ಹೊಸ ವರ್ಷಾಗಮನ ಹಿನ್ನೆಲೆ- ಬಸವ ನಾಡಿನಲ್ಲಿ ನಾನಾ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದ ಭಕ್ತರು

ವಿಜಯಪುರ: ಹೊಸ ವರ್ಷಾಚರಣೆ ಹಿನ್ನೆಲಯಲ್ಲಿ ಬಸವನಾಡಿನಲ್ಲಿ ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಈ ಬಾರಿ ಹೊಸ ವರ್ಷ ಶನಿವಾರ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಾನಾ ಹನುಮಂತ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಆಶೀರ್ವಾದ ಬಯಸುತ್ತಿದ್ದಾರೆ.


ಹೊಸ ವರ್ಷದಂದು ತಾವು ನಂಬಿರುವ ದೇವರ ದರ್ಶನ ಪಡೆದು, ಇಷ್ಟಾರ್ಥಗಳನ್ನು ಕೇಳಿಕೊಂಡರೆ ದೇವರು ದಯಪಾಲಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಮಹತ್ಮಾ ಗಾಂಧಿ ರಸ್ತೆಯಲ್ಲಿರುವ ಮದಲಾ ಮಾರುತಿ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದರ್ಶನ ಪಡೆದು ಕೃತಾರ್ಥರಾಗಿದ್ದಾರೆ. ದೇವಸ್ಥಾನದಲ್ಲಿ ಅರ್ಚಕ ಗೋವಿಂದ ಜೋಶಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ಕೊರೊನಾ ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಸರಕಾರ ರಾತ್ರಿ ಕರ್ಫ್ಯೂ ವಿಧಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ತಂತಮ್ಮ ಮನೆಯಲ್ಲಿಯೇ ನೂತನ ವರ್ಷ 2022ಕ್ಕೆ ಶುಭ ಕೋರಿದ ಸಾರ್ವಜನಿಕರು ಬೆಳಿಗ್ಗೆ ನಾನಾ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು. ಅಲ್ಲದೇ, ಈ ವರ್ಷ ಕೊರೊನಾದಿಂದ ಜಗತ್ತು ಮುಕ್ತವಾಗಲಿ ಎಲ್ಲರಲ್ಲಿ ಸಂತಸ ಮನೆಮಾಡಲಿ. ಆರೋಗ್ಯ ಪೂರ್ಣ ಪರಿಸರ ಉಂಟಾಗಲಿ. ತಮ್ಮ ಸಕಲ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸಿದರು.


ರಾತ್ರಿ ನಾನಾ ಸ್ಥಳಗಳಲ್ಲಿ ಆಪ್ತೇಷ್ಟರೊಂದಿಗೆ ಹೊಸ ವರ್ಷ ಆಚರಿಸಿದ ಜನತೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ವರೆಗೆ ವಿಜಯಪುರ ಜಿಲ್ಲಾದ್ಯಂತ ನಾನಾ ಬೇಕರಿ ಮತ್ತು ಸ್ವೀಟ್ ಮಾರ್ಟ್ ಗಳಲ್ಲಿ ಕೇಕ್ ಗಳ ಮಾರಾಟ ಭರ್ಜರಿಯಾಗಿ ನಡೆಯಿತು. ತಮಗೆ ಇಷ್ಟವಾದ ವಿನ್ಯಾಸ, ಬಣ್ಣ, ರುಚಿಯ ಕೇಕ್ ಗಳನ್ನು ಖರೀದಿಸಿದ ಸಾರ್ವಜನಿಕರು ತಂತಮ್ಮ ಮನೆ ಮತ್ತು ಮೊಹಲ್ಲಾಗಳಲ್ಲಿ ಅಕ್ಕಪಕ್ಕದವರ ಜೊತೆ ಸೇರಿ, ಹೊಸ ವರ್ಷವನ್ನು ಸ್ವಾಗತಿಸಿದರು. ನಾನಾ ಸಂಗೀತ ಪರಿಕರಗಳನ್ನು ಬಳಸಿ, ನೃತ್ಯ ಮಾಡುವ ಮೂಲಕ ಮನೋರಂಜನೆ ಕಾರ್ಯಕ್ರಮ ನಡೆಸಿದರು.

ರಾತ್ರಿ 12 ಗಂಟೆ ಆಗುತ್ತಿದ್ದಂತೆ ವಿದ್ಯುತ್ ದೀಪ ಆರಿಸಿ, ಮತ್ತೆ ವಿದ್ಯುತ್ ದೀಪ ಬೆಳಗಿಸಿ ಶಿಳ್ಳೇ ಹಾಕಿ, ಚಪ್ಪಾಳೆ ಹೊಡೆದು ಪರಸ್ಪರ ಶುಭ ಕೋರಿ ನೂತನ ವರ್ಷಕ್ಕೆ ಭರ್ಜರಿ ಸ್ವಾಗತ ಕೋರಿದರು. ಮತ್ತು ಮಹಿಳೆಯರು, ಮಕ್ಕಳು ಕೂಡ ಡ್ಯಾನ್ಸ್ ಮಾಡಿ ಹೊಸ ವರ್ಷವನ್ನು ಬರಮಾಡಿಕೊಂಡರು.
ಅಲ್ಲದೆ, ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ, 2022 ವರ್ಷ ಎಲ್ಲರಿಗೂ ಶುಭ ತರಲಿ ಎಂದು ಆಶಿಸಿದರು.

 

ಈ ಮಧ್ಯೆ, ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ಬಾರ್ ಗಳು ಮುಚ್ಚಿದ್ದರಿಂದ ಮದ್ಯ ಮಾರಾಟಕ್ಕೂ ಹಿನ್ನೆಡೆ ಉಂಟಾಯಿತು. ಇದು ಮದ್ಯ ಮಾರಾಟಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

 

ಬಹುತೇಕ ಜನರು ಇಂಗ್ಲಿಷ್ ಕ್ಯಾಲೆಂಡರ್ ನೂತನ ವರ್ಷಕ್ಕೆ ಶುಭ ಕೋರಿ ಸಂಭ್ರಮಿಸಿದರೆ. ಸಂಪ್ರದಾಯವಾದಿಗಳು ಮಾತ್ರ ಹೊಸ ವರ್ಷದ ಆಚರಣೆಯನ್ನು ಕೇವಲ ಶುಭಾಷಯ ಕೋರಲು ಮೀಸಲಿಟ್ಟಿದ್ದರು. ನಮ್ಮದೇನಿದ್ದರೂ ಭಾರತೀಯರ ಹೊಸ ವರ್ಷ ಯುಗಾದಿ. ನಾವು ನೂತನ ವರ್ಷವನ್ನು ಆಚರಿಸುತ್ತೇವೆ ಎಂದು ಸೈಕ್ಲಿಂಗ್ ಅಸೋಶಿಯೇಷನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ಹೇಳಿದ್ದು ಮಾತ್ರ ಭಾರತೀಯ ಸಂಪ್ರದಾಯಕ್ಕೆ ಬದ್ಧರಾಗಿರುವುದಕ್ಕೆ ಸಾಕ್ಷಿಯಾಗಿತ್ತು.

Leave a Reply

ಹೊಸ ಪೋಸ್ಟ್‌