ಕೊರೊನಾ ಮಹಾತಂಕ ಹಿನ್ನೆಲೆ- ವಿಜಯಪುರ ಗಡಿಯಲ್ಲಿ 11 ಚೆಕ್ ಪೋಸ್ಟ್ ತೆರೆಯಲಾಗಿದೆ- ರಾಜ್ಯದಲ್ಲಿ ನೈಟ್ ಕರ್ಫ್ಯೂ ಬಗ್ಗೆ ಚರ್ಚಿಸಿ ಕ್ರಮ- ಬಸವರಾಜ ಬೊಮ್ಮಾಯಿ

ಬೆಳಗಾವಿ: ಕಳೆದ ಒಂದು ವಾರದಲ್ಲಿ ಕರೋನಾ ಒಮಿಕ್ರಾನ್ ಕೇಸ್ ಹೆಚ್ಚಾಗಿವೆ.  ಮಹಾರಾಷ್ಟ್ರ ಅದರಲ್ಲಿಯೂ ಮುಂಬೈಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.  ಮುಂಬೈ ಮತ್ತು ಕರ್ನಾಟಕದ ವಹಿವಾಟು ಜಾಸ್ತಿಯಿರುವ ಕಾರಣ ಗಡಿಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

 

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಡೋಸ್ ಕೊರೊನಾ ಲಸಿಕೆ ಕಡ್ಡಾಯ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.  ಬೆಳಗಾವಿ ಚೆಕ್ ಪೋಸ್ಟ್ ಜೊತೆಗೆ ಅಕ್ಕಪಕ್ಕದ ಚೆಕ್ ಪೋಸ್ಟ್ ಗಳನ್ನು ಬಿಗಿಗೊಳಿಸಲು ಸೂಚನೆ ನೀಡಲಾಗಿದೆ.  ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸುಮಾರು 11 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ.  ಬೆಳಗಾವಿಯಲ್ಲೂ ಚೆಕ್ ಪೋಸ್ಟ್ ಗಳನ್ನು ಮಾಡಲಾಗುವುದು.  ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ತೊಂದರೆಯಾದರೂ ಬೆಳಗಾವಿ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ಲಸಿಕಾ ಅಭಿಯಾನ

ಜ. 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.  ಲಸಿಕಾಕರಣ ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ ಶಿಸ್ತಿನಿಂದ ಕಾರ್ಯಗತಗೊಳಿಸಲು ಸೂಚನೆ ನೀಡಲಾಗಿದೆ.  ಮಕ್ಕಳನ್ನು ಸುರಕ್ಷಾ ಚಕ್ರದೊಳಗೆ ತರುವ ಪ್ರಧಾನ ಮಂತ್ರಿಗಳ ಆಶಯದ ಈ ಕಾರ್ಯಕ್ರಮಕ್ಕೆ ಜ. 3 ರಂದು ಚಾಲನೆ ನೀಡಲಾಗುವುದು.  ಜ. 10 ರಂದು ಕೊ -ಮಾರ್ಬಿಡಿಟಿ ಇರುವ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟಿರುವ ವ್ಯಕ್ತಿಗಳಿಗೆ ಲಸಿಕಾಕರಣವನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.

ಕರೋನಾ ಎದುರಿಸಲು ಸಕಲ ಸಿದ್ಧತೆ

ಕೊರೊನಾವನ್ನು ನಿರ್ಬಂಧಿಸುವ ಜೊತೆಗೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ.  ಕಳೆದ ಬಾರಿ ಸಂಭವಿಸಿದ ಆಕ್ಸಿಜನ್ ಕೊರತೆಯನ್ನು ನೀಗಿಸಲು ಸಂಬಂಧಪಟ್ಟ ಆಕ್ಸಿಜನ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜಿಸಿ ಸಮರ್ಪಕ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.  ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮತ್ತು ಹೆಚ್ಚುವರಿ ಬೆಡ್, 4000 ಐಸಿಯು ಬೆಡ್ ಗಳನ್ನು ಇಡೀ ರಾಜ್ಯದಲ್ಲಿ ಸಿದ್ಧಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.  ಸಮರ್ಪಕ ಔಷಧಿ ಪೂರೈಕೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

 

ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ

ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚಸಿ ತೀರ್ಮಾನ ಕೈಗೊಳ್ಳಲಾಗುವುದು.  ಕೊರೊನಾ ಸ್ಥಿತಿಗತಿ, ಬೆಂಗಳೂರು ನಗರದಲ್ಲಿ ಕೊರೊನಾ ಬೆಳವಣಿಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.  ಜನ ಮಾರ್ಗಸೂಚಿಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದರೆ ಲಾಕ್ ಡೌನ್ ಘೋಷಿಸುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿ ಸರರಾರದ ನಿಲುವು ಬಹಳ ಸ್ಪಷ್ಟವಾಗಿದ್ದು, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.  ಜನರು ಇದನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವ ಮೂಲಕ ಲಾಕ್ ಡೌನ್ ಹೇರುವ ಅನಿವಾರ್ಯ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿದೆ.  ಸಧ್ಯದಲ್ಲಿಯೇ ಕೊರೊನಾ ಸ್ಥಿತಿಗತಿಯನ್ನು ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