ಟ್ರ್ಯಾಕ್ಟರ್ ಅಲ್ಲ, ಕಾರು ಬಳಸಿ ರಾಶಿ ಮಾಡಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೈತ

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯ ರೈತರು ಸದಾ ಒಂದಿಲ್ಲೋಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ.  ಕಾರ್ಮಿಕರ ಸಮಸ್ಯೆ ನೀಗಿಸಲು ತರಹೇವಾರಿ ಐಡಿಯಾಗಳನ್ನೂ ಮಾಡುತ್ತಿರುತ್ತಾರೆ.

ಇದೀಗ ಇಂಥದ್ದೆ ಒಂದು ವಿನೂನತ ಕಾರ್ಯದ ಮೂಲಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೂರ ಗ್ರಾಮದ ರೈತ ಮುತ್ತಣ್ಣ ಪ್ಯಾಟಿಗೌಡರ ಗಮನ ಸೆಳೆದಿದ್ದಾರೆ.  ಇವರು ಕಂಡುಕೊಂಡಿರುವ ಉಪಾಯ ಮಾತ್ರ ಈಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.  ಅಷ್ಟೇ ಅಲ್ಲ, ಹೀಗೂ ಮಾಡಬಹುದು.  ಹಣದ ಜೊತೆಯಲ್ಲಿ ಸಮಯವೂ ಉಳಿತಾಯವಾಗುತ್ತದೆ ಎಂದು ಇತರ ರೈತರು ಭೇಷ್ ಎನ್ನುತ್ತಿದ್ದಾರೆ.

ರೈತ ಮುತ್ತಣ್ಣ ಪ್ಯಾಟಿಗೌಡರ ಅವರಿಗೆ 12 ಎಕರೆ ಜಮೀನಿದೆ.  ಇದರಲ್ಲಿ ಮೂರು ಎಕರೆ ಪ್ರದೇಶದಲ್ಲಿ ಅಜವಾನ ಬೆಳೆ ಬೆಳೆದಿದ್ದರು.  ಉತ್ತಮ ಬೆಳೆ ಬಂದಿದೆ.  ಆದರೆ, ಅದನ್ನು ರಾಶಿ ಮಾಡಲು ಸಾಕಷ್ಟು ಕೂಲಿ ಕಾರ್ಮಕರ ಕೊರತೆ ಎದುರಾಗಿದೆ.  ಎಷ್ಟೇ ಪ್ರಯತ್ನ ಮಾಡಿದರೂ ಫಲ ಸಿಗದ ಕಾರಣ ಈ ರೈತ ಹೊಸ ಐಡಿಯಾ ಕಂಡುಕೊಂಡಿದ್ದಾರೆ.  ಯ್ಯೂಟ್ಯೂಬ್ ನಲ್ಲಿ ರಾಶಿ ಮಾಡುವ ಉಪಾಯಗಳನ್ನು ಹುಡುಕಿದ್ದಾರೆ.  ಈ ಕುರಿತು ತಮ್ಮ ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕನ ಜೊತೆಗೂ ಚರ್ಚಿಸಿದ್ದಾರೆ.  ಆಗ, ಆತನೂ ಕೂಡ ಇವರ ಯೋಚನೆಯನ್ನು ಸರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

ಯ್ಯೂಟ್ಯೂಬ್ ನಲ್ಲಿ ನೋಡಿದಂತೆ ತಾನೂ ಕೂಡ ತನ್ನ ಕಾರನ್ನು ತಂದು ರಾಶಿಗಾಗಿ ಸಂಗ್ರಹಿಸಿ ಇಡಲಾಗಿದ್ದ ಅಜವಾನ ಫಸಲಿನ ಮೇಲೆ ಕಾರು ಚಲಾಯಿಸಿದ್ದಾನೆ.  ಈ ಮೂಲಕ ಸುಗ್ಗಿ ಮಾಡಿದ್ದಾನೆ.  ಇದು ಈ ರೈತರ ಪಾಲಿಗೆ ವರದಾನವೂ ಆಗಿದೆ.  ಕೂಲಿಕಾರರ ಸಂಖ್ಯೆಯನ್ನು ಕಡಿಮೆ ಮಾಡಿದ್ದಷ್ಟೇ ಅಲ್ಲ, ಸಮಯದ ಉಳಿತಾಯವಾಗುವಂತೆಯೂ ಸಹಾಯವಾಗಿದೆ.  ಅಷ್ಟೇ ಅಲ್ಲ, ಹಣದಲ್ಲಿಯೂ ಉಳಿತಾಯ ಮಾಡಿದ್ದಾರೆ.

ರೈತ ಮುತ್ತಣ್ಣ ಪ್ಯಾಟಿಗೌಡರ ಹೇಳುವಂತೆ, ಅಜವಾನ ರಾಶಿ ಮಾಡಲು 60 ರಿಂದ 70 ಕೂಲಿ ಕಾರ್ಮಿಕರು ಬೇಕಾಗುತ್ತದೆ.  ಆದರೆ ತಾವು ಕಾರು ಬಳಸಿ ರಾಶಿ ಮಾಡಿದ್ದರಿಂದ ಅರ್ಧಕ್ಕರ್ಧ ಕೂಲಿಕಾರರ ಸಮಸ್ಯೆ ನೀಗಿದೆ.  ಅಲ್ಲದೇ, ಪೆಟ್ರೋಲ್ ಗೆ ತಗಲುವ ವೆಚ್ಚ ಕೂಲಿ ಕಾರ್ಮಿಕರ ಕೂಲಿಗಿಂತಲೂ ಕಡಿಮೆಯಾಗಿದೆ.  ಕೂಲಿ ಕಾರ್ಮಿಕರನ್ನು ರಾಶಿಗೆ ಬಳಸಿದರೆ ಎಂಟು ದಿನ ಸಮಯಾವಕಾಶ ಬೇಕಾಗುತ್ತಿತ್ತು.  ಆದರೆ, ಕಾರು ಬಳಸಿದ್ದರಿಂದ ಆಗ ಸುಮಾರು ಎರಡರಿಂದ ಮೂರು ದಿನಗಳಲ್ಲಿ ಸುಗ್ಗಿ ಮುಗಿದಿದೆ.

 

ಬಸವ ನಾಡಿನ ಈ ರೈತನ ಹೊಸ ಯೋಚನೆ ಮುಂಬರುವ ದಿನಗಳಲ್ಲಿ ಇತರರಿಗೂ ಉಪಯೋಗವಾದರೆ ಅಚ್ಚರಿಯಿಲ್ಲ.

Leave a Reply

ಹೊಸ ಪೋಸ್ಟ್‌