ವಿಜಯಪುರ: ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಎಂಜಿನ್ ಸರಕಾರಗಳಿವೆ. ಮೇಲಾಗಿ ಬಿಜೆಪಿ ರಾಷ್ಟ್ರ್ಯೀಯ ಪಕ್ಷ ಬೇರೆ. ಇಷ್ಟಾದರ ಆ ಪಕ್ಷದ ಅಭ್ಯರ್ಥಿಯೊಬ್ಬರು ಕೇವಲ ಒಂದೇ ಮತ ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿದ ಪ್ರಸಂಗ ವಿಜಯಪುರ ಜಿಲ್ಲೆಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಡೆದಿದೆ.
ಅಂದ ಹಾಗೆ ಈ ಅಭ್ಯರ್ಥಿ ಇರುವ ಪಟ್ಟಣ ಪಂಚಾಯಿತಿಯ ಶಾಸಕರು ಬಿಜೆಪಿಯವರಾಗಿದ್ದಾರೆ. ಆದರೆ, ಈ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಮೇಲಾಗಿ ಈ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡೋಂದರಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಪಕ್ಷ ಬಿಜೆಪಿಯ ಅಭ್ಯರ್ಥಿಯೊಬ್ಬರು ಕೇವಲ ಒಂದೇ ಮತ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಒಟ್ಟು ಆರು ನಾನಾ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ನಿಡಗುಂದಿ, ಕೊಲ್ಹಾರ ಮತ್ತು ನಾಲತವಾಡ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದೆ. ಮನಗೂಳಿಯಲ್ಲಿ ಮಾತ್ರ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಇನ್ನುಳಿದ ದೇವರ ಹಿಪ್ಪರಗಿ ಮತ್ತು ಆಲಮೇಲ ಪಟ್ಟಣ ಪಂಚಾಯಿತಿಗಳಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ.
ಈ ಚುನಾವಣೆ ಫಲಿತಾಂಶ ಕೈ ಪಾಳೆಯದಲ್ಲಿ ಸಂತಸ ಮೂಡಿಸಿದ್ದರೆ, ಮೂರು ಜನ ಬಿಜೆಪಿ ಶಾಸಕರಿರುವ ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಒಂದರಲ್ಲೂ ಸ್ಪಷ್ಟ ಬಹುಮತ ಪಡೆಯದಿರುವುದು ಕಮಲ ಪಾಳೆಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ಪ್ರತಿನಿಧಿಸುವ ಕ್ಷೇತ್ರದಲ್ಲಿ ಬರುವ ನಾಲತವಾಡ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡುವ ಮೂಲಕ ಧೂಳಿಪಟವಾಗಿದೆ. ನಾಲತವಾಡ ಪ. ಪಂ. ಯ ಒಟ್ಟು 14 ಸ್ಥಾನಗಳಲ್ಲಿ ಕಾಂಗ್ರೆಸ್ ಎರಡೂ ಕಡೆ ಅವಿರೋಧವಾಗಿ ಗೆಲುವು ಸಾಧಿಸಿತ್ತು. ಉಳಿದಂತೆ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 7, ಜೆಡಿಎಸ್ ಗೆ 1 ಮತ್ತು 4 ಸ್ಥಾನಗಳಲ್ಲಿ ಪಕ್ಷೇತರಿಗೆ ಮತದಾರರು ಜೈ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್ 9 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಸಾಧಿಸಿದಂತಾಗಿದೆ. ಈ ಗೆಲುವಿಗೆ ಮಾಜಿ ಸಚಿವ ಸಿ. ಎಸ್. ನಾಡಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ಒಂದೇ ಮತ ಪಡೆದ ರಾಷ್ಟ್ರೀಯ ಪಕ್ಷ ಬಿಜೆಪಿ ಅಭ್ಯರ್ಥಿ
ನಾಲತವಾಡ ಪಟ್ಟಣ ಪಂಚಾಯಿತಿಯ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ ಒಂದರ ಫಲಿತಾಂಶ ಅಭ್ಯರ್ಥಿ ಮಾತ್ರವಲ್ಲ ಪಕ್ಷಕ್ಕೂ ಮುಜುಗರ ತಂದಿದೆ. ಇಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ರಾಜಬಿ ಮಹ್ಮದ ಹನೀಫ ನಾಡದಾಳ 244 ಮತಗಳನ್ನು ಪಡೆದು ಆಯ್ಕೆಯಾದರೆ, ಇವರ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸುಮಾ ಮಹಾಂತೇಶ ಗಂಗನಗೌಡ್ರ 107 ಮತ್ತೋಬ್ಬ ಪಕ್ಷೇತರ ಅಭ್ಯರ್ಥಿ ಶೇಕಮ್ಮ ಬಸಪ್ಪ ಹಗರಗುಂಡ 94 ಮತಗಳನ್ನು ಪಡೆದಿದ್ದಾರೆ. ಆದರೆ, ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಲಕ್ಷ್ಮೀಂಬಾಯಿ ಯಮನಪ್ಪ ಕ್ಷತ್ರಿ ಕೇವಲ ಒಂದು ಮತವನ್ನು ಮಾತ್ರ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ನಾತಲವಾತ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಶೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಆದರೆ, ಈ ಬಾರಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದ್ದರೆ, ವಾರ್ಡ್ ಸಂಖ್ಯೆ 1ರ ಬಿಜೆಪಿ ಅಭ್ಯರ್ಥಿಗೆ ಕೇವಲ ಒಂದು ಮತ ಮಾತ್ರ ಬಂದಿರುವುದು ಬಿಜೆಪಿ ಪಾಳಯದಲ್ಲಿ ಮುಜುಗರಕ್ಕೆ ಕಾರಣವಾಗಿದೆ.
ಈ ಮಧ್ಯೆ ನಿನ್ನೆ ಆಯ್ಕೆಯಾದ ಎಲ್ಲ 14 ಜನ ನೂತನ ಸದಸ್ಯರಿಗೆ ನಾಲತವಾಡ ಪಟ್ಟಣ ಪಂಚಾಯಿತಿಯಲ್ಲಿ ಇಂದು ಗೆಲುವಿನ ಸರ್ಟಿಫಿಕೆಟ್ ನೀಡಲಾಯಿತು.