ವಿಜಯಪುರ: ವಿಜಯಪುರ ಜಿಲ್ಲೆಯ ಆರು ನಾನಾ ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆ ಕಾಂಗ್ರೆಸ್ ಪಾಳೆಯದಲ್ಲಿ ಸಂತಸ ಮೂಡಿಸಿದ್ದರೆ, ಮೂರು ಜನ ಬಿಜೆಪಿ ಶಾಸಕರಿರುವ ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಒಂದರಲ್ಲೂ ಸ್ಪಷ್ಟ ಬಹುಮತ ಪಡೆಯದಿರುವುದು ಕಮಲ ಪಾಳೆಯದಲ್ಲಿ ಆತಂಕ ಮೂಡಿಸಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ಪ್ರತಿನಿಧಿಸುವ ಕ್ಷೇತ್ರದಲ್ಲಿ ಬರುವ ನಾಲತವಾಡ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡುವ ಮೂಲಕ ಧೂಳಿಪಟವಾಗಿದೆ. ನಾಲತವಾಡ ಪ. ಪಂ.ಯ ಒಟ್ಟು 14 ಸ್ಥಾನಗಳಲ್ಲಿ ಕಾಂಗ್ರೆಸ್ ಎರಡೂ ಕಡೆ ಅವಿರೋಧವಾಗಿ ಗೆಲುವು ಸಾಧಿಸಿತ್ತು. ಉಳಿದಂತೆ ನಡೆದ 19 ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 7, ಜೆಡಿಎಸ್ ಗೆ 1 ಮತ್ತು 4 ಸ್ಥಾನಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ 9 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಸಾಧಿಸಿದಂತಾಗಿದೆ. ಈ ಗೆಲುವುಗೆ ಮಾಜಿ ಸಚಿವ ಸಿ. ಎಸ್. ನಾಡಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಬಸವನ ಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮನಗೂಳಿ ಪಟ್ಟಣ ಪಂಚಾಯಿತಿಯ ಒಟ್ಟು 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಪಡೆದಿದ್ದು, ಕಾಂಗ್ರೆಸ್ಸಿಗೆ ಕೇವಲ 4 ಸ್ಥಾನಗಳು ಮಾತ್ರ ಸಿಕ್ಕಂತಾಗಿದೆ.
ಒಂದೆರಡು ತಿಂಗಳ ಹಿಂದಷ್ಟೇ ನಡೆದ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಸುಮಾರು 30 ಸಾವಿರ ಮತಗಳ ಅಂತರದಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ಶಾಸಕ ರಮೇಶ ಭೂಸನೂರ ಪ್ರತಿನಿಧಿಸುವ ಸಿಂದಗಿ ತಾಲೂಕಿನ ಆಲಮೇಲ್ ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ. ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 9 ಮತ್ತು ಕಾಂಗ್ರೆಸ್ 7 ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬಸವನ ಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಿಡಗುಂದಿ ಮತ್ತು ಕೊಲ್ಹಾರ ಪಟ್ಟಣ ಪಂಚಾಯಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಕಡೆ ಸ್ಪಷ್ಪ ಬಹುಮತ ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.
ನಿಡಗುಂದಿ ಪಟ್ಟಣ ಪಂಚಾಯಿತಿಯ ಒಟ್ಟು 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಇಲ್ಲಿ ಬಿಜೆಪಿ 6 ಮತ್ತು ಪಕ್ಷೇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪ್ರತಿನಿಧಿಸುವ ದೇವರ ಹಿಪ್ಪರಗಿ ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಒಟ್ಟು 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 7, ಬಿಜೆಪಿ ಮತ್ತು ಜೆಡಿಎಸ್ ತಲಾ 4 ಮತ್ತು ಪಕ್ಷೇತರರು 2 ಸ್ಥಾನಗಳಲಿ ಗೆಲುವು ಸಾಧಿಸಿದ್ದಾರೆ.
ಕೊಲ್ಹಾರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಎಐಎಂಐಎಂ ಖಾತೆ ತೆರೆಯುವ ಮೂಲಕ ಗಮನ ಸೆಳೆದಿದೆ. ಇಲ್ಲಿನ ಒಟ್ಟು 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 3 ಮತ್ತ ಎಐಎಂಐಎಂ 2 ಹಾಗೂ ಪಕ್ಷೇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ತಂತಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸಾಹ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಪರಸ್ಪರ ಗುಲಾಲ ಎರಚಿ ಸಂಭ್ರಮಾಚರಣೆ ನಡೆಸಿದರು.