ಬಿ ಎಲ್ ಡಿ ಇ ಡೀಮ್ಡ್ ವಿವಿ 9ನೇ ಘಟಿಕೋತ್ಸವ: ತಂದೆಯಿಲ್ಲದ ಮಗಳ ಶ್ರಮಕ್ಕೆ ಸಿಕ್ತು 7 ಚಿನ್ನದ ಪದಕಗಳು

ವಿಜಯಪುರ: ಜಗತ್ತಿನಲ್ಲಿ ಬದಲಾವಣೆ ತರಲು ಶಿಕ್ಷಣ ಅತ್ಯತ್ತುಮ ಆಯುಧ ಎನ್ನುವ ನೆಲ್ಸೆನ್ ಮಂಡೆಲಾ ಅವರ ಸಂದೇಶ ಎಂದಿಗೂ ಪ್ರಸ್ತುತ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ(ನಿಮ್ಯಾನ್ಸ್) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹೇಳಿದರು.

ವಿಜಯಪುರ ನಗರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು ಇಂದು ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ನಿಮ್ಮ ಪದವಿಯ ಜೊತೆಗೆ ಹೆಚ್ಚಿನ ಜವಾಬ್ದಾರಿಯು ನಿಮ್ಮ ಹೆಗಲಿಗೆರಿದೆ. ಇನ್ನು ಮುಂದೆ ನೀವು ನಿಷ್ಠೆಯಿಂದ ಕಾಳಜಿವಹಿಸಿ, ನಿಮ್ಮ ರೋಗಿಗಳನ್ನು ಶ್ರದ್ಧೆಯಿಂದ ನೋಡಿಕೊಳ್ಳವ  ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳ ಕೋವಿಡ್ ಅವಧಿ ಇಡೀ ಜಗತ್ತಿನಲ್ಲಿ ಹೊಸ ಸವಾಲುಗಳನ್ನು ಸೃಷ್ಠಿಸಿದೆ. ಇದರಿಂದ ಆರೋಗ್ಯ, ಸಾರ್ವಜನಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಕುರಿತು ನಾವೆಲ್ಲರೂ ಹೆಚ್ಚಿನ ಒತ್ತು ನೀಡಬೇಕಿದೆ. ಇಡೀ ಜಗತ್ತಿನಲ್ಲಿಯೇ ಭಾರತ ಈ ಸವಾಲುಗಳನ್ನು ಎದುರಿಸಿ, ಎತ್ತರದ ಸ್ಥಾನದಲ್ಲಿದೆ. ಕೋಟ್ಯಾಂತರ ಜನರಿಗೆ ಲಸಿಕೆ ನೀಡಿರುವುದು ನಮಗೆ ಗರಿ ಮೂಡಿಸಿದೆ ಎಂದು ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ತಾಂತ್ರಿಕತೆ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದೆ. ಡಿಜಿಟಲ್ ತಾಂತ್ರಿಕತೆ ಮೂಲಕ ಹಲವು ಆ್ಯಪ್‍ಗಳು ಮತ್ತು ಸಾಮಾಜಿಕ ಜಾಲತಾಣಗಳು ಜನರಿಗೆ ತಲುಪುತ್ತವೆ. ನಿಮ್ಯಾನ್ಸ್ ಡಿಜಿಟಲ್ ಅಕಾಡೆಮಿಯಿಂದ  ಡಿಜಿಟಲ್ ತಾಣಗಳ ಮೂಲಕ ಮಾನಸಿಕ ಆರೋಗ್ಯದ ಕುರಿತು ಜನರಿಗೆ ತಲುಪುವ ಕಾರ್ಯ ಮಾಡಿದ್ದು, ವೈದ್ಯರು ಮತ್ತು ಶೂಶ್ರಷಕಿಯರು ರೋಗಿಗಳ ಎಲ್ಲ ಅಗತ್ಯ ಮಾಹಿತಿಗಳನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ತೆಗೆದುಕೊಂಡಾಗ ರೋಗಿಯ ವಿಶ್ಲೇಷಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ವೈದ್ಯರಿಗೆ ಸಮಯ ಎನ್ನುವದು ಅತ್ಯಂತ ದುಬಾರಿ ವಸ್ತು ಆಗಿದೆ. ಯುವ ವೈದ್ಯರು ಹೆಚ್ಚಿನ ಸಮಯವನ್ನು ರೋಗಿಗಳ ಸಮಸ್ಯೆಗಳನ್ನು ಕೇಳಲು ನೀಡಬೇಕು. ಅದಕ್ಕಾಗಿ ಎಲ್ಲ ಅಡೆತಡೆಗಳನ್ನು ಮೀರಿ, ವೈದ್ಯ-ರೋಗಿಯ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟು ರೋಗಿಗೆ ಹೆಚ್ಚಿನ ಸಮಯ ನೀಡಬೇಕು. ಆಗ ಮಾತ್ರ ವೈದ್ಯರು ಯಶಸ್ವಿಯಾಗಲು ಸಾಧ್ಯ ಎಂದು ಡಾ.ಪ್ರತಿಮಾ ಮೂರ್ತಿ ಹೇಳಿದರು.

