ಎಳ್ಳ ಅಮವಾಸ್ಯೆ ಚರಗಾ ಚೆಲ್ಲುವ ಹಬ್ಬದ ಸಂಭ್ರಮ- ಬಸವ ನಾಡಿನಲ್ಲಿ ಕಳೆತಂದ ಆಚರಣೆ

ವಿಜಯಪುರ: ಇಂಗ್ಲಿಷ್ ಕ್ಯಾಲೆಂಡರ್ ಹೊಸ ವರ್ಷದಲ್ಲಿ ಹಿಂದೂಗಳ ಪಾಲಿಗೆ ಚರಗಾ ಚೆಲ್ಲುವ ಹಬ್ಬಎಂದೇ ಖ್ಯಾತಿಯಾಗಿರುವ ಎಳ್ಳಮವಾಸ್ಯೆಯನ್ನು ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ರೈತರು ಮತ್ತು ಸಾರ್ವಜನಿಕರು ಭೂತಾಯಿಯೊಂದಿಗೆ ಅನನ್ಯ ಸಂಬಂಧ ಹೊಂದಿರುವ ಮತ್ತು ಭೂತಾಯಿ ಹಾಗೂ ಬೆಳೆಯನ್ನು ಪೂಜಿಸುವ ಈ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ರೈತರು ತಂತಮ್ಮ ಹೊಲಗಳಲ್ಲಿ ಸಿಹಿಯಾದ ತರಹೇವಾರಿ ಖಾದ್ಯಗಳನ್ನು ತೆಗೆದುಕೊಂಡು ಹೋಗಿ ಭೂತಾಯಿ ಮತ್ತು ಬೆಳೆಗೆ ಪೂಜೆ ಸಲ್ಲಿಸಿದರು.  ಅಲ್ಲಿದ್ದ ಖಾದ್ಯಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿತ್ತು.  ಕೊರೊನಾ ಆತಂಕದ ಮಧ್ಯೆಯೂ ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಹಿಂಗಾರು ಬೆಳೆ ಸುಗ್ಗಿಗೆ ಬರುವ ಹೊತ್ತಿನಲ್ಲಿಯೇ ಎಳ್ಳಮವಾಸ್ಯೆ ಬಂದಿದೆ.  ಉತ್ತರ ಕರ್ನಾಟಕದಲ್ಲಿ ಎಳ್ಳ ಅಮವಾಸ್ಯೆ ವಿಶಿಷ್ಟ ಸಾಂಪ್ರದಾಯಿಕ ಹಬ್ಬವಾಗಿದೆ.  ಹಿಂಗಾರಿ ಬೆಳೆಗಳಾದ ಜೋಳ, ಗೋದಿ ತೆನೆ ಒಡೆಯೋ ಸಂದರ್ಭದಲ್ಲಿ ಬರೋ ಈ ಹಬ್ಬವನ್ನು ಉತ್ತರ ಕರ್ನಾಟಕದ ಜನ್ರು ಸಂಭ್ರಮದಿಂದ ಆಚರಿಸುತ್ತಾರೆ.  ಸತತ ಬರಗಾಲದಿಂದ ಬೆಂದ ರೈತರು ತಮ್ಮ ಸಂಕಷ್ಟದ ಮದ್ಯೆಯೂ ಹಬ್ಬವನ್ನು ಈಗ ಆಚರಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನು ಸಲುಹಿದ ಭೂತಾಯಿ ತಮ್ಮನ್ನೆಂದು ಕೈಬಿಡೋದಿಲ್ಲ ಅನ್ನೋದು ರೈತರ ನಂಬಿಕೆ.  ಹೀಗಾಗಿ ಹಬ್ಬದ ಮೂಲಕ ಭೂಮಿ ತಾಯಿಯನ್ನು ಪೂಜಿಸಿ, ಚರಗ ಚಲ್ಲುವ ಮೂಲಕ ಭೂಮಾತೆಗೆ ಕೃತಜ್ಞತೆ ಸಲ್ಲಿಸಲಾಯಿತು.  ತರಹೇವಾರಿ ಸೊಪ್ಪು, ಕಾಳುಗಳು, ಪಲ್ಯೆ, ಚಟ್ನಿ, ರೊಟ್ಟಿ ತಯಾರಿಸಿ ಮನೆಯ ಮಂದಿಯಲ್ಲ ತಮ್ಮ ಜಮೀನಿನಲ್ಲೆಲ್ಲ ಸಹಭೋಜನ ಮಾಡಿ ಸಂಭ್ರಮಿಸಿದ್ದು ಹಬ್ಬಕ್ಕೆ ಮೆರಗು ತಂದಿತ್ತು.

