ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ರೂ. 1.50 ಲಕ್ಷ ದಂಡ ವಿಧಿಸಿದ ವಿಜಯಪುರ ಪೊಕ್ಸೊ ನ್ಯಾಯಾಲಯ

ವಿಜಯಪುರ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ ಆರೋಪಿಗೆ ವಿಜಯಪುರ ಪೊಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು ರೂ. 1.50 ಲಕ್ಷ ದಂಡ ವಿಧಿಸಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದ ಆರೋಪಿ ಗಣಪತಿ ಭೀಮಾಶಂಕರ ವೀರಶೆಟ್ಟಿ 16.06.2017 ರಂದು 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ತನ್ನ ತೋಟದ ವಸ್ತಿಯಲ್ಲಿ ಸುಮಾರು ಎರಡು ತಿಂಗಳವರೆಗೆ ಇಟ್ಟುಕೊಂಡು ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ವಿಜಯಪುರ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಸವಿತಾ ಕುಮಾರಿ ಎನ್. ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು ರೂ. 1.50 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಘಟನೆಯ ಹಿನ್ನೆಲೆ

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಮತ್ತು ಕರ್ನಾಟಕದ ಗಡಿಯಲ್ಲಿರುವ ಗ್ರಾಮದಲ್ಲಿರುವ ಮಹಿಳೆ ತನ್ನ ಪುತ್ರಿಯನ್ನು ತನ್ನ ಹಿರಿಯ ಮಗಳ ಬಳಿ ಶಾಲೆ ಕಲಿಯಲು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗ್ರಾಮವೊಂದರಲ್ಲಿ ಕಳುಹಿಸಿದ್ದರು.  ಈ ಸಂದರ್ಭದಲ್ಲಿ ಬಾಲಕಿ 10ನೇ ತರಗತಿ ಓದುತ್ತಿದ್ದಳು.  ಅಲ್ಲದೇ, ಇಂಡಿ ತಾಲೂಕಿನ ಮತ್ತೋಂದು ಗ್ರಾಮದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ರಜೆಗೆ ಹೋಗಿ ಬರುತ್ತಿದ್ದಳು. ಈ ಸಂದರ್ಭದಲ್ಲಿ ಪಡನೂರ ಗ್ರಾಮದ ಆರೋಪಿ ಆಗಾಗ ಅಪ್ರಾಪ್ತ ಬಾಲಕಿಯ ಚಿಕ್ಕಮ್ಮನ ಗ್ರಾಮಕ್ಕೆ ಆಗಾಗ ಬಂದು ಹೋಗುತ್ತಿದ್ದ.  ಅಲ್ಲದೇ, ಅಪ್ರಾಪ್ತ ಬಾಲಕಿಯೊಂದಿಗೆ ಪರಿಚಯ ಮಾಡಿಕೊಂಡಿದ್ದ.  ತಾನು ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಮತ್ತು ತನ್ನನ್ನು ಮದುವೆಯಾಗುವಂತೆ 24 ವರ್ಷದ ಆರೋಪಿ ಗಣಪತಿ ಭೀಮಾಶಂಕರ ವೀರಶೆಟ್ಟಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಅಪ್ರಾಪ್ತ ಬಾಲಕಿಯ ಮನೆಯಲ್ಲಿ ಆಕೆಯನ್ನು ಮದುವೆ ಮಾಡಿಸಲು ವರ ಹುಡುಕುತ್ತಿದ್ದರು.  ಆದರೆ, ಅಪ್ರಾಪ್ತ ಬಾಲಕಿ ತಾನು ಇನ್ನೂ ವಿದ್ಯಾಭ್ಯಾಸ ಮುಂದುವರೆಯಬೇಕು.  ತಾನಿನ್ನು ಚಿಕ್ಕವಳಿದ್ದೇನೆ ಎಂದು ಮನೆಯವರಿಗೆ ಹೇಳಿದ್ದಳು.  ಇದೇ ಸಮಯಕ್ಕೆ ತನ್ನನ್ನು ಭೇಟಿಯಾದ ಆರೋಪಿಗೆ ಆಕೆ ತನ್ನ ಮನೆಯವರು ತನಗೆ ವರ ಹುಡುಕುತ್ತಿರುವ ವಿಷಯ ತಿಳಿಸಿದ್ದಳು.  ಆಗ ಆರೋಪಿ ನೀನು ಮನೆಯಲ್ಲಿದ್ದರೆ ನಿನ್ನನ್ನು ಮದುವೆ ಮಾಡಿಸುತ್ತಾರೆ.  ನಿನ್ನನ್ನು ನಾನು ಮದುವೆಯಾಗುತ್ತೇನೆ.  ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮನವೊಲಿಸಿ 16.06.2017 ರಂದು ತನ್ನ ಮೋಟಾರ್ ಸೈಕಲ್ಲಿನ ಹಿಂದೆ ಕೂಡಿಸಿಕೊಂಡು ತನ್ನ ಊರಾದ ಪಡನೂರ ಗ್ರಾಮದಲ್ಲಿರುವ ಅಡವಿ ವಸ್ತಿಯಲ್ಲಿ ಇಟ್ಟ ಎರಡು ತಿಂಗಳ ಕಾಲ ಇಟ್ಟುಕೊಂಡಿದ್ದಾನೆ.  ಅಲ್ಲದೇ, ಈ ಅವಧಿಯಲ್ಲಿ ಅತ್ಯಾಚಾರ ಎಸಗಿದ್ದಾನೆ.

ಅಪ್ರಾಪ್ತ ಬಾಲಕಿಯ ಅಪಹರಣ ದಾಖಲಾದ ತಕ್ಷಣ ಘಟನೆ ನಡೆದ ದಿನ ಅಪ್ರಾಪ್ತ ಬಾಲಕಿಗೆ 18 ವರ್ಷ ವಯಸ್ಸಾಗಿದೆ ಎಂದು ಶಾಲೆಯ ಮುಖ್ಯಾಧ್ಯಾಪಕರ ಮೇಲೆ ಪ್ರಭಾವ ಬೀರಿ ಖೋಟ್ಟಿ ದಾಖಲಾತಿ ತಯಾರಿಸಿದ್ದಾನೆ.  ಅಲ್ಲದೇ, ಶಾಲೆಯ ಮುಖ್ಯಾಧ್ಯಾಪರಕರಿಂದ ತನ್ನ ಪರವಾಗಿ ಸಾಕ್ಷಿ ಕೂಡ ಹೇಳಿಸಿದ್ದಾನೆ.  ಈ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಿದ ವಿಜಯಪುರ ಪೊಕ್ಸೊ ನ್ಯಾಯಾಧೀಶರಾದ ಸವಿತಾ ಕುಮಾರಿ ಎನ್. ಆರೋಪಿಯ ವಿರುದ್ಧ ಪೊಲೀಸರು ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು ರೂ. 1.50 ದಂಡ ವಿಧಿಸಿದ್ದಾರೆ ಎಂದು ವಿಶೇಷ ಸರಕಾರಿ ಅಭಿಯೋಜಕ ವಿ. ಜಿ. ಹಗರಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