ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದ ಪಂಜಾಬ್ ಸರಕಾರಕ್ಕೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ. ಹೀಗಾಗಿ ಪಂಜಾಬ ಸರಕಾರವನ್ನು ಕೂಡಲೇ ಬರಖಾಸ್ತು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ರಕ್ಷಣೆ ನೀಡುವಲ್ಲಿ ಭದ್ರತಾ ಲೋಪವಾಗಿರುವ ಕುರಿತು ಸುದ್ದಿದಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಪಂಜಾಬ ಗಡಿಯಲ್ಲಿ ಅಲ್ಲಿನ ಸರಕಾರ ಪ್ರಧಾನ ಮಂತ್ರಿಗಳಿಗೆ ಭದ್ರತೆ ಕೊಡಲು ವಿಫಲವಾಗಿದೆ. ದೇಶದ ಪ್ರಧಾನ ಮಂತ್ರಿಗಳು ಮುಕ್ತವಾಗಿ ಓಡಾಡಲು ವ್ಯವಸ್ಥೆಗಳನ್ನು ಮಾಡಿಕೊಡದೇ ಇರುವುದಕ್ಕೆ ದೇಶದಲ್ಲಿ ತೀವ್ರವಾಗಿ ಖಂಡನೆ ವ್ಯಕ್ತವಾಗುತ್ತಿದೆ. ಇದೊಂದು ಖಂಡಾನಾರ್ಹ ವಿಚಾರ. ಪ್ರಧಾನ ಮಂತ್ರಿಗಳಿಗೆ ಗೌರವ ಕೊಡುವುದು ಎಲ್ಲ ಸರಕಾರಗಳ ಕರ್ತವ್ಯ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.