ಎಳ್ಳ ಅಮವಾಸ್ಯೆ ಹಿನ್ನೆಲೆ ಹೇಳಬೇಕೆಂದರೆ ಮಾಗಿ ಚಳಿಯ ಈ ಸಮಯದಲ್ಲಿ ಭೂಮಿತಾಯಿ ಬೆಳೆ ನೀಡುವ ಸಮಯ.  ಹೀಗಾಗಿ ಭೂತಾಯಿಗೆ ಪೂಜೆ ಮಾಡಿ ಉತ್ತಮ ಫಸಲು ನೀಡುವಂತೆ ಎಳ್ಳ ಅಮವಾಸ್ಯೆ ದಿನ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.  ಇನ್ನು ಕೆಲವರು ರೈತರು ಬೆಳೆದ ತರಕಾರಿ ಹಾಗೂ ಸೊಪ್ಪು ತೆಗೆಯುವ ಈ ಸಂದರ್ಭದಲ್ಲಿ ಮೊದಲು ರಾಶಿ ಅಥವಾ ಕಟಾವು ಮಾಡಿದ ಸೊಪ್ಪನ್ನು ಭೂಮಿ ತಾಯಿಗೆ ಅರ್ಪಿಸುವುದೂ ಈ ಎಳ್ಳ ಅಮವಾಸ್ಯೆಯ ವಾಡಿಕೆಯಾಗಿದೆ.

ಭೂಮಿ ಮತ್ತು ರೈತನ ಸಂಬಂಧ ಮೀನು ಮತ್ತು ನೀರಿನಂತೆ.  ಹೀಗಾಗಿ ವರ್ಷಪೂರ್ತಿ ಅನ್ನ ನೀಡುವ ಭೂಮಿಯನ್ನು ಎಳ್ಳ ಅಮವಾಸೆ ನೆಪದಲ್ಲಿ ಪೂಜಿಸೋದು ವಿಶೇಷವಾಗಿದೆ.  ಇನ್ನು ಎಳ್ಳು ಅಮವಾಸೆ ವೇಳೆಯಲ್ಲಿ ಬರುವ ಮಾಗಿ ಚಳಿಗೆ ಹೊಂದಿಕೆಯಾಗುವಂತಹ ಆಹಾರ ಸಿದ್ಧಪಡಿಸೋದು ಕೂಡ ಈ ಹಬ್ಬದ ವಿಶೇಷವಾಗಿದೆ.  ಆದರೆ, ಕಳೆದ ಕೆಲವು ವರ್ಷಗಳಿಂದ ಬರ ಮತ್ತು ಎರಡು ವರ್ಷಗಳಿಂದ ತಲೆನೋವಾಗಿರುವ ಕೊರೊನಾ ಈ ಹಬ್ಬದ ಸಂಭ್ರಮಕ್ಕೆ ಹಿನ್ನೆಡೆ ಉಂಟು ಮಾಡಿದೆ.  ಆದರೂ, ಕೂಡ ರೈತರು ಹೊಸ ನಿರೀಕ್ಷೆಯೊಂದಿಗೆ ಸರಳವಾಗಿಯಾದರೂ ಈ ಹಬ್ಬವನ್ನು ಆಚರಿಸುವ ಮೂಲಕ ಸಂಪ್ರದಾಯ ಪಾಲಿಸmಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

 

Leave a Reply

ಹೊಸ ಪೋಸ್ಟ್‌