಮಾಡುತ್ತಾರಾ ಎಂಬುದಕ್ಕೆ ಸಾಕ್ಷಿಯಾಗಿದೆ ದ್ರಾಕ್ಷಿ ನಾಡಿನ ಈ ಶಿಕ್ಷಕನ ಕಾರ್ಯ. ಲಾಕಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ತಾನು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ಈ ಶಿಕ್ಷಕ ಮಾಡಿರುವ ಕೆಲಸ ಈಗ ಮಕ್ಕಳನ್ನೂ ಶಾಲೆಗೆ ಬರುವಂತೆ ಕೈ ಮಾಡಿ ಕರೆಯುತ್ತಿದೆ.
ಈ ಶಾಲೆಗೆ ಬಂದರೆ ಸಾಕು. ಇದು ಸರಕಾರಿ ಶಾಲೆಯಾ ಅಥವಾ ಖಾಸಗಿ ಸ್ಕೂಲಾ ಎಂಬ ಸಂಶಯ ಎಲ್ಲರನ್ನೂ ಕಾಡುತ್ತದೆ. ಈ ಹಿಂದಿನ ದಿನಗಳಲ್ಲಿ ನೋಡಿದ ಜನ ಈಗ ಈ ಶಾಲೆಯನ್ನು ನೋಡಿದರೆ ನಂಬಲು ಸಾಧ್ಯವಿಲ್ಲದಂಥ ಕೆಲಸ ಕಾರ್ಯಗಳು ಇಲ್ಲಿ ಆಗಿವೆ. ಸರಕಾರಿ ಶಾಲೆಗಳೆಂದರೆ ಬರೀ ಅವ್ಯವಸ್ಥೆಯ ಆಗರ ಎಂಬ ಸುದ್ದಿಯನ್ನು ನೋಡುವ ತಮಗೂ ಇದು ಒಂದು ಸಂತಸ ತರುವ ಸಂಗತಿ. ಅಷ್ಟರ ಮಟ್ಟಿಗೆ ಇಲ್ಲಿನ ಶಾಲೆ ಕಣ್ಮನ ಸೆಳೆಯುತ್ತಿದೆ.
ಈ ಶಾಲೆಗೆ ಕಾಲಿಟ್ಟರೆ ಸಾಕು. ಈಗಷ್ಟೇ ಶಾಲೆ ನಿರ್ಮಿಸಿದಂತಿದೆ. ಎಲ್ಲಿ ನೋಡಿದರೂ ಅಂದ-ಚೆಂದವಾಗಿ ಬಣ್ಣ ಬಳಿಯಲಾಗಿರುವ ಈ ಶಾಲೆಯ ಪ್ರತಿ ಗೋಡೆಯೂ ಒಂದೊಂದು ಸಂದೇಶ ಸಾರುತ್ತವೆ. ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಮನನ ಮಾಡಲು ಪೂರಕವಾಗಿವೆ.
ಈ ಶಾಲೆ ಇರುವುದು ಬಸವ ನಾಡು ವಿಜಯಪುರ ಜಿಲ್ಲೆಯ ದ್ರಾಕ್ಷಿ ಕಣಜ ತಿಕೋಟಾ ತಾಲೂಕಿನ ಘೋಣಸಗಿ ಎಲ್. ಟಿ.-1 ರಲ್ಲಿ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮ ಹಿಂದುಳಿದಿದ್ದರೂ, ಈಗ ಆಗಿರುವ ಕೆಲಸ ಕಾರ್ಯಗಳು ಮುಂದುವರೆದ ಪ್ರದೇಶದಲ್ಲಿರುವ ಶಾಲೆಗಳೂ ನಾಚುವಂತಿದೆ. ಇದನ್ನು ಸಾಧ್ಯ ಮಾಡಿದ್ದು ಇದೇ ಶಾಲೆಯಲ್ಲಿ ಬೋಧನೆ ಮಾಡುವ ಶಿಕ್ಷರಾದ ಪರಮೇಶ್ವರ ಎಸ್. ಗದ್ಯಾಳ.
ಮಕ್ಕಳ ಕಲಿಕೆ ಸರಾಗವಾಗಿ ಇರಲಿ ಎಂದು ಗೋಡೆಯ ಮೇಲೆ ಅಕ್ಷರಗಳು ರಾರಾಜಿಸುತ್ತಿವೆ. ಗೋಡೆಗಳ ಮೇಲೆ ಮೂಡಿಸಲಾಗಿರುವ ಚಿತ್ತಾರಗಳು ಈ ಶಾಲೆಯ ವಾತಾವರಣವನ್ನೇ ಬದಲಿಸಿವೆ. ಮಕ್ಕಳನ್ನು ಈ ಚಟುವಟಿಕೆಗಳು ಆಕರ್ಷಿಸುತ್ತಿದ್ದು, ಜನ ಮಚ್ಚವಂತೆ ಮಾಡಿವೆ.
