ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ತಡೆಗಟ್ಟಲು ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದಷ್ಟು ಬೇಗನೆ ನಿಗದಿತ ಗುರಿ ತಲುಪಬೇಕು ಎಂದು ಸೂಚನೆ ನೀಡಿದರು.
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕೆಗಳ ಬಗ್ಗೆ ಪೋರ್ಟಲ್‍ನಲ್ಲಿ ಡಾಟಾ ಎಂಟ್ರಿ ಹಾಗೂ ಅಪ್‍ಡೆಟ್ ಮಾಡಬೇಕು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೇರವಾಗಿ ಅವರ ತರಗತಿಗಳಿಗೆ ಹೋಗಿ ಅವರಿಗೆ ಲಸಿಕೆ ನೀಡುವಂಥ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಮೇಲ್ವಿಚಾರಣೆಗಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಯಾರೂ ಲಸಿಕೆಯಿಂದ ವಂಚಿತರಾಗದಿರುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಕೊರೊನಾ 3ನೇ ಅಲೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ನಾನಾ ಗಡಿಭಾಗಗಳ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಮರೋಪಾದಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಬೇಕು. ಗಡಿಭಾಗಗಳಲ್ಲಿ ಟೆಸ್ಟಿಂಗ್, ಸ್ಕ್ರೀನಿಂಗ್ ಕಾರ್ಯಗಳನ್ನು ಅತ್ಯಂತ ಸಮರ್ಪಕವಾಗಿ ಕೈಗೊಂಡು, ಅಂತಾರಾಜ್ಯ ಪ್ರಯಾಣಿಕರ ಮೇಲೂ ವಿಶೇಷ ನಿಗಾ ಇಡಬೇಕು. ಕೊರೊನಾ ಸೋಂಕಿನ ಪ್ರಾಥಮಿಕ ಲಕ್ಷಣಗಳು ಕಂಡು ಬಂದವರ ಅಗತ್ಯ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸ್ವ್ಯಾಬ್ ಟೆಸ್ಟಿಂಗ್ ಮತ್ತು ಇತರ ಕಾರ್ಯಗಳಿಗಾಗಿ ಆರೋಗ್ಯ ಇಲಾಖೆಯು ಅಜಿಂ ಪ್ರೇಮ್‍ಜಿ ಫೌಂಡೇಶಿನ್‍ನಿಂದ ಅಗತ್ಯ ಸಹಕಾರ ಪಡೆದುಕೊಳ್ಳಬೇಕು. ಸ್ವ್ಯಾಬ್ ಟೆಸ್ಟಿಂಗ್‍ನಲ್ಲೂ ನಿಗದಿತ ಗುರಿ ಸಾಧಿಸಬೇಕು. ಈ ಬಗ್ಗೆ ಯಾವುದೇ ದೂರುಗಳು ಬರದಂತೆ ಕ್ರಮ ವಹಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಮ್ಯಾನೇಜ್‍ಮೆಂಟ್‍ನಂತಹ ಕ್ರಮಗಳನ್ನು ಕೈಗೊಂಡು ಆದಷ್ಟು ತಾಲೂಕಾಸ್ಪತ್ರೆಗಳಲ್ಲಿಯೇ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಬೇಕು. ಅಗತ್ಯ ಎನಿಸಿದರೆ ಹಾಗೂ ಸೋಂಕಿತರ ಆರೋಗ್ಯದ ಗಂಭೀರತೆಯನ್ನು ಪರಿಶೀಲಿಸಿದ ನಂತರವಷ್ಟೇ ಅಲ್ಲಿನ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು. ಕೊರೊನಾ 3ನೇ ಅಲೆ ತಡೆಯಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸರ್ವ ರೀತಿಯಲ್ಲೂ ಸನ್ನದ್ಧರಾಗಿ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಪಿ. ಸುನೀಲ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್ಪಿ ಎಚ್. ಡಿ. ಆನಂದ ಕುಮಾರ ಮಾತನಾಡಿ, ಕೊರೊನಾ 3ನೇ ಅಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ನಾನಾ ಗಡಿ ಭಾಗಗಳ ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯ ನಿರ್ವಹಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿ, ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರಡ್ಡಿ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಕುಮಾರ ಯರಗಲ, ಡಾ. ಮಹೇಶ ನಾಗರಬೆಟ್ಟ, ಡಾ. ಕವಿತಾ ದೊಡಮನಿ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.