ವಿಜಯಪುರ: ನಾನಾ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಂತ್ರಸ್ತರಿಗೆ ವಿಜಯಪುರ ಜಿಲ್ಲಾಡಳಿತದ ವತಿಯಿಂದ ಒಟ್ಟು 72 ಪ್ರಕರಣಗಳ ಪೈಕಿ 56 ಪ್ರಕರಣಗಳಲ್ಲಿ ರೂ. 132.31 ಲಕ್ಷ ರೂ.ಗಳ ಪರಿಹಾರ ಧನವನ್ನು ವಿತರಿಸಲಾಗಿದೆ. ಜ. 1 ರಿಂದ ಆ. 31ರ ವರೆಗೆ ಈ ಹಣವನ್ನು ವಿತರಿಸಲಾಗಿದೆ.
ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.
ನಾನಾ ನ್ಯಾಯಾಲಯಗಳಲ್ಲಿ ಬಾಕಿಯಿರುವ 6 ಪ್ರಕರಣಗಳಲ್ಲಿ ಪರಿಹಾರ ಧನ ವಿತರಣೆ ಬಾಕಿಯಿದೆ. ಅನುದಾನದ ಕೊರತೆ ಇಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾತನಾಡಿ 2021ನೇ ವರ್ಷದಲ್ಲಿ ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಅಭಿವೃದ್ಧಿಗಾಗಿ ಇರುವ ಪ್ರಗತಿ ಕಾಲನಿ ಯೋಜನೆಯಡಿ ಅಭಿವೃದ್ಧಿಗೆ ಕೈಗೊಂಡ ಕ್ರಮದ ಬಗ್ಗೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಬೇಕು. ನೋಡಲ್ ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಕೂಡ ಇಂಥ ಕಾಮಗಾರಿಗಳ ಬಗ್ಗೆ ಅನುಸರಣೆ ಮಾಡುವಂತೆ ಅವರು ತಿಳಿಸಿದರು.
ಸಿಂದಗಿ ತಾಲೂಕಿನಲ್ಲಿ ಕೆಸರಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕಾಮಗಾರಿಯ ಟೆಂಡರ್ ಪ್ರಕಟಣೆ ಮತ್ತು ಕಾಮಗಾರಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳಬೇಕು. ನಾನಾ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹಾಜರಾಗುವ ಸಂತ್ರಸ್ತರು ಮತ್ತು ಸಾಕ್ಷಿದಾರರಿಗೆ ಹಾಜರಾತಿ ಪ್ರಮಾಣ ಪತ್ರ ವ್ಯವಸ್ಥಿತವಾಗಿ ನೀಡಿದರೆ ಪ್ರಯಾಣ ಭತ್ಯೆ ನೀಡಲು ಸಹಕಾರಿಯಾಗಲಿದೆ. ಈ ಕುರಿತು ಸರಕಾರಿ ಅಭಿಯೋಜಕರ ಪರವಾಗಿ ಪ್ರಥಮ ದರ್ಜೆ ಸಹಾಯಕರು ಉಪಸ್ಥಿತ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡ ವರ್ಗದ ನೌಕರರ ಮುಂಬಡ್ತಿಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು. ಇಂಡಿ ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಸರಕಾರದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಇಂಥ ಸೌಲಭ್ಯ ಪಡೆದಿರುವ ಫಲಾನುಭವಿಗಳೇ ಅಂಗಡಿಗಳನ್ನು ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 25:10 ಅನುದಾನ ಬಳಕೆಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ?ಈ ಹಿನ್ನೆಲೆಯಲ್ಲಿ 2020-21ನೇ ವರ್ಷದ ಸಿಂದಗಿ ಪುರಸಭೆ ಹಾಗೂ ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಹಂಚಿಕೆಯಾದ ಹಾಗೂ ಬಿಡುಗಡೆಯಾದ ಮತ್ತು ಖರ್ಚಾದ ಅನುದಾನದ ಕ್ರಮದ ಬಗ್ಗೆ ಪರಿಶೀಲಿಸಿ, ಬಸವನ ಬಾಗೇವಾಡಿ ತಾಲೂಕಿನ ಚಬನೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ದುರಸ್ತಿ ಮಾಡಲಾದ ಅಂಗನವಾಡಿ ಕಟ್ಟಡ ಮತ್ತು ತೊರವಿ ಗ್ರಾಮದ ಅಂಗನವಾಡಿ ಕಟ್ಟಡ ಕಾಮಗಾರಿಗಳ ಬಗ್ಗೆ ಪಿ. ಸುನೀಲ ಕುಮಾರ ಪರಿಶೀಲನೆ ನಡೆಸಿದರು.
ವಿಜಯಪುರ, ಸಂಕೇಶ್ವರ ರಸ್ತೆ ಬದಿಯಲ್ಲಿ ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಜಾಗದಲ್ಲಿ ಅನಧಿಕೃತ ಅಂಗಡಿಗಳ ತೆರವಿಗೆ ಸಂಬಂಧಿಸಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು ಎಂದು ಅವರು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯದಲ್ಲಿ ಕೋವಿಡ್-19 ನಿಂದ ಮರಣ ಹೊಂದಿದದವರ ಅವಲಂಬಿತರಿಗೆ ಸಬ್ಸಿಡಿ, ಸಾಲ ಸೌಲಭ್ಯ ಕಲ್ಪಿಸುವ ಕುರಿತಂತೆ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಇದೇ ವೇಳೆ ಪರಿಶೀಲಿಲನೆ ನಡೆಸಿದರು.
ಸಿಂದಗಿ ಪಟ್ಟಣ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಗುವುದು. ಭೂ ಒಡೆತನ ಯೋಜನೆಯಡಿ ಸರಕಾರದ ಕಾನೂನಿನ ರೀತ್ಯ ನಿಯಮಾವಳಿಯಂತೆ ಭೂ ಮಂಜೂರಾತಿ ಮಾಡಲಾಗುವುದು. ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸುವುದು, ರೈತರಿಗೆ ದ್ರಾಕ್ಷಿ ಬೆಳೆಗೆ ವಿಮೆ ಹಣ ಜಮೆ ಬಗ್ಗೆ ಸಮಸ್ಯೆ ಇರುವ ಬ್ಯಾಂಕ್‌ಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಅಸ್ಪೃಶ್ಯತೆ ನಿವಾರಣೆಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲ ಪಿಡಿಓಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಎಸ್ಪಿ ಎಚ್. ಡಿ. ಆನಂದ ಕುಮಾರ ಅವರು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ನಡೆಸಲಾದ ದಲಿತರ ಸಭೆಯ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.
ಈ ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಇಂಡಿ ಪ್ರಭಾರ ಉಪವಿಭಾಗಾಧಿಕಾರಿ ಎಂ. ಎನ್. ಚೋರಗಸ್ತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಜಿ. ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಿತಿಯ ಸದಸ್ಯ ಮನೋಹರ ಕಾಂಬಳೆ, ಅರವಿಂದ ಸಾಲವಾಡಗಿ, ಮುತ್ತಣ್ಣ ಸಾಸನೂರ, ಬಸವರಾಜ ಪೂಜಾರಿ, ರಾಜಶೇಖರ ಕೂಚಬಾಳ, ವಿನಾಯಕ ಗುಣಸಾಗರ, ಗಣಪತಿ ಬಾಣಿಕೋಲ, ಶಿವಾನಂದ ಪಟ್ಟೆದ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.