ಸಾಮಾಜಿಕ ಕಾರ್ಯದ ಮೂಲಕ ಸ್ವಚ್ಛತೆ ಗಾನ ಪಸರಿಸುತ್ತಿರುವ ನಿಜವಾದ ರೀಲ್ಸ್ ಕಲಾವಿದರು

ಮಹೇಶ ವಿ. ಶಟಗಾರ

ವಿಜಯಪುರ: ಇದು ರೀಲ್ಸ್ ಕಲಾವಿದರ ರಿಯಲ್ ಸ್ಟೋರಿ.  ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ಮೂಲಕ ಜನಮನ ಸೆಳೆಯುತ್ತಿರುವ ಈ ಕಲಾವಿದರು ಈಗ ರಿಯಲ್ ಜೀವನದಲ್ಲಿ ರೋಲ್ ಮಾಡೆಲ್ ಕೆಲಸ ಮಾಡುವ ಮೂಲಕ ತಮ್ಮ ಛಾಪು ಮೂಡಿಸುತ್ತಿದ್ದಾರೆ.

ವಿಜಯಪುರ ನಗರದ ಗಾನಯೋಗಿ ಸಂಘದ ಯುವಕರು ಕಳೆದ ಹಲವಾರು ವರ್ಷಗಳಿಂದ ನಾನಾ ರೀತಿಯ ಕಿರು ವಿಡಿಯೋ ಮಾಡುವ ಮೂಲಕ ರೀಲ್ಸ್ ನಲ್ಲಿ ಹೆಸರು ಮಾಡಿದ್ದಾರೆ.  ಅಷ್ಟೇ ಅಲ್ಲ, ಸಮಾಜಮುಖಿ ಕೆಲಸಗಳ ಮೂಲಕವೂ ಇತರರಿಗೆ ಸ್ಪೂರ್ತಿಯಾಗಿದ್ದಾರೆ.  ಈ ಹಿಂದೆ ಐತಿಹಾಸಿಕ ಭಾವಿ ಸ್ವಚ್ಛಗೊಳಿಸುವ ಮೂಲಕ ಸಮಾಜ ಕಾರ್ಯ ಮಾಡಿದ್ದ ಪ್ರಕಾಶ ಆರ್. ಕೆ. ನೇತೃತ್ವದ ಗಾನಯೋಗಿ ಸಂಘದ ಯುವಕರು ನಂತರ ಬೇರೆ ಬೇರೆ ಇತರೆ ಕೆಲಸಗಳ ಮೂಲಕವೂ ಭೇಷ್ ಎನಿಸಿಕೊಂಡಿದ್ದರು.

ಇದೀಗ ಸಮಾಜಕ್ಕೆ ಪೂರಕವಾಗುವ ಮತ್ತೋಂದು ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ.  ರೀಲ್ಸ್ ನಲ್ಲಿ ಕಾಮಿಡಿ, ಸಮಾಜ ಸೇವೆಯ ಕೆಲಸಗಳನ್ನು ಮಾಡುವ ಮೂಲಕ ಹೆಸರು ಮಾಡಿದ್ದು, ಈಗ ರಿಯಲ್ ಲೈಫ್ ನಲ್ಲಿಯೂ ಹಿರೋಗಳಂತೆ ಉತ್ತಮ ಕಾರ್ಯ ಮಾಡಿದ್ದಾರೆ.  ರೀಲ್ಸ್ ನಲ್ಲಿ ಸಾಕಷ್ಟು ಜನ ಹಿಂಬಾಲಕರು ಅಂದರೆ ಫಾಲೋವರ್ಸ್ ನ್ನು ಹೊಂದಿರುವ ಈ ಯುವಕರ ಪಡೆ ತಮ್ಮ ಹಾಸ್ಯ ಚಟಾಕಿಗಳ ಮೂಲಕ ಜನರು ನಕ್ಕು ನಕ್ಕು ಖುಷಿಯಾಗಿರುವಂತೆ ಮಾಡುತ್ತಿದೆ.  ಸಾಮಾಜಿಕ ಸಂದೇಶ ಹೊಂದಿರುವ ಇವರ ರೀಲ್ಸ್ ವಿಡಿಯೋಗಳಿಗೆ ಬಾರಿ ಬೇಡಿಕೆಯೂ ಇದೆ.