ಕಳೆದ 20 ವರ್ಷಗಳಿಂದ ಅಮೇರಿಕಾದ ಪೇನ್ಸಲ್ವೆನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಪೆÇ್ರ. ಸಜಯ ಸ್ಯಾಮವೆಲ್ ಅವರು ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದಲ್ಲಿ ಸಾಧಿಸಿದ ಗಣನೀಯ ಸಾಧನೆಗಾಗಿ ಗೌರವ ಡಾಕ್ಟರೆಟ್ ಪದವಿಯನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಎಂ.ಬಿ.ಪಾಟೀಲ್ ಈ ಸಂದರ್ಭದಲ್ಲಿ ಪ್ರಧಾನ ಮಾಡಿದರು.

 

ವಿಶ್ವವಿದ್ಯಾಲಯದಿಂದ ನೀಡುವ ಬಂಗಾರದ ಪದಕಗಳಲ್ಲಿ ಎಂ.ಬಿ.ಬಿ.ಎಸ್ ಪದವಿ ಪೂರ್ಣಗೊಳಿಸಿದ ಡಾ.ದಾನೇಶ್ವರಿ ಕೊತ್ತಲಮಠ 7 ಬಂಗಾರದ ಪದಕಗಳನ್ನು ಗಳಿಸಿದರೆ, ಡಾ.ಸೌರಭ ಪಾಟೀಲ 3 ಬಂಗಾರದ ಪದಕಗಳು, ಡಾ.ಸ್ನೇಹಾ ಉಲ್ಲಾಸ ಅರಕೇರಿ, ಡಾ.ಶರಧಿ ಪೇಠಕರ ಹಾಗೂ ಡಾ.ಸೋಹನರಾವ ತಲಾ 2 ಬಂಗಾರದ ಪದಕಗಳನ್ನು, ಡಾ.ಸರಯು ಲಾಶ್ಯರೆಡ್ಡಿ ಕಂದಿ, ಡಾ.ಶ್ರೀದೇವಿ ಎಚ್.ಎಸ್ ತಲಾ ಒಂದು ಬಂಗಾರದ ಪದಕವನ್ನು ಪಡೆದರು.

ಉಪಕುಲಪತಿ ಡಾ. ಆರ್. ಎಸ್. ಮುಧೋಳ ಸ್ವಾಗತಿಸಿದರು. ವಿವಿ ಆಡಳಿತ ಮಂಡಳಿ ಸದಸ್ಯರಾದ ಡಾ. ಪಿ. ಕೆ. ಕೊಕಾಟೆ, ಡಾ. ಆರ್. ಎಂ. ಜಯರಾಜ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ರಿಜಿಸ್ಟಾರ್ ಡಾ.ಜೆ.ಜೆ.ಅಂಬೇಕರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ಡಾ. ಕುಶಾಲ ದಾಸ, ಡಾ. ಅರುಣ ಇನಾಮದಾರ, ಡಾ. ನೀಲಿಮಾ ಡೊಂಗರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಂದೆಯಿಲ್ಲದ ಮಗಳಿಗೆ ಒಲಿದು ಬಂದ 7 ಚಿನ್ನದ ಪದಕಗಳು

ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಪ್ಯಾಥೋಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ ಕೊತ್ತಲಮಠ ಅನಾರೋಗ್ಯದಿಂದ 2014ರಲ್ಲಿ ನಿಧನರಾಗಿದ್ದಾರೆ. ಅವರ ಮಗಳಾದ ದಾನೇಶ್ವರಿ ಕೊತ್ತಲಮಠ ನಗರದ ವಿವಿಧ ಶಾಲೆ-ಕಾಲೇಜುಗಳಲ್ಲಿ ಓದಿ, ಪಿಯುಸಿ 2015ರಲ್ಲಿ 1337 ಸಿಇಟಿ ರ್ಯಾಂಕ್ ಪಡೆದಿದ್ದಳು. ಅವಳ ಪ್ರತಿಭೆಗೆ ಮೆಚ್ಚಿ, ತಂದೆಯಿಲ್ಲ ಮಗಳಿಗೆ ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ವಿಜಯಪುರ ಜಿಲ್ಲೆಯ ಪ್ರತಿಭಾನ್ವಿತರ ಕೋಟಾದಡಿ ಉಚಿತವಾಗಿ ಮೆಡಿಕಲ್ ಸೀಟ್ ನೀಡಿದ್ದರು. ಅದನ್ನು ಸಮರ್ಪಕವಾಗಿ ಬಳಸಿಕೊಂಡ ದಾನೇಶ್ವರಿ ತಾಯಿಯ ಬೆಂಬಲದಿಂದಲೇ ಇಂದು 7 ಬಂಗಾರದ ಪದಕಗಳನ್ನು ಗಳಿಸಿ, ಸಪ್ತ ಸ್ವರ್ಣ ಪದಕಗಳ ವಿಜೇತೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.

Leave a Reply

ಹೊಸ ಪೋಸ್ಟ್‌