ವಿಜಯಪುರ: ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ದಾಖಲೆ ಪ್ರಮಾಣದ ಸಾಧನೆ ಮಾಡುವ ಮೂಲಕ ಕೊರೊನಾ ವಿರುದ್ಧ ದಿಟ್ಟ ಸಮರ ಸಾರಲಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರ ನಗರದ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಪಿಯು ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲೂಕಾ ಆರೋಗ್ಯ ಇಲಾಖೆ, ಬಾಲಕರ ಸರ್ಕಾರಿ ಪ.ಪೂ ಕಾಲೇಜು ಹಾಗೂ ನಗರ ಪ್ರಾಥಮಿಕ ಆರೋಗ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವದ ಅತಿದೊಡ್ಡ ಉಚಿತ ಲಸಿಕಾ ಆಭಿಯಾನವಾದ 15 ರಿಂದ 18 ವರ್ಷದ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಾಖಲೆ ಪ್ರಮಾಣದಲ್ಲಿ ದೇಶದಲ್ಲಿ ಲಸಿಕಾಕರಣ ಕಾರ್ಯ ಕೈಗೊಳ್ಳಲಾಗಿದ್ದು, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತ ದೇಶವು ಉಚಿತ ಹಾಗೂ ವೇಗವಾಗಿ ಜನರಿಗೆ ಲಸಿಕೆ ನೀಡುವಲ್ಲಿ ಗಣನೀಯ ಪ್ರಮಾಣದ ಸಾಧನೆ ಮಾಡಿದೆ. ಬೇರೆ ದೇಶಗಳಿಂದ ಇಂತಹದೊಂದು ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಲಸಿಕಾಕರಣದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಶೇ. 102 ರಷ್ಟು ಮೊದಲ ಡೋಸ್ ನೀಡಲಾಗಿದ್ದು, ಶೇ. 82 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಅದರಂತೆ ವಿಜಯಪುರ ನಗರ ಪ್ರದೇಶ ವ್ಯಾಪ್ತಿಯಲ್ಲಿಯೂ ಶೇ. 98 ರಷ್ಟು ಲಸಿಕಾಕರಣ ಕೈಗೊಳ್ಳಲಾಗಿದೆ. ಆದಷ್ಟು ಬೇಗನೇ ಶೇ. 100 ರಷ್ಟು ಗುರಿ ಸಾಧಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಸರಕಾರ ಹಾಗೂ ಜಿಲ್ಲಾಡಳಿತ ಕೊರೊನಾ ಮೊದಲ ಹಾಗೂ ಎರಡನೇ ಅಲೆ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಂಭವನೀಯ ಮೂರನೇ ಅಲೆ ಹಾಗೂ ಓಮೇಕ್ರಾನ್ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿಯೂ ಸರ್ವಸನ್ನದ್ಧವಾಗಿದ್ದು, ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಯತ್ನಾಳ ತಿಳಿಸಿದರು.
ಇಂತಹದೊಂದು ದಾಖಲೆ ಪ್ರಮಾಣದ ಲಸಿಕಾಕರಣ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಎಸ್ಪಿ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಅದರಲ್ಲಿಯೂ ಆಶಾ ಕಾರ್ಯಕರ್ತೆಯರು ಕಾರ್ಯ ಶ್ಲಾಘನೀಯವಾಗಿದೆ. ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಮನೆ ಮನೆಗೂ ಹೋಗಿ ಲಸಿಕೆ ನೀಡಿದ ಅವರ ಕಾರ್ಯ ಅತ್ಯಂತ ಪ್ರಶಂಸನೀಯವಾಗಿದೆ. ಇದರಿಂದಾಗಿ ದೇಶ, ರಾಜ್ಯ ಹಾಗೂ ಜಿಲ್ಲೆ ಲಸಿಕಾಕರಣದಲ್ಲಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿಯೂ ದೇಶ ವಿಶ್ವಕ್ಕೆ ಮಾದರಿಯಾಗಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಬ್ಲ್ಯೂ ಎಚ್ ಒ ಪ್ರತಿನಿಧಿ ಮುಕುಂದ ಗಲಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಕಳೆದ ಜನೇವರಿಯಿಂದ ಆರಂಭವಾಗಿದ್ದು, ಕೋವಿಡ್ ಮೊದಲ ಹಾಗೂ ಎರಡನೇ ಅಲೆ ನಿಯಂತ್ರಣ ಹಾಗೂ ಸಂಭವನೀಯ ಮೂರನೇ ಅಲೆ ಮತ್ತು ಓಮೇಕ್ರಾನ್ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಈಗ ರಾಜ್ಯಾದ್ಯಂತ 15 ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ನೀಡಲಾಗುವುದು. ಯಾರೂ ಕೂಡ ಈ ಲಸಿಕೆಯನ್ನು ನಿರ್ಲಕ್ಷಿಸದೇ ಇದರ ಸದುಪಯೋಗ ಪಡೆದುಕೊಳ್ಳಬೇಕು. ಒಂದು ವೇಳೆ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ಪರಿಶೀಲಿಸಿ, ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಕುಮಾರ ಯರಗಲ, ಡಾ. ಈರಣ್ಣ ಧಾರವಾಡಕರ, ಡಾ. ಮಲ್ಲನಗೌಡ ಬಿ. ಬಿರಾದಾರ, ಡಾ. ವಿವೇಕ ಗುಣಾರೆ, ಡಾ. ಕವಿತಾ ದೊಡಮನಿ, ಡಾ. ಮಹೇಶ ನಾಗರಬೆಟ್ಟ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.