ವಿಜಯಪುರ: ವಿಜಯಪುರ ನಗರದ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಧನ ಸಹಾಯದಲ್ಲಿ ಕಲಾವಿದ ಮುಸ್ತಾಕ ತಿಕೋಟಾ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು.
ಕಲಾ ಪ್ರದರ್ಶನವನ್ನು ಡಾ.ಮಹಾಂತೇಶ ಬಿರಾದಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಲಾವಿದರಿಗೆ ಯಾವ ಚೌಕಟ್ಟು ಇರಬಾರದು, ಆದರೆ ಇತ್ತೀಚಿಗೆ ಸೆನ್ಸಾರ್ ನೆಪದಲ್ಲಿ ಕಲಾವಿದರಿಗೆ ಚೌಕಟ್ಟು ಹಾಕುವ ಕಾರ್ಯ ನಡೆಯುತ್ತಿರುವುದು ನೋವಿನ ಸಂಗತಿ, ಕಲಾವಿದರಿಗೆ ಮುಕ್ತವಾದ ಚೌಕಟ್ಟು, ನೆಲೆಗಟ್ಟು ಇದೆ. ಇದನ್ನು ಹತ್ತಿಕ್ಕುವ ಕೆಲಸ ಆಗಬಾರದು ಎಂದು ಹೇಳಿದರು.
ಕಲಾವಿದನ ವೈಚಾರಿಕ ದೃಷ್ಟಿಕೋನಕ್ಕೆ ತಡೆಯೊಡ್ಡಬಾರದು. ವೈಚಾರಿಕತೆಯನ್ನೇ ಜೀವಾಳವಾಗಿರಿಸಿಕೊಂಡಿರುವ ಶರಣರ ನಾಡು ನಮ್ಮದು, ವೈಚಾರಿಕ ಪ್ರಧಾನವಾದ ತತ್ವಗಳನ್ನು ಶರಣರು ಸಾರಿದ್ದಾರೆ, ಹೀಗಾಗಿ ವೈಚಾರಿಕತೆಯ ಪ್ರತಿರೂಪವಾಗಿರುವ ಕಲಾವಿದರಿಗೆ ಸೆನ್ಸಾರ್ ಹೆಸರಿನಲ್ಲಿ ಚೌಕಟ್ಟು ಸೀಮಿತಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಕಲೆಗೆ ಅದ್ಭುತವಾದ ಶಕ್ತಿ ಇದೆ, ಕಲೆ ಜಾಗೃತಿ ಮೂಡಿಸುವ ಒಂದು ಪ್ರಧಾನ ಸಾಧನ, ವಿಜಯಪುರ ನೆಲದ ಮುಸ್ತಾಕ್ ಪ್ರತಿಭಾನ್ವಿತ ಕಲಾವಿದ, ಮನೋಜ್ಞ ಕಲಾಕೃತಿಗಳ ರಚನೆಯ ಮೂಲಕ ಹಲವಾರು ವರ್ಷಗಳಿಂದ ಕಲಾ ಸೇವೆಯನ್ನು ಶ್ರದ್ಧೆಯಿಂದ ಕೈಗೊಳ್ಳುತ್ತಾ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ವರದಿಗಾರ ಸಂಗಮೇಶ ಚೂರಿ ಮಾತನಾಡಿ, ವಿಜಯಪುರ ನೆಲ ಪ್ರತಿಭಾನ್ವಿತರ ತವರೂರು. ಅಗಾಧ ಪ್ರತಿಭೆಗಳು ಈ ವಿಜಯಪುರವನ್ನು ಬೆಳಗಿದ್ದಾರೆ, ಕಲೆ, ಸಾಹಿತ್ಯ, ವಚನ ಸಾಹಿತ್ಯ ಹೀಗೆ ಎಲ್ಲ ವಿಧದಲ್ಲಿಯೂ ವಿಜಯಪುರ ಪ್ರತಿಭೆಗಳ ಸಾಧನೆ ಅನನ್ಯ ಎಂದು ವಿವರಿಸಿದರು.
ಹಿರಿಯ ಕಲಾವಿದ ಜಿ. ಎಸ್. ಭೂಸಗೊಂಡ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಪೊನ್ನಪ್ಪ ಕಡೇಮನಿ, ಸಿದ್ದೇಶ್ವರ ಕಲಾ ಮಂದಿರ ಪ್ರಾಚಾರ್ಯ ವಿ. ಸಿ. ಹಿರೇಮಠ, ಮಲ್ಲಿಕಾರ್ಜುನ ಕನ್ನೂರ, ರಮೇಶ ಚವ್ಹಾಣ, ಲಿಂಗರಾಜ ಕಾಚಾಪೂರ, ಕಲಾವಿದ ಮುಸ್ತಾಕ ತಿಕೋಟಾ, ಮಹಿಬೂಬ್ ತಿಕೋಟಾ, ಅಕ್ಬರ್ ತಿಕೋಟಾ, ಶರಣಪ್ಪ ಯಕ್ಕುಂಡಿ, ಸಾದಿಕ್ ಮುಲ್ಲಾಳ, ಇಕ್ಬಾಲ್ ತಿಕೋಟಾ, ಸಿದ್ರಾಮ ಬಿರಾದಾರ ಉಪಸ್ಥಿತರಿದ್ದರು.