ಬಸವ ನಾಡಿನ ಈ ಹತ್ತಿಪ್ಪತ್ತು ಯುವ ಕಲಾವಿದರು ಜನಪದ, ಸಂಸ್ಕೃತಿ, ಉತ್ತರ ಕರ್ನಾಟಕದ ಸೊಗಡನ್ನು ನಾಡೆಲ್ಲಾ ಪಸರಿಸುವಂತೆ ಮಾಡುತ್ತಿದ್ದಾರೆ.  ಇತ್ತಿಚೆಗೆ ವಿಜಯಪುರ ನಗರದಲ್ಲಿರುವ ಬಸ್ ನಿಲ್ದಾಣಗಳು ಮತ್ತು ಮಾರುಕಟ್ಟೆಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿ ಮಹಾನಗರ ಪಾಲಿಕೆ ಸಿಬ್ಬಂದಿ ಮಾಡಬೇಕಿರುವ ಕೆಲಸವನ್ನು ಮಾಡಿ ಜನರ ಚಿತ್ತ ತಮ್ಮತ್ತ ಹರಿಯುವಂತೆ ಮಾಡಿದ್ದಾರೆ.  ವಿಜಯಪುರ ನಗರದ ಮಧ್ಯ ಭಾಗದಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರಿ ಮಾರುಕಟ್ಟೆಯ ಸ್ವಚ್ಛತಾ ಕಾರ್ಯ ಮಾಡಿ ಅಲ್ಲಿನ ಗೋಡೆ ಮೇಲಿದ್ದ ಗುಟ್ಕಾ, ತಂಬಾಕುಗಳ ಕಲೆ, ಕಸ ಕಡ್ಡಿಗಳಿಂದ ಓಡಾಡಲು ಸಹ ಅಸಹ್ಯ ಎನಿಸುತ್ತಿದ್ದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ಅದರ ಅಂದ ಹೆಚ್ಚುವಂತೆ ಮಾಡಿದ್ದಾರೆ.  ಅಲ್ಲದೇ, ಶರಣರ, ದೇಶ ಭಕ್ತರ, ವೀರಮಾತೆಯರ ಹೆಸರನ್ನು ಬರೆಯುವ ಮೂಲಕ ಅವರನ್ನು ಜನರೂ ಸ್ಮರಿಸುವಂತೆ ಮಾಡಿದ್ದಾರೆ.

ಈ ಕಾರ್ಯಕ್ಕಾಗಿ ಇವರು ಯಾರಿಂದಲೂ ಹಣವನ್ನು ಪಡೆದಿಲ್ಲ.  ವಂತಿಗೆಯನ್ನು ಸಂಗ್ರಹಿಸಿಲ್ಲ.  ಬದಲಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಮಾಡುವ ಮೂಲಕ ಇತರರಿಗೂ ಸ್ಪೂರ್ತಿಯಾಗಿದ್ದಾರೆ.  ನಾವಿರುವ ಜಾಗೆವನ್ನು ಸ್ವಚ್ಛವಾಗಿ ಇಟ್ಟುಕೊಂಡು ಪರಿಸರ ಸ್ನೇಹಿ ವಾತಾರವಣ ಸೃಷ್ಠಿಸಬೇಕು ಎಂಬುದು ಗಾನಯೋಗಿ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ. ಅಭಿಪ್ರಾಯವಾಗಿದೆ.

ಈಗ ಸ್ವಚ್ಛ ಮಾಡಿರುವ ಜಾಗವನ್ನು ಇನ್ನು ಮುಂದಾದರೂ ಕ್ಲೀನ್ ಆಗಿ ಇಟ್ಟುಕೊಂಡು ನೈರ್ಮಲ್ಯತೆ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ಗಾನಯೋಗಿ ಸಂಘದ ಸದಸ್ಯ ಸಚಿನ ವಾಲೀಕಾರ.

ಒಟ್ಟಾರೆ, ರೀಲ್ಸ್ ಮೂಲಕ ಮನೆ ಮಾತಾಗಿ, ನಿಜ ಜೀವನದಲ್ಲಿ ರಿಯಲ್ ಕೆಲಸ ಮಾಡುವ ಮೂಲಕ ಜನಮನ ಸೂರೆಗೊಂಡಿರುವ ಗಾನಯೋಗಿ ಸಂಘದ ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆ.

 

Leave a Reply

ಹೊಸ ಪೋಸ್ಟ್‌