ಇಲ್ಲಿಯೇ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಪರಮೇಶ್ವರ ಗದ್ಯಾಳ ಅವರ ದೂರದೃಷ್ಠಿಗೆ ಇದು ತಾಜಾ ಉದಾಹರಣೆಯಾಗಿದೆ. ಅವರು ತಮ್ಮ ಶಾಲೆಯ ಮೇಲಿಟ್ಟಿರುವ ಅಪರಿಮಿತ ಪ್ರೀತಿ ಇಲ್ಲಿ ಬಿಂಬಿತವಾಗಿದೆ. ತಾವು ಕೆಲಸ ಮಾಡುತ್ತಿರುವ ಸರಕಾರಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಪಣ ತೊಟ್ಟು ಶಾಲೆಗಾಗಿ ವೈಯಕ್ತಿಕವಾಗಿ ರೂ,. 1 ಲಕ್ಷ ಹಣ ಖರ್ಚು ಮಾಡಿ ಗಮನ ಸೆಳೆದಿದ್ದಾರೆ.
ಭಾಷಾ ಸಮಸ್ಯೆಯಿಂದ ಕೂಡಿರುವ ಲಂಬಾಣಿ ತಾಂಡಾ ಜನವಸತಿ ಪ್ರದೇಶಗಳ ಮಕ್ಕಳಿಗೆ ನೈಜವಾಗಿ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಪೇಂಟ್ ಬಳಕೆ ಮಾಡಿ ವರ್ಗ ಕೋಣೆಗಳನ್ನು ಗೋಡೆ ಬರಹ ಮತ್ತು ಚಿತ್ತಾರಗಳಿಂದ ಆಕರ್ಷಣಿಯವಾಗುವಂತೆ ಮಾಡಿದ್ದಾರೆ. ಇದು ಇಲ್ಲಿನ ಮಕ್ಕಳ ಮನಸ್ಸಿನ ಮೇಲೂ ಉತ್ತಮ ಪರಿಣಾಮ ಬೀರಿದ್ದು, ಗದ್ಯಾಳ ಸರ್ ಕಾರ್ಯವನ್ನು ಇಲ್ಲಿನ ವಿದ್ಯಾರ್ಥಿಗಳಾದ ಶ್ರೀನಿಧಿ ಮಹಾದೇವ ಕೊಟ್ಟಲಗಿ ಮತ್ತು ಲಕ್ಷ್ಮಿ ಸಂತೋಷ ನಾಗನೂರ.
ಇಲ್ಲಿನ ಶಾಲೆಯ ಪ್ರತಿಯೊಂದು ವರ್ಗ ಕೋಣೆಯ ಗೋಡೆಯ ಮೇಲೆ ಒಂದೊಂದು ವಿಷಯದ ಕಲಿಕಾ ಬರವಣಿಗೆ ಮತ್ತು ಚಿತ್ರಗಳನ್ನು ಮೂಡಿವೆ. ಮೂಲಾಕ್ಷರಗಳು, ಗುಣಿತ ಅಕ್ಷರಗಳು, ಪ್ರಾಣಿಗಳು, ಪಕ್ಷಿಗಳು, ಹೂವಿನ ವಿಧಗಳು, ಪರಿಸರ ಕಲ್ಪನೆ, ಹಬ್ಬಗಳು, ಇಂಗ್ಲೀಷ ಅಕ್ಷರಗಳ ಪರಿಚಯ, ಕುಟುಂಬ ಕಲ್ಪನೆ, ಅಂಕಿಗಳ, ಮೂಲ ಕ್ರೀಯೆಗಳ ಕಲ್ಪನೆ, ತೂಕ, ಹಣ, ನೋಟು, ನೀರಿನ ಮೂಲಗಳು, ಶರೀರದ ಭಾಗಗಳು, ಸಸ್ಯಗಳ ಮಾಹಿತಿ, ಪೋಷಕಾಂಶಗಳು, ವ್ಯಾಕರಣ, ಸೌರವ್ಯೂಹ, ಚಂದ್ರಗ್ರಹಣ, ಸೂರ್ಯಗ್ರಹಣ, ಧಾನ್ಯಗಳ, ಸಸ್ಯಗಳ ಮಾಹಿತಿ ಹಾಗೂ ಹೊರಗಡೆ ತಾಲ್ಲೂಕ, ಜಿಲ್ಲೆ, ರಾಜ್ಯ, ರಾಷ್ಟ್ರ ನಕ್ಷೆ ಇತರೆ ಎಲ್ಲ ಮಾಹಿತಿಗಳನ್ನು ಮಗುವಿನ ಕಲಿಕೆಗೆ ನೈಜವಾಗಿ ಕಲ್ಪಿಸುವಂತೆ ಕಲಿಕಾ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಈ ಶಾಲೆಯ ಸಹ ಶಿಕ್ಷಕ ರಾಜು ಹಟ್ಟೆನವರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಕಂಪ್ಯೂಟರ್ ಕಲಿಕೆಗೆ ಒತ್ತು ನೀಡುವುದಕ್ಕಾಗಿ ವಿದ್ಯುತ್ ಸಂಪರ್ಕ ಅಳವಡಿಕೆ, ಶಾಲಾ ಮೇಲ್ಛಾವಣಿಯ ದುರಸ್ಥಿ, ಶೌಚಾಲಯ, ಅಡುಗೆ ಕೋಣೆಯ ರಿಪೇರಿ, ಶಾಲೆಯ ಭೌತಿಕ ಸೌಲಭ್ಯಗಳ ಎಲ್ಲ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿದ್ದಾರೆ.
ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳ ಕಲಿಕೆಯಲ್ಲಿ ಹಿಂದುಳಿದಿವೆ. ಶಾಲೆಗೆ ಬರಲೂ ಕೂಡ ಹಿಂದೆ ಮುಂದೆ ನೋಡುತ್ತಿವೆ. ಇದು ಹೇಳಿ ಕೇಳಿ ಹಿಂದುಳಿದ ಪ್ರದೇಶ ಬೇರೆ. ಮೇಲಾಗಿ ಮಹಾರಾಷ್ಟ್ರದ ಗಡಿ ಭಾಗದಲ್ಲಿದೆ. ಇಲ್ಲಿನ ಬಹುತೇಕ ಕುಟುಂಬಗಳು ಬಡತನದಲ್ಲಿವೆ. ಇಂಥ ತಾಂಡಾದ ಮಕ್ಕಳ ಕಲಿಕೆಗೆ ಅನೂಕೂಲವಾಗಲಿ ಎಂಬ ಸದುದ್ದೇಶದಿಂದ ಲಾಕಡೌನ ಸಮಯದಲ್ಲಿ ಈ ಕೆಲಸ ಆರಂಭಿಸಿರುವ ಶಿಕ್ಷಕ ಪರಮೇಶ್ವರ ಗದ್ಯಾಳ, ಈಗ ಶಾಲೆಯಲ್ಲಿ ಈ ರೀತಿಯಾದ ಕಲಿಕಾ ವಾತಾವರಣ ನಿರ್ಮಾಣ ಮಾಡಿದ್ದಾರೆ.
2019ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಂದಿನ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಈ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರು ಕಾಳಜಿ ತೋರಬೇಕು ಎಂದು ಸಲಹೆ ನೀಡಿದ್ದರು. ಅವರಿಂದ ಪ್ರಭಾವಿತರಾಗಿ ಸುಮಾರು ಮೂರು ತಿಂಗಳು ಓಡಾಡಿ ಹಲವಾರು ಬಾರಿ ಶಾಲೆಯಲ್ಲಿಯೇ ವಾಸ್ತವ್ಯ ಹೂಡಿ ಹೊಸದೊಂದು ಕಾರ್ಯ ಮಾಡಿದ್ದೇನೆ. ಮಕ್ಕಳ ಕಲಿಕೆಗೆ ಅನೂಕೂಲವಾಗಿಸಲು ಈ ಕಾರ್ಯ ಮಾಡಿದ್ದೇನೆ ಎಂದು ಶಿಕ್ಷಕ ಪರಮೇಶ್ವರ ಗದ್ಯಾಳ ಸಂತಸ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಪಾಠಗಳನ್ನೇ ಮಾಡದ ಸಾಕಷ್ಟು ಜನ ಶಿಕ್ಷಕರು ಇರುವ ಇಂದಿನ ದಿನಗಳಲ್ಲಿ ಈ ಶಿಕ್ಷಕ ಗದ್ಯಾಳ ಅವರು ಮಾತ್ರ ವಿದ್ಯಾರ್ಥಿಗಳ ಪಾಲಿಗೆ ಅಕ್ಷರ ಕಲಿಸುವ ಪರಮೇಶ್ವರರಾಗಿದ್ದಾರೆ. ಇವರಿಗೊಂದು ಸಲಾಂ ಹೇಳಲೇಬೇಕು.