ವಿಜಯಪುರ: ಜ. 14 ರ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ. ಈಗಾಗಲೇ ಈ ಕುರಿತು ಹೇಳಿದ್ದೇನೆ. ಜ. 20 ರೊಳಗಾಗಿ ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ಕೊಡುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್ಚು ಕ್ರಿಯಾಶೀಲ ಆಗಿರುವವರನ್ನು ಸಚಿವರನ್ನಾಗಿ ಮಾಡಬೇಕು. ಜ. 8 ಹಾಗೂ 9 ರಂದು ನಡೆಯುವ ಪಕ್ಷದ ಚಿಂತನಾ ಬೈಠಕ್ ನಡೆಯಲಿದೆ. ಅಲ್ಲಿ ಈ ಕುರಿತು ನಿರ್ಣಯ ಆಗಲಿದೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ವಿಜಯಪುರ ಜಿಲ್ಲೆಗೆ ಸೂಕ್ತ ಗೌರವಯುತ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಸಚಿವ ಸ್ಥಾನಕ್ಕಾಗಿ ತಾವು ಹೈಕಮಾಂಡ್ ಭೇಟಿಯಾಗಲ್ಲ. ಪ್ರಧಾನಿ ಹಾಗೂ ರಾಷ್ಟೀಯ ಅಧ್ಯಕ್ಷರ ಬಳಿ ಎಲ್ಲರ ಲೆಕ್ಕಪತ್ರ ಇದೆ. ಅದಕ್ಕೆ ಭೇಟಿಯಾಗಿ ಲಾಭಿ ಮಾಡಲ್ಲ. ಲಾಬಿ ಮಾಡುವ ಅವಶ್ಯಕತೆ ನಮ್ಮ ಪಕ್ಷದಲ್ಲಿ ಇಲ್ಲ. ಯಾರಾರಿಗೆ ಎಷ್ಟು ಅರ್ಹತೆ ಇದೆ ಎಂದು ಕೇಂದ್ರದವರಿಗೆ ಗೊತ್ತಾಗಿದೆ. ಅದರ ಆಧಾರದ ಮೇಲೆ ಸಚಿವ ಸ್ಥಾನ ಸಿಗಲಿದೆ. ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕೊರೊನಾ ಅಶಾಂತಿ ಮೂಡಿಸಲು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತಿದೆ
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ ಕೈಗೊಳ್ಳಲಿರುವ ಪಾದಯಾತ್ರೆಯನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದ ವಿರುದ್ದ ಹರಿಹಾಯ್ದರು.
ವಿಧಾನ ಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದೆ, ಹೋರಾಟ ಎಲ್ಲ ನಾಟಕ. ಕಾಂಗ್ರೆಸ್ ನಾಯಕರು ಫಿಲ್ಮ ಶೂಟಿಂಗ್ ಗೆ ಹೋದಂತೆ ಹೋಗುತ್ತಿದ್ದಾರೆ ಎಂದು ಕೆ ಪಿ ಸಿ ಸಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಎಸ್. ಸಿದ್ದರಾಮಯ್ಯ ವಿರುದ್ದ ಅವರು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಂತೂ ಮನೆಯಲ್ಲಿ ಮೇಕೆದಾಟು ಯೋಜನೆ ಬೋರ್ಡ್ ಹಿಂದೆ ಇಟ್ಟುಕೊಂಡು ನಡೆದುಕೊಂಡು ಹೋದಂತೆ ಫೋಟೋ ಹಾಕಿಕೊಳ್ಳುತ್ತಿದ್ದಾರೆ. ಜನರು ಹುಚ್ಚರಿದ್ದಾರೆಂದು ತಿಳಿದುಕೊಂಡಿದ್ದಾರೆ. ಈಗ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ಬಹಳ ಸ್ಟ್ರಾಂಗ್ ಆಗಿವೆ. ಯಾರು ಏನು ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಆಲಮಟ್ಟಿ ಡ್ಯಾಂ ನಿರ್ಮಾಣಕ್ಕೆ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಇದ್ದಾಗ ರೂ. 1000 ಕೋ. ಮಾತ್ರ ಹಣ ಬೇಕಿತ್ತು. ನಂತರ 50 ವರ್ಷ ಯಾಕೆ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದ ಯತ್ನಾಳ ಅವರು, 2013 ರಲ್ಲಿ ಅಧಿಕಾರಕ್ಕೆ ಬರುವಾಗ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕೃಷ್ಣಾ ಭಾಗ್ಯ ಜಲ ನಿಗಮ ಯೋಜನೆಗೆ ವರ್ಷಕ್ಕೆ ರೂ. 10 ಸಾವಿರ ಕೋ. ನೀಡುವುದಾಗಿ ಭರವಸೆ ನೀಡಿದ್ದರು. ಈ ಕುರಿತು ಕೂಡಲ ಸಂಗಮದಲ್ಲಿ ಆಣೆ ಪ್ರಮಾಣ ಮಾಡಿದ್ದರು. ಆದರೆ, ಕೆ ಬಿ ಜೆ ಎನ್ ಎಲ್ ಗೆ ಎಷ್ಟು ಹಣ ಕೊಟ್ಟಿದ್ದಾರೆ? ಈ ಕುರಿತು ಕಳೆದ ಅಧಿವೇಶನದಲ್ಲಿ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಸದನದಲ್ಲಿ ಉಲ್ಟಾ ಮಾತನಾಡಿದ್ದಾರೆ. ರಾಜ್ಯದಲ್ಲಿನ ಇಡೀ ನೀರಾವರಿ ಯೋಜನೆಗಳಿಹೆ ರೂ. 10 ಸಾವಿರ ಕೋ. ಕೊಡುವುದಾಗಿ ಹೇಳಿದ್ದೇ ಎಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರ ಈ ಎರಡು ಹೇಳಿಕೆಗಳ ಕುರಿತು ನಮ್ಮಲ್ಲಿ ದಾಖಲೆ ಇದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷಕ್ಕೆ ರೂ. 10 ಸಾವಿರ ಕೋ. ಕೊಡುವುದಾಗಿ ಹೇಳಿದ್ದನ್ನೇ ಕೊಟ್ಟಿಲ್ಲ. ಈಗ ಕಾಂಗ್ರೆಸ್ಸಿನವರು ಮಾಡುತ್ತಿರುವುದು ಎಲ್ಲವೂ ಸ್ಟಂಟ್ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಆಗ ನೀರಾವರಿ ಸಚಿವರಾಗಿದ್ದ ಡಿ. ಕೆ. ಶಿವಕುಮಾರ ಅವರು ತಮ್ಮ ಅಧಿಕಾರಾವಧಿಯಲ್ಲಿ ಯಾಕೆ ಮೇಕೆದಾಟು ಯೋಜನೆ ಮಾಡಲಿಲ್ಲ? ಇವರ ತಂತ್ರಗಳನ್ನು ಯಾರು ಕೇಳಲ್ಲ. ಫಿಲಂ ಶೂಟಿಂಗ್ ಮಾಡಿದಂತೆ ನಾಟಕ ನಡೆಸಿದ್ದನ್ನು ನೋಡಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ಕೊರೊನಾ ಮತ್ತೆ ವ್ಯಾಪಕವಾಗಿ ಹರಡುತ್ತಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕೊರೊನಾ ಹರಡೋ ಪ್ರಯತ್ನವೋ? ಸರಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡಿ ರಾಜ್ಯದಲ್ಲಿ ಅಶಾಂತಿ ಮೂಡಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಉಪಸ್ಥಿತರಿದ್ದರು